ನಾಳೆ ಕಲಾಂ ಸಂವಾದ
ಮಂಗಳೂರು: ಮತದಾನಕ್ಕೆ ಅರಿವು ಮೂಡಿಸಲು ಮಾಜಿ ರಾಷ್ಟ್ರಪತಿ ಡಾ.ಎ.ಪಿ.ಜೆ.ಅಬ್ದುಲ್ ಕಲಾಂ ಏ.1ರಂದು ಮಂಗಳೂರಿನಲ್ಲಿ ಮತದಾನ ಜಾಗೃತಿ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳ ಜತೆ ಸಂವಾದ ನಡೆಸಲಿದ್ದಾರೆ.
ಸಂಜೆ 4.30ಕ್ಕೆ ನಗರದ ಟಿಎಂಎ ಪೈ ಅಂತಾರಾಷ್ಟ್ರೀಯ ಸಭಾಂಗಣದಲ್ಲಿ 50 ನಿಮಿಷ ಕಾಲ ಸಂವಾದದಲ್ಲಿ ಪಾಲ್ಗೊಳ್ಳುವರು. ಈ ಕಾರ್ಯಕ್ರಮಕ್ಕೆ ಮತದಾನಕ್ಕೆ ಅರ್ಹತೆ ಪಡೆದಿರುವ ವಿದ್ಯಾರ್ಥಿಗಳು ಆಗಮಿಸಬಹುದು. ವಿದ್ಯಾರ್ಥಿಗಳು ತಮ್ಮೊಂದಿಗೆ ಗುರುತು ಪತ್ರ ತರಬೇಕಿದ್ದು, 4 ಗಂಟೆಗೆ ಸಭಾಂಗಣದಲ್ಲಿ ಉಪಸ್ಥಿತರಿರಬೇಕು ಎಂದು ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ಭಾನುವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ. ಮತದಾನದಲ್ಲಿ ವಿದ್ಯಾರ್ಥಿಗಳ ಪಾತ್ರ ವಿಚಾರದಲ್ಲಿ ಸಂವಾದಕ್ಕೆ ಅವಕಾಶವಿದೆ. ಬೇರಾವುದೇ ವಿಚಾರದಲ್ಲಿ ಸಂವಾದಕ್ಕೆ ಆಸ್ಪದವಿಲ್ಲ. ಸಂವಾದ ನಡೆಸುವವರು ಮೊದಲೇ ಪ್ರವೇಶ ದ್ವಾರದಲ್ಲಿ ಹೆಸರು ನೋಂದಾಯಿಸಬೇಕು. ಮೆಡಿಕಲ್, ಪ್ಯಾರಾ ಮೆಡಿಕಲ್, ಎಂಜಿನಿಯರಿಂಗ್ ಹಾಗೂ ಪದವಿ ವಿದ್ಯಾರ್ಥಿಗಳಿಗೆ ಭಾಗವಹಿಸಲು ಅವಕಾಶವಿದೆ ಎಂದು ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ತುಳಸಿ ಮದ್ದಿನೇನಿ ಹೇಳಿದರು.
ಬ್ಯಾಲೆಟ್ ಪೇಪರ್ ಸಿದ್ಧ: ಏ.17ರಂದು ನಡೆಯುವ ಲೋಕಸಭೆ ಚುನಾವಣೆಗೆ ಬ್ಯಾಲೆಟ್ ಪೇಪರ್ ಸಿದ್ಧಗೊಡಿದೆ. ಸೇವಾ ಮತದಾರರಿಗೆ ತಕ್ಷಣವೇ ಕಳುಹಿಸಲು ಏರ್ಪಾಟು ಮಾಡಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಎ.ಬಿ.ಇಬ್ರಾಹಿಂ ಹೇಳಿದರು. ಮತದಾನ ದಿನ ಮತಗಟ್ಟೆ ಅಧಿಕಾರಿ, ಮತದಾರ, ಅಶಕ್ತ ಮತದಾರನ ಸಹಾಯಕ, ಚುನಾವಣಾ ಏಜೆಂಟ್, ಮತಗಟ್ಟೆ ಏಜೆಂಟ್, ಆಯೋಗದ ಸಿಬ್ಬಂದಿ/ಅಧಿಕಾರಿ, ಮಗುಸಹಿತ ಬರುವವರಿಗೆ ಮತಗಟ್ಟೆ ಪ್ರವೇಶಕ್ಕೆ ಅವಕಾಶವಿದೆ. ವ್ಯಕ್ತಿಯ ಭದ್ರತಾ ಸಿಬ್ಬಂದಿ ಕೂಡ ಒಳಪ್ರವೇಶಿಸುವಂತಿಲ್ಲ ಎಂದರು. ಈವರೆಗೆ 38 ನೀತಿಸಂಹಿತೆ ಉಲ್ಲಂಘನೆ ದೂರು ದಾಖಲಾಗಿದೆ. ಶನಿವಾರ ರಾತ್ರಿ ನರಿಂಗಾನದಲ್ಲಿ 26 ಲೀಟರ್ ಅಕ್ರಮ ಲಿಕ್ಕರ್ ದಾಸ್ತಾನು ವಶಪಡಿಸಲಾಗಿದೆ. ನೀತಿಸಂಹಿತೆ ಉಲ್ಲಂಘನೆಯಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಅಭ್ಯರ್ಥಿಗಳ ವಿರುದ್ಧ ತಲಾ 3 ಕೇಸ್ ಸಹಿತ ಒಟ್ಟು 11 ಪ್ರಕರಣ ದಾಖಲಿಸಲಾಗಿದೆ ಎಂದರು. ಏ.9ರಿಂದ 17ರ ವರೆಗೆ ಚುನಾವಣೆ ಹಿನ್ನೆಲೆಯಲ್ಲಿ ಪಿಯುಸಿ ಪರೀಕ್ಷೆ ಪತ್ರಿಕೆ ಮೌಲ್ಯಮಾಪನ ಇರುವುದಿಲ್ಲ ಎಂದು ಹೇಳಿದರು.