ಅಪಘಾತ: ನಾಲ್ವರಿಗೆ ಗಾಯ
ಪುತ್ತೂರು: ಬೈಕ್‌ಗಳೆರಡು ಮುಖಾಮುಖಿ ಡಿಕ್ಕಿಯಾದ ಪರಿಣಾಮ ನಾಲ್ವರು ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ತಾಲೂಕಿನ ಆರ್ಯಾಪು ಗ್ರಾಮದ ಕುಂಜೂರುಪಂಜ ಎಂಬಲ್ಲಿ ನಡೆದಿದೆ. ಕುಂಜೂರು ಪಂಜ ಶಾಲಾ ಬಳಿ ನಡೆದ ಘಟನೆಯಲ್ಲಿ ಪುತ್ತೂರಿನಿಂದ ಸಾಜ ಕಡೆಗೆ ತೆರಳುತ್ತಿದ್ದ ಬೈಕ್ ಮತ್ತು ಎದುರಿನಿಂದ ಆಗಮಿಸುತ್ತಿದ್ದ ಬೈಕ್ ಪರಸ್ಪರ ಡಿಕ್ಕಿ ಹೊಡೆದಿದೆ. ಪರಿಣಾಮ ಬೈಕ್ ಸವಾರ ಪತ್ರಿಕೆ ವಿತರಕ ಬಲ್ನಾಡು ಗ್ರಾಮದ ಸಾಜ ನಿವಾಸಿ ಈಶ್ವರ ನಾಯ್ಕ ಎಂಬವರ ಪುತ್ರ ಶ್ರೀನಿವಾಸ ನಾಯ್ಕ(43), ಸಹಸವಾರರಾಗಿದ್ದ ಸಾಜ ನಿವಾಸಿ ಮಾಂಕು ಎಂಬವರ ಪುತ್ರ ಸುಂದರ(30) ಮತ್ತು ಕಾಡ್ಲ ನಿವಾಸಿ ಮುತ್ತು ಪೂಜಾರಿ ಎಂಬವರ ಪುತ್ರ ಪುರಂದರ ಪೂಜಾರಿ(30) ಹಾಗೂ ಇನ್ನೊಂದು ಬೈಕ್ ಸವಾರ ಆರ್ಯಾಪು ಗ್ರಾಮದ ಬಂಗಾರಡ್ಕ ನಿವಾಸಿ ಕುಂಞ ನಾಯ್ಕ ಎಂಬವರ ಪುತ್ರ ರಾಧಾಕೃಷ್ಣ(26) ಗಾಯಗೊಂಡಿದ್ದಾರೆ. ಗಂಭೀರ ಗಾಯಗೊಂಡಿರುವ ರಾಧಾಕೃಷ್ಣ, ಶ್ರೀನಿವಾಸ, ಸುಂದರ ಅವರನ್ನು ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ. ಪುರಂದರ ಅವರನ್ನು ಪುತೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಂಪ್ಯ ಪೊಲೀಸರು ಕೇಸು ದಾಖಲಿಸಿದ್ದಾರೆ.
ಬಸ್-ಬೈಕ್ ಡಿಕ್ಕಿ: ಸವಾರ ಗಾಯ
ಉಪ್ಪಿನಂಗಡಿ: ಇಲ್ಲಿನ ಕುಮಾರಾಧಾರ ಸೇತುವೆ ಬಳಿ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಮತ್ತು ಬೈಕ್ ನಡುವೆ ಡಿಕ್ಕಿ ಸಂಭವಿಸಿ ಬೈಕ್ ಸವಾರ ಮುಸ್ತಾಫ ಗಾಯಗೊಂಡ ಘಟನೆ ಶುಕ್ರವಾರ ನಡೆದಿದೆ. ಗಾಯಾಳು ಬೈಕ್ ಸವಾರನನ್ನು ಆಲಂಕಾರು ಗ್ರಾಮದ ಪೆರಾಬೆ ನಿವಾಸಿ ಎಂದು ಗುರುತಿಸಲಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಬಸ್ ಮಂಗಳೂರಿನಿಂದ ಬೆಂಗಳೂರಿಗೆ ಸಂಚರಿಸುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಪುತ್ತೂರು ಟ್ರಾಫಿಕ್ ಠಾಣೆಯಲ್ಲಿ ಕೇಸು ದಾಖಲಾಗಿದೆ.