ಪೆರ್ಮಂಕಿಯ ಶಿಲಾ ಧೂಳುಮಯ ಮನೆ
ವಿಶೇಷ ವರದಿ
ಮಂಗಳೂರು: ಹಚ್ಚ ಹಸಿರಿಂದ ಕಂಗೊಳಿಸುತ್ತಿದ್ದ ಉಳಾಯಿಬೆಟ್ಟು ಪೆರ್ಮಂಕಿ ತೋಟ ಈಗ ಸಂಪೂರ್ಣ ಶಿಲಾಮಯ!
ಗ್ರಾನೈಟ್ ಉದ್ಯಮ ಶಿಲೆಗಳ ಹುಡಿಗಳನ್ನು ತಂದು ತೋಟದ ಪರಿಸರದಲ್ಲಿ ಒಂದು ವರ್ಷದಿಂದ ತಂದು ಹಾಕುತ್ತಿರುವುದರಿಂದ ಶಿಲೆ ಹುಡಿಗಳ ಪರ್ವತವೇ ಸೃಷ್ಟಿಯಾಗಿದೆ. ಪರಿಸರ ಸಂಪೂರ್ಣ ಶಿಲಾ ಬಣ್ಣಕ್ಕೆ ತಿರುಗಿದೆ.
ಈ ಪರಿಸರದಲ್ಲಿ ಮನೆಗಳಿವೆ. ಆದರೆ ಬಡಪಾಯಿ ಕುಟುಂಬ ಮನೆಯೊಂದು ದೂಳಿನಲ್ಲಿ ಮುಳುಗಿದೆ. ಈಗ ಮನೆಯವರ ಬಣ್ಣವೂ ಶಿಲೆಯ ರೂಪಕ್ಕೆ ತಿರುಗಿದೆ. ಮಾರಕ ಧೂಳಿಂದ ತೆಂಗು, ಕಂಗು, ಬಾಳೆ ತೋಟಗಳು ಬಣ್ಣ ಕಳೆದುಕೊಂಡಿವೆ. ಮನೆಯಲ್ಲಿರುವರು ಮಾತನಾಡುವುದಕ್ಕಿಂತ ಹೆಚ್ಚು ಕೆಮ್ಮುತ್ತಾರೆ. ಐದು ವರ್ಷ ಪುಟ್ಟ ಮಗು ವರ್ಷವಿಡೀ ಆನಾರೋಗ್ಯದಿಂದ ಬಳಲುತ್ತಿದೆ.
ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ, ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ, ತಹಸೀಲ್ದಾರ್ಗೂ ದೂರು ನೀಡಿದ್ದಾರೆ. ಮನೆ ಯಜಮಾನ ಅಲ್ವಿನ್ ಬ್ರಾಗ್ಸ್ ಜಿಲ್ಲಾಡಳಿತಕ್ಕೆ ದೂರು ನೀಡಿರುವ ಹಿನ್ನೆಲೆಯಲ್ಲಿ ಈ ಬಗ್ಗೆ ವರದಿ ನೀಡುವಂತೆ ಪರಿಸರ ಮತ್ತು ಮಾಲಿನ್ಯ ನಿಯಂತ್ರಣ ಇಲಾಖೆಗೆ ಜಿಲ್ಲಾಧಿಕಾರಿ ಸೂಚಿಸಿದ್ದಾರೆ.
ಸ್ವಂತ ಜಾಗದಲ್ಲಿಯೂ ತೆರೆದ ಸ್ಥಳದಲ್ಲಿ ಜನರ ಆರೋಗ್ಯಕ್ಕೆ ಮಾರಕ ಕಪ್ಪು ಶಿಲೆ ಹುಡಿ ಸಂಗ್ರಹಿಸುವಂತಿಲ್ಲ, ಇತ್ಯಾದಿ ಹತ್ತು ಕಾನೂನು ಉಲ್ಲಂಘನೆ ಉಲ್ಲೇಖಿಸಿ ಉದ್ಯಮಿಯೊಬ್ಬರಿಗೆ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿ ನೋಟಿಸ್ ನೀಡಿದ್ದಾರೆ. ಏಳು ದಿನದ ಒಳಗೆ ಕ್ರಮ ಜರುಗಿಸುವಂತೆ ಸೂಚಿಸಿದ್ದಾರೆ. ಈ ನೋಟಿಸ್ ತಲುಪಿ ಹತ್ತು ದಿನ ಕಳೆದರೂ ಯಾವುದೆ ಬದಲಾವಣೆ ಕಂಡು ಬಂದಿಲ್ಲ.
ನಮ್ಮ ಮನೆಗಿಂತ ಕೇವಲ 10 ಅಡಿ ಅಂತರದಲ್ಲಿ ಕಪ್ಪು ಶಿಲೆ ಹುಡಿ ಧೂಳುಗಳನ್ನು ವರ್ಷದಿಂದ ರಾಶಿ ಹಾಕುತ್ತಿದ್ದಾರೆ. ಪರಿಣಾಮ ನಮ್ಮ ತೋಟ ಹಾಳಾಗಿದೆ, ಮನೆಯವರ ಆರೋಗ್ಯ ಹಾಳಾಗಿದೆ. ಐದು ವರ್ಷ ಮಗಳು ಸದಾ ಕೆಮ್ಮುತ್ತಾಳೆ. ಮನೆಯನ್ನು ಎಷ್ಟು ಬಾರಿ ಸ್ವಚ್ಛ ಮಾಡಿದರೂ ಕೆಲವೇ ನಿಮಿಷಗಳಲ್ಲಿ ಧೂಳುಮಯ. ಮನೆಗೆ ಸಂಬಂಧಿಕರು, ಗೆಳೆಯರು ಬರುವುದನ್ನೇ ಬಿಟ್ಟಿದ್ದಾರೆ. ಆಹಾರ ಪದಾರ್ಥಗಳ ಮೇಲೂ ಶಿಲೆಯ ಹುಡಿ ಬಂದು ಕುಳಿತುಕೊಳ್ಳುತ್ತದೆ. ದೂಳಿಂದ ಕಣ್ಣುರಿ ಸಾಮಾನ್ಯ. ದಯವಿಟ್ಟು ನಮ್ಮ ಬದುಕು ನಮಗೆ ಹಿಂದಿರುಗಿಸಿ ಎಂದು ಅಲ್ವಿನ್ ಗದ್ಗದಿತರಾಗಿ ಹೇಳುತ್ತಾರೆ.
'ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ಮತ್ತು ಪರಿಸರ ಇಲಾಖೆಗೆ ಒಂದುವರೆ ತಿಂಗಳ ಹಿಂದೆಯೇ ದೂರು ನೀಡಿದ್ದೇವೆ. ಇಬ್ಬರು ಜಂಟಿ ಕಾರ್ಯಾಚರಣೆ ನಡೆಸುತ್ತೇವೆ ಹೇಳುತ್ತಿದ್ದಾರೆ. ಆದರೆ ದಾಳಿ ನಡೆಸಿಲ್ಲ. ಉದ್ಯಮಿ ರಾಜಕೀಯದಲ್ಲಿ ಮತ್ತು ಹಣಕಾಸಲ್ಲಿ ಪ್ರಭಾವಿ ವ್ಯಕ್ತಿ ಆಗಿರುವುದರಿಂದ ನಾವು ಏನು ಮಾಡಲು ಸಾಧ್ಯವಿಲ್ಲ' ಎನ್ನುತ್ತಾರೆ ಅಲ್ವಿನ್.
ವೈದ್ಯರ ಬಳಿ ಹೋಗಿದ್ದೇನೆ. ಮದ್ದು ನೀಡುತ್ತಾರೆ. ಮತ್ತೆ ಅದೇ ಸಮಸ್ಯೆ. ಜ್ವರ, ಕಫ, ಕೆಮ್ಮಿಂದ ನಮ್ಮ ಬದುಕೇ ಹಾಳಾಗಿದೆ. ಶನಿವಾರವೂ ಲೋಡುಗಟ್ಟಲೆ ಶಿಲಾಹುಡಿ ತಂದು ಹಾಕುತ್ತಿದ್ದಾರೆ ಎನ್ನುತ್ತಾರೆ ಅಲ್ವಿನ್.