ಗೋಕರ್ಣದಲ್ಲಿ ರಷ್ಯಾ ಜೋಡಿ ಮದುವೆ
ಗೋಕರ್ಣ: ರಷ್ಯಾ ದೇಶದ ಜೋಡಿಯೊಂದು ಭಾರತೀಯ ಸಂಪ್ರದಾಯದಂತೆ ಇಲ್ಲಿನ ಮಹಾಗಣಪತಿ ದೇವರ ಮುಂದೆ ಮಂಗಳವಾರ ಸರಳವಾಗಿ ವಿವಾಹವಾಗಿದ್ದಾರೆ.
ರಷ್ಯಾ ಪ್ರವಾಸಿಗರಾದ ಯೋಹಾನೆ ಹಾಗೂ ದಲ್ವೀರಾ ಅವರ ವಿವಾಹ ಮಂಗಳವಾರ ಮಧ್ಯಾಹ್ನ ಇಲ್ಲಿನ ಅರ್ಚಕರಾದ ಅನಂತ ಅಡಿಯವರ ನೇತೃತ್ವದಲ್ಲಿ ಗಣಪತಿ ದೇವಸ್ಥಾನದ ಆವರಣದಲ್ಲಿ ನಡೆಯಿತು.
ಗೋಕರ್ಣಕ್ಕೆ ಹತ್ತಾರು ಬಾರಿ ಆಗಮಿಸಿದ ಯೋಹಾನೆ ಇಲ್ಲಿನ ಭಾಷೆ, ಸಂಸ್ಕೃತಿ, ಅಧ್ಯಾತ್ಮದ ಬಗ್ಗೆ ಸಾಕಷ್ಟು ಅರಿತಿದ್ದಾರೆ. ಹಿಂದಿಯನ್ನು ಸುಲಲಿತವಾಗಿ ಬರೆಯಬಲ್ಲರು. ಗಣೇಶ ಅವರ ಆರಾಧ್ಯ ದೈವ. ಅವರ ಆಸೆಯಂತೆ ಅರ್ಚಕರು ವಿವಾಹ ಮಹೋತ್ಸವ ನೆರವೇರಿಸಿದರು. ಮದುವೆ ಬಳಿಕ ಫಲ-ತಾಂಬೂಲಗಳೊಂದಿಗೆ ಮಹಾಗಣಪತಿಗೆ ಪೂಜೆ ಸಲ್ಲಿಸಿದ ಈ ದಂಪತಿ, ರಥಬೀದಿಯಲ್ಲಿ ಸಾಗಿದ ಭಕ್ತರೆಲ್ಲರಿಗೂ ಸಿಹಿ ಹಂಚಿ, ಸಂಭ್ರಮಿಸಿದರು. ಅರ್ಚಕರ ಮನೆಯಲ್ಲಿ ವಿಶೇಷ ಭೋಜನ ಕೂಟ ಏರ್ಪಡಿಸಲಾಗಿತ್ತು.