ಕೊನೆಗೂ ತಟ್ಟಿತು ವರ್ಗಾವಣೆ ಬಿಸಿ; 82 ತಹಸೀಲ್ದಾರರ ವರ್ಗ
ಮಂಗಳೂರು: ಲೋಕಸಭೆ ಚುನಾವಣೆ ಘೋಷಣೆಯಾಗಿ ಬಹಳ ದಿನಗಳ ಬಳಿಕ ವಿಳಂಬವಾಗಿ ರಾಜ್ಯ ಸರ್ಕಾರ 82 ಮಂದಿ ತಹಸೀಲ್ದಾರರನ್ನು ವರ್ಗಾವಣೆ ಮಾಡಿದೆ.
ಒಂದೇ ಜಿಲ್ಲೆಯಲ್ಲಿ ಮೂರು ವರ್ಷ ಇದ್ದವರನ್ನು ಬೇರೆ ಬೇರೆ ಜಿಲ್ಲೆಗೆ ವರ್ಗಾವಣೆ ಮಾಡಿ ಮಂಗಳವಾರ ಆದೇಶ ಹೊರಡಿಸಿದೆ. ಒಂದು ತಿಂಗಳ ಹಿಂದೆ 47 ಮಂದಿ ಗ್ರೇಡ್-1 ತಹಸೀಲ್ದಾರರನ್ನು ವರ್ಗಾಯಿಸಲಾಗಿತ್ತು. ಈಗ ಚುನಾವಣೆ ಪ್ರಕ್ರಿಯೆ ನಡೆಯುತ್ತಿರುವಾಗಲೇ ವರ್ಗಾವಣೆ ಆದೇಶ ಹೊರಡಿಸಲಾಗಿದೆ. ವರ್ಗಾವಣೆ ಆದೇಶ ಕೈಸೇರಿದ 24 ಗಂಟೆಯೊಳಗೆ ವರ್ಗಾವಣೆಯಾದ ಜಾಗದಲ್ಲಿ ಕರ್ತವ್ಯಕ್ಕೆ ಹಾಜರಾಗಬೇಕು. ತಪ್ಪಿದಲ್ಲಿ ಶಿಸ್ತು ಕ್ರಮ ಜರುಗಿಸುವ ಎಚ್ಚರಿಕೆಯನ್ನು ಆದೇಶದಲ್ಲಿ ನೀಡಲಾಗಿದೆ. ಮಂಗಳೂರು ತಾಲೂಕು ತಹಸೀಲ್ದಾರ್ ಮೋಹನ ರಾವ್ರನ್ನು ಉಡುಪಿಗೆ, ಉಡುಪಿ ತಹಸೀಲ್ದಾರ್ ಟಿ.ಜಿ.ಗುರುಪ್ರಸಾದ್ರನ್ನು ಮಂಗಳೂರಿಗೆ ವರ್ಗಾಯಿಸಲಾಗಿದೆ. ಜಿಲ್ಲಾ ಚುನಾವಣೆ ಶಾಖೆಯ ತಹಸೀಲ್ದಾರ್ ನಿರ್ಮಲಾದೇವಿಯನ್ನು ಡಯೆಟ್ ಉಪ ಪ್ರಾಂಶುಪಾಲರಾಗಿ ವರ್ಗಾಯಿಸಲಾಗಿದೆ.