ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಇನ್‌ಸ್ಪೆಕ್ಟರ್ ವಿರುದ್ಧ ಜಾತಿನಿಂದನೆ ಕೇಸು ದಾಖಲಿಸಲು ಆಗ್ರಹ

Mainashree
Updated On : 31 Mar 2014, 12:18 pm

ಮಂಗಳೂರು: ದಲಿತರ ದೂರುಗಳನ್ನು ಕಡೆಗಣಿಸುತ್ತಿರುವ ಪಾಂಡೇಶ್ವರ ಠಾಣೆ ಇನ್‌ಸ್ಪೆಕ್ಟರ್ ವಿರುದ್ಧ ಜಾತಿನಿಂದನೆ ದೂರು ದಾಖಲಿಸುವಂತೆ ದಲಿತ ಮುಖಂಡ ಎಸ್.ಪಿ. ಆನಂದ್ ಆಗ್ರಹಿಸಿದ್ದಾರೆ.
ಭಾನುವಾರ ನಗರ ಪೊಲೀಸ್ ಕಮಿಶನರ್ ಕಚೇರಿಯಲ್ಲಿ ನಡೆದ ಪರಿಶಿಷ್ಟ ಜಾತಿ ಪಂಗಡಗಳ ಕುಂದುಕೊರತೆ ಸಭೆಯಲ್ಲಿ ಅವರು ಮಾತನಾಡಿದರು.
ಮೆಸ್ಕಾಂ ನಿರ್ಲಕ್ಷದಿಂದ ಪಾಂಡೇಶ್ವರ ಫುಟ್‌ಪಾತ್‌ನಲ್ಲಿ ಜ. 27 ರಂದು ಚರ್ಮ ಕುಟೀರ ಅಂಗಡಿಗೆ ಶಾರ್ಟ್ ಸರ್ಕ್ಯೂಟ್ ಸಂಭವಿಸಿ ಚೆಲುವರಾಯ ಸ್ವಾಮಿ ನಷ್ಟ ಅನುಭವಿಸಿದ್ದರು. ಈ ಕುರಿತು ಪಾಂಡೇಶ್ವರ ಠಾಣೆಯಲ್ಲಿ ದೂರು ದಾಖಲಿಸಿ ತಿಂಗಳಾದರೂ ಇನ್‌ಸ್ಪೆಕ್ಟರ್ ಕ್ರಮ ಕೈಗೊಂಡಿರಲಿಲ್ಲ. ಹಣಕ್ಕಾಗಿ ಕೇಸು ಹಾಕುತ್ತೀರಾ ಎಂದು ದೂರು ಸಲ್ಲಿಸಿದವರ ವಿರುದ್ಧವೇ ದೌರ್ಜನ್ಯವೆಸಗಿದ್ದಾರೆ ಎಂದು ದೂರಿದರು.
ಇದಕ್ಕೆ ಪ್ರತಿಕ್ರಿಯಿಸಿದ ಪೊಲೀಸ್ ಕಮಿಷನರ್ ಹಿತೇಂದ್ರ, ಎರಡು ಅಂಶಗಳ ಕುರಿತು ಪರಿಶೀಲನೆ ನಡೆಸಿ, ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.
ಅತ್ತಾವರ ಪರಿಸರದ ನಿವಾಸಿ ಮಹಿಳೆಯರಿಬ್ಬರಿಗೆ ಜಾಗದ ವಿಷಯದಲ್ಲಿ ನೆರೆಹೊರೆಯ ಇಬ್ಬರು ವ್ಯಕ್ತಿಗಳು ದಿನನಿತ್ಯ ಮಾನಸಿಕ ಹಿಂಸೆ, ಅವ್ಯಾಚ್ಯ ಬೈಗುಳ, ದೈಹಿಕ ಹಿಂಸೆ ನೀಡುತ್ತಿದ್ದಾರೆ. ಈ ಕುರಿತು ದೂರು ಸಲ್ಲಿಸಿದರೂ, ಕ್ರಮ ಕೈಗೊಂಡಿಲ್ಲ ಎಂದು ಹೇಳಿದರು.
ಫೆ. 16 ರಂದು ದಲಿತ ಕಾಲೋನಿಯಲ್ಲಿ ನಡೆಯುತ್ತಿದ್ದ ವಾರ್ಷಿಕೋತ್ಸವ ಕಾರ್ಯಕ್ರಮಕ್ಕೆ ಪಾಂಡೇಶ್ವರ ಎಎಸ್‌ಐ ಶ್ರೀಕಲಾ ಮತ್ತು 6 ಮಂದಿ ಸಿಬ್ಬಂದಿ ನೇರವಾಗಿ ವೇದಿಕೆಗೆ ಬಂದು ಕಾರ್ಯಕ್ರಮ ನಿಲ್ಲಿಸುವಂತೆ ಅವಾಚ್ಯವಾಗಿ ಬೈದಿದ್ದಾರೆ. ಪಾಂಡೇಶ್ವರ ಠಾಣೆಯಲ್ಲಿ ಅನುಮತಿ ಪಡೆದು ಕಾರ್ಯಕ್ರಮ ಆಯೋಜಿಸಲಾಗಿತ್ತು. ಬಡವರಿಗೊಂದು, ಶ್ರೀಮಂತರಿಗೊಂದು ನಿಯಮವಾ? ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ಪೊಲೀಸ್ ಕಮಿಷನರ್, ಅನುಮತಿ ಪತ್ರದ ಪ್ರತಿ ಕೊಡಿ, ಇದರಲ್ಲಿ ಯಾವುದೇ ಲೋಪದೋಷ ಕಂಡುಬರದಿದ್ದಲ್ಲಿ ಕ್ರಮ ಕೈಗೊಳ್ಳುಲಾಗುವುದು ಎಂದರು.
ಪಣಂಬೂರು, ಮೂಲ್ಕಿ ವ್ಯಾಪ್ತಿಯ ಠಾಣೆಯಲ್ಲಿ ದಾಖಲಾಗುವ ಪ್ರಕರಣಗಳಿಗೆ ಹೆಚ್ಚಾಗಿ 'ಬಿ' ರಿಪೋರ್ಟ್ ನೀಡಲಾಗುತ್ತದೆ. ಸೂಕ್ತ ಸಾಕ್ಷಿ ಒದಗಿಸಿದರೂ 'ಬಿ' ರಿಪೋರ್ಟ್ ಹಾಕಲಾಗುತ್ತದೆ. ಈ ಕುರಿತು ಪ್ರಶ್ನಿಸಿದರೆ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಿ ಎನ್ನುತ್ತಾರೆ ಎಂದರು.
'ಬಿ' ರಿಪೋರ್ಟ್ ಹಾಕಿದರೂ ಮತ್ತೊಂದು ಬಾರಿ ತನಿಖೆ ನಡೆಸಲು ಅವಕಾಶವಿದೆ. ಇಂಥ ಪ್ರಕರಣಗಳಿದ್ದಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಕಮಿಷನರ್ ಹಿತೇಂದ್ರ ಹೇಳಿದರು.
ಡಿಸಿಪಿ ವಿಷ್ಣುವರ್ಧನ್, ಕೆ.ವಿ. ಜಗದೀಶ್, ಶಿವಣ್ಣ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement