ಪಕ್ಷೇತರ ಸ್ಪರ್ಧೆಯಲ್ಲೇ ಆನಂದ 'ಗಟ್ಟಿ'
ಮಂಗಳೂರು: ವಿಧಾನಸಭೆಗೆ ಹಾಗೂ ಲೋಕಸಭೆಗೆ ಸ್ವತಂತ್ರ/ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾರೆ. ಎರಡು ಬಾರಿಯೂ ಇಡುಗಂಟು ಕಳಕೊಂಡಿದ್ದಾರೆ. ಇಷ್ಟಾದರೂ ಸ್ಪರ್ಧಿಸುವ ಛಲ ಬಿಟ್ಟಿಲ್ಲ, ಈ ಬಾರಿ ಮತ್ತೆ ಲೋಕಸಭೆಗೆ ಸ್ವತಂತ್ರ ಅಭ್ಯರ್ಥಿ.
ಸಾಮಾನ್ಯವಾಗಿ ಠೇವಣಿ ಕಳಕೊಳ್ಳುವ ಪಕ್ಷೇತರ ಅಭ್ಯರ್ಥಿಗಳು ಮತ್ತೊಮ್ಮೆ ಸ್ಪರ್ಧಿಸುವ ಮನ ಮಾಡುವುದಿಲ್ಲ. ಮುಂದಿನ ಚುನಾವಣೆಯಲ್ಲಿ ಅಂಥವರ ಅಡ್ರಸ್ಸು ಇರುವುದಿಲ್ಲ. ಹಾಗಿರುವಲ್ಲಿ ಇಲ್ಲೊಬ್ಬರು 'ಜಿಲ್ಲೆಯ ಹಿತ ಕಾಪಾಡುವ ಸಲುವಾಗಿ ಸ್ಪರ್ಧಿಸುತ್ತಿದ್ದೇನೆ' ಎನ್ನುತ್ತಿದ್ದಾರೆ. ಅವರೇ ದ.ಕ. ಲೋಕಸಭೆ ಕ್ಷೇತ್ರದಿಂದ ಕಣಕ್ಕಿಳಿದಿರುವ ಆನಂದ ಗಟ್ಟಿ.
ಸ್ವತಂತ್ರ ಅಭ್ಯರ್ಥಿಯಾಗಿ ಈ ಮೊದಲು ಕಣಕ್ಕಿಳಿದಿದ್ದಾರೆ. ನಾಮಪತ್ರದಲ್ಲಿ ಹೆಸರಿನ ಮೊದಲು ವಿಧಾನಸಭೆ ಚುನಾವಣೆಯಲ್ಲಿ ಬರೇ ಆನಂದ ಗಟ್ಟಿ ಎಂದಿದ್ದರೆ, ಕಳೆದ ಲೋಕಸಭೆ ಚುನಾವಣೆಯಲ್ಲಿ ವಿಚಾರವಾದಿ ಆನಂದ ಗಟ್ಟಿ ಆಗಿದ್ದರು. ಈ ಬಾರಿ ಅಡ್ವಕೇಟ್ ಆನಂದ ಗಟ್ಟಿ ಎಂದು ಹೆಸರು ನೀಡಿದ್ದಾರಂತೆ.
ಇಡುಗಂಟು ಕಳಕೊಂಡ್ರು: ಸರ್ಕಾರಿ ಅಧಿಕಾರಿಯಾಗಿ ಐಟಿಐನಲ್ಲಿ 37 ವರ್ಷ ಕರ್ತವ್ಯ ನಿರ್ವಹಿಸಿದ್ದ ಆನಂದ ಗಟ್ಟಿ 2008ರಿಂದ ವಕೀಲ ವೃತ್ತಿಯಲ್ಲಿ ತೊಡಗಿಸಿಕೊಂಡರು. 2008ರ ವಿಧಾನಸಭೆ ಚುನಾವಣೆಯಲ್ಲಿ ಮಂಗಳೂರು ಉತ್ತರ ಕ್ಷೇತ್ರದಿಂದ ಪಕ್ಷೇತರನಾಗಿ ಕಣಕ್ಕಿಳಿದರು. ಆಗ ಪಡೆದ ಮತ ಬರೇ 1642. ಠೇವಣಿ ಕಳಕೊಂಡರೂ ಹಿಂಜರಿಯದ ಆನಂದ ಗಟ್ಟಿ 2009ರಲ್ಲಿ ಸಂಸತ್ ಚುನಾವಣೆಯಲ್ಲಿ ಮತ್ತೆ ಪಕ್ಷೇತರನಾಗಿ ನಾಮಪತ್ರ ಸಲ್ಲಿಸಿದರು. ಆಗ ಪಡೆದ ಮತ ಕೇವಲ 2373. ಇಡುಗಂಟು ಕಳಕೊಂಡರೂ ಮತ್ತೆ ಸ್ಪರ್ಧಿಸುವ ಖಯಾಲಿ ಬಿಟ್ಟಿಲ್ಲ. ಚಿಹ್ನೆಯಾಗಿ ಗ್ಯಾಸ್ ಸಿಲಿಂಡರ್ ನೆಚ್ಚಿಕೊಂಡಿದ್ದಾರೆ. ಈಗ ಎರಡನೇ ಬಾರಿ ಲೋಕಸಭೆಗೆ ಪಕ್ಷೇತರನಾಗಿ ಸ್ಪರ್ಧಿಸುತ್ತಿದ್ದಾರೆ.
ಗೆದ್ದವರು ನಿರ್ಲಕ್ಷ ಮಾಡಿದ್ದಾರೆ: ಠೇವಣಿ ಕಳಕೊಂಡು ಯಾಕಾಗಿ ಸ್ಪರ್ಧಿಸುವ ಉಸಾಬರಿ ಎಂದು ಪ್ರಶ್ನಿಸಿದರೆ, 'ಈವರೆಗೆ ಗೆದ್ದವರು ಜಿಲ್ಲೆಯ ಅಭಿವೃದ್ಧಿ ನಿರ್ಲಕ್ಷಿಸಿದ್ದಾರೆ. ಜಿಲ್ಲೆಯಲ್ಲಿ ಬೃಹತ್ ಕೈಗಾರಿಕೆ ಡಂಪ್ ಮಾಡುತ್ತಿದ್ದಾರೆ. ಇದನ್ನು ವಿರೋಧಿಸಲು ಸ್ಪರ್ಧಿಸುತ್ತಿದ್ದೇನೆ. ನಿರುದ್ಯೋಗಿ ವಿದ್ಯಾವಂತರಿಗೆ ಮಾಸಿಕ ರು. 500 ಭತ್ಯೆ ನೀಡುವುದಾಗಿ ಹಿಂದಿನ ಸರ್ಕಾರ ಭರವಸೆ ನೀಡಿತ್ತು. ಅದು ಕೊನೆಗೂ ಈಡೇರಲೇ ಇಲ್ಲ. ಭ್ರಷ್ಟಾಚಾರ ವಿರೋಧಿಯಾಗಿ ಜನರ ಕಣ್ಣು ತೆರೆಸಲು ಸ್ಪರ್ಧಿಸುತ್ತಿದ್ದೇನೆ. ನಾನೇ ನಿಜವಾದ ಆಮ್ಆದ್ಮಿ, ತನ್ನ ಗೆಲವು ನಿಶ್ಚಿತ' ಎನ್ನುತ್ತಾರೆ ಆನಂದ ಗಟ್ಟಿ.
ಚಟರ್ಜಿ ಪ್ರಧಾನಿ ಆಗ್ಬೇಕು: 'ಕಮ್ಯೂನಿಸ್ಟ್ ಪಕ್ಷದಿಂದ ಉಚ್ಛಾಟಿತ ಸೋಮನಾಥ ಚಟರ್ಜಿ ಮುಂದಿನ ಪ್ರಧಾನಿ ಆಗಬೇಕು. 9 ಬಾರಿ ಸಂಸದರಾಗಿ, ಲೋಕಸಭೆ ಸ್ಪೀಕರ್ ಆಗಿದ್ದ ಅವರೇ ಯೋಗ್ಯರು. ಕಳೆದ ಬಾರಿ ಜ್ಯೋತಿಬಸು ಪ್ರಧಾನಿ ಆಗಬೇಕು ಎಂದು ಬಯಸಿದ್ದೆ' ಎನ್ನುತ್ತಾರೆ ಆನಂದ ಗಟ್ಟಿ.
ಆತ್ಮಭೂಷಣ್