ಪುತ್ತೂರು: ಏ.2ರಂದು ಅಭ್ಯರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮ
ಪುತ್ತೂರು: ಪರಿಸರ ವಿರೋಧಿ ಹಾಗೂ ಕೃಷಿ ವಿರೋಧಿ ಕಿರು ಜಲವಿದ್ಯುತ್ ಯೋಜನೆ ಕುರಿತು ವಿವಿಧ ಪಕ್ಷಗಳ ನಿಲುವನ್ನು ತಿಳಿಯುವ ಹಿನ್ನೆಲೆಯಲ್ಲಿ ಏ.2ರಂದು ಪುತ್ತೂರಿನ ರೋಟರಿ ಸಭಾಭವನದಲ್ಲಿ ಲೋಕಸಭಾ ಅಭ್ಯರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಕುಮಾರಧಾರಾ ಪರಿಸರ ಸಂರಕ್ಷಣ ಸಮಿತಿ ಅಧ್ಯಕ್ಷ ಕರುಣಾಕರ ಗೋಗಟೆ ತಿಳಿಸಿದ್ದಾರೆ.
ಪುತ್ತೂರಿನಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕುಮಾರಧಾರಾ ನದಿ ಮತ್ತು ಉಪನದಿಗಳಿಗೆ ಸುಮಾರು 10 ಕಡೆಗಳಲ್ಲಿ ಅಣೆಕಟ್ಟು ನಿರ್ಮಿಸಿ ಕಿರುಜಲವಿದ್ಯುತ್ ಯೋಜನೆ ನಿರ್ಮಿಸುವ ಕಾರ್ಯ ನಡೆಯುತ್ತಿದೆ. ಇದರಿಂದ ಕುಮಾರಧಾರ ನದಿಗೆ ಆಪತ್ತು ಸಂಭವಿಸಲಿದ್ದು, ಅದರೊಂದಿಗೆ ಅರಣ್ಯ ಮತ್ತು ಕೃಷಿ ಜಮೀನು ನಾಶವಾಗಲಿದೆ.
ಈ ಯೋಜನೆ ವಿರುದ್ಧ ಸಮಿತಿ ವತಿಯಿಂದ ಪ್ರತಿಭಟನೆ, ಜಾಥಾ, ಸಹಿ ಸಂಗ್ರಹ ಚಳವಳಿ, ಕಾರ್ಡ್ ಚಳವಳಿ, ಇನ್ನಿತರ ವಿವಿಧ ಕಾರ್ಯಕ್ರಮಗಳ ಮೂಲಕ ಸರ್ಕಾರ ಹಾಗೂ ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಲಾಗಿದೆ. ಇದೀಗ ಲೋಕಸಭಾ ಅಭ್ಯರ್ಥಿಗಳ ನಿಲುವನ್ನು ದಾಖಲಿಸಿಕೊಳ್ಳುವ ಉದ್ದೇಶದಿಂದ ಈ ಸಂವಾದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಕುಮಾರಧಾರ ಪರಿಸರ ಸಂರಕ್ಷಣ ಸಮಿತಿ ಖಚಾಂಚಿ ರಘುನಾಥ ಹೆಬ್ಬಾರ್, ಜೊತೆಕಾರ್ಯದರ್ಶಿ ಎಲ್ಸಿ ಥೋಮಸ್, ಕಿಸಾನ್ ಸಂಘದ ಜಿಲ್ಲಾ ಕಾರ್ಯದರ್ಶಿ ಸುಬ್ರಾಯ ಮತ್ತು ಯಾದವ ಇದ್ದರು.