ಅಂತು ಮಾಸಾಶನ ಬಂತು!
ಮಂಗಳೂರು: ತಂದೆ ಬ್ಯಾಂಕಿನಲ್ಲಿ ಗುಮಾಸ್ತನಾದ ತಪ್ಪಿಗೆ ಎಂಡೋ ಸಂತ್ರಸ್ತ ಪುತ್ರಿಗೆ ಮಾಸಾಶನ ನಿರಾಕರಿಸಿದ್ದನ್ನು ಕಂದಾಯ ಅಧಿಕಾರಿಗಳು ಹಿಂದಕ್ಕೆ ಪಡೆದಿದ್ದಾರೆ. ಪುತ್ತೂರಿನ ಒಳಮೊಗ್ರು ಗ್ರಾಮದ ಅಜ್ಜಿಕಲ್ಲು ನಿವಾಸಿ ಲಕ್ಷ್ಮಣ ನಾಯ್ಕ ಖಾಸಗಿ ಬ್ಯಾಂಕಿನಲ್ಲಿ ಗುಮಾಸ್ತ. ಅವರ 11 ವರ್ಷದ ಪುತ್ರಿ ಶೇ.80 ವಿಕಲಜೇತನೆ, ಎಂಡೋ ಸಂತ್ರಸ್ತೆ. ಆದರೆ, ತಂದೆ ಗುಮಾಸ್ತ ಎನ್ನುವ ಕಾರಣವೊಡ್ಡಿ ಕಂದಾಯ ಇಲಾಖೆ ಮಾಸಾಶನ ನೀಡಲು ನಿರಾಕರಿಸಿತ್ತು. ಈ ಬಗ್ಗೆ 2013 ಡಿ.10ರಂದು 'ಕನ್ನಡಪ್ರಭ'ದಲ್ಲಿ 'ಗುಮಾಸ್ತನಾದ್ದೇ ತಪ್ತಾಯ್ತು, ಮಾಸಾಶನಕ್ಕೆ ಕೊಳ್ಳಿ' ಶೀರ್ಷಿಕೆಯಲ್ಲಿ ವಿಶೇಷ ವರದಿ ಪ್ರಕಟವಾಗಿತ್ತು. ಆ ಬಳಿಕ ಲಕ್ಷ್ಮಣ ನಾಯ್ಕರನ್ನು ಕರೆದು ವಿಚಾರಿಸಿದ ಪುತ್ತೂರಿನ ಕಂದಾಯ ಅಧಿಕಾರಿಗಳು ಮಾಸಾಶನ ನೀಡುವ ಭರವಸೆ ನೀಡಿದ್ದರು. ಈ ಬಗ್ಗೆ ವಿಶೇಷ ವರದಿ ಮಾಡಿದ 'ಕನ್ನಡಪ್ರಭ' ಸಹಕಾರಕ್ಕೆ ಲಕ್ಷ್ಮಣ ನಾಯ್ಕ ಕೃತಜ್ಞತೆ ವ್ಯಕ್ತಪಡಿಸಿದ್ದಾರೆ.