ಮಾರಕಾಸ್ತ್ರಗಳಿಂದ ಹಲ್ಲೆ: ವ್ಯಕ್ತಿ ಗಂಭೀರ
ಉಪ್ಪಿನಂಗಡಿ: ಬೈಕ್ನಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿ ಮೇಲೆ ಮಾರುತಿ ಕಾರಿನಲ್ಲಿ ಬಂದ ದುಷ್ಕರ್ಮಿಗಳ ತಂಡವೊಂದು ದಾಳಿ ನಡೆಸಿ, ತಲವಾರಿನಿಂದ ಕಡಿದು ಕೊಲೆಗೆ ಯತ್ನಿಸಿದ ಘಟನೆ ಭಾನುವಾರ 34ನೇ ನೆಕ್ಕಿಲಾಡಿ ಗ್ರಾಮದ ಆದರ್ಶ ನಗರ ಎಂಬಲ್ಲಿ ನಡೆದಿದೆ.
ಬಂಟ್ವಾಳ ತಾಲೂಕು ಬಿಳಿಯೂರು ಗ್ರಾಮದ ಅಬ್ದುಲ್ ಗಫೂರ್ (32) ಗಂಭೀರವಾಗಿ ಗಾಯಗೊಂಡಿದ್ದು, ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಅಬ್ದುಲ್ ಗಫೂರ್ ಮಧ್ಯಾಹ್ನ ಉಪ್ಪಿನಂಗಡಿಯಿಂದ ಪುತ್ತೂರು ಕಡೆಗೆ ಬೈಕ್ನಲ್ಲಿ ಪ್ರಯಾಣಿಸುತ್ತಿದ್ದರು. ಈ ವೇಳೆ ಹಿಂದಿನಿಂದ ಮಾರುತಿ ಕಾರಿನಲ್ಲಿ ನಾಲ್ಕೈದು ಮಂದಿ ಇದ್ದ ತಂಡ ಬೆನ್ನಟ್ಟಿಕೊಂಡು ಬಂದು ಆದರ್ಶನಗರ ಎಂಬಲ್ಲಿ ಬೈಕ್ಗೆ ಡಿಕ್ಕಿ ಹೊಡೆಸಿ ಬೀಳಿಸಿದರು. ಬಳಿಕ ಗಪೂರ್ನನ್ನು ತಲವಾರಿನಿಂದ ಯದ್ವಾ ತದ್ವಾ ಕಡಿದು ಪರಾರಿಯಾದರು.
ಗಂಭೀರವಾಗಿ ಗಾಯಗೊಂಡಿದ್ದ ಅಬ್ದುಲ್ ಗಫೂರ್ನನ್ನು ಪುತ್ತೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಸಾಗಿಸಲಾಗಿದೆ.
ಕರುವೇಲು ಪ್ರಕರಣದ ಪ್ರತಿಕಾರ?: ತಿಂಗಳ ಹಿಂದೆ ಕರುವೇಲು ಎಂಬಲ್ಲಿ ಯುವಕರಿಬ್ಬರ ಮೇಲೆ ಕಾರಿನಲ್ಲಿ ಬಂದ ತಂಡವೊಂದು ಸಿನಿಮೀಯ ಶೈಲಿಯಲ್ಲಿ ತಲವಾರಿನಿಂದ ಹಲ್ಲೆ ನಡೆಸಿದ ಪ್ರಕರಣದಲ್ಲಿ ಅಬ್ದುಲ್ ಗಫೂರ್ ಕೂಡಾ ಆರೋಪಿಯಾಗಿದ್ದು, ನ್ಯಾಯಾಲಯದಿಂದ ಜಾಮೀನಿನ ಮೇಲೆ ಬಿಡುಗಡೆ ಹೊಂದಿದ್ದ. ನಿಯಮದಂತೆ ಉಪ್ಪಿನಂಗಡಿ ಠಾಣೆಯಲ್ಲಿ ಸಹಿ ಹಾಕಿ ಪುತ್ತೂರಿನತ್ತ ಬೈಕ್ನಲ್ಲಿ ಸಂಚರಿಸುತ್ತಿದ್ದಾಗ ಹಲ್ಲೆ ನಡೆದಿದ್ದು, ಇದು ಕರುವೇಲು ಘಟನೆಗೆ ಪ್ರತಿಕಾರವಾಗಿರುವ ಸಾಧ್ಯತೆ ಕಂಡುಬಂದಿದೆ. ಉಪ್ಪಿನಂಗಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮುಳುಗಿದ ಬೋಟು: ಐವರು ಪಾರು
ಮಂಗಳೂರು: ಪಣಂಬೂರಿನಲ್ಲಿ ಮೀನುಗಾರಿಕೆ ಮುಗಿಸಿ ಬರುತ್ತಿದ್ದ ಬೋಟು ಮುಳುಗಿ ಅದರಲ್ಲಿದ್ದ ಐವರು ಪ್ರಾಣಾಪಾಯದಿಂದ ಪಾರಾದ ಘಟನೆ ಭಾನುವಾರ ಸಂಭವಿಸಿದೆ. ಮೀನುಗಾರಿಕೆ ಮುಗಿಸಿ ತಣ್ಣೀರುಬಾವಿ ಕಡೆ ಬರುತ್ತಿದ್ದಾಗ ಈ ಅವಘಡ ಸಂಭವಿಸಿತ್ತು. ಘಟನೆಯಲ್ಲಿ ಬೋಟಿನಲ್ಲಿದ್ದ ಐವರು ಮೀನುಗಾರರು ನೀರಿಗೆ ಧುಮುಕಿ ಪಾರಾಗಿದ್ದಾರೆ. ಬೋಟು ಮುಳುಗಿದ್ದು, ರು. 5 ಲಕ್ಷಕ್ಕೂ ಅಧಿಕ ನಷ್ಟ ಉಂಟಾಗಿದೆ ಎಂದು ಪಣಂಬೂರು ಪೊಲೀಸರಿಗೆ ದೂರು ನೀಡಲಾಗಿದೆ.
ಕಾರ್ಮಿಕ ಸಾವು
ಮಂಗಳೂರು: ಕೊಣಾಜೆಯಲ್ಲಿ ನಿರ್ಮಾಣ ಹಂತದ ಕಟ್ಟಡದಲ್ಲಿ ಕಾಮಗಾರಿ ನಡೆಸಿದ್ದ ಸಂದರ್ಭ ಆಯತಪ್ಪಿ ಬಿದ್ದ ಸ್ಥಳೀಯ ನಿವಾಸಿ ರೋಶನ್(27) ಚಿಕಿತ್ಸೆ ಫಲಕಾರಿಯಾಗದೆ ಭಾನುವಾರ ಮೃತಪಟ್ಟಿದ್ದಾರೆ. ರೋಶನ್ ಮಂಗಳೂರು ವಿಶ್ವವಿದ್ಯಾಲಯದ ಪುರುಷರ ವಸತಿ ಗೃಹ ಕಟ್ಟಡದ ಕಾಮಗಾರಿ ನಡೆಸುತ್ತಿದ್ದರು. ಮಾ. 19 ರಂದು ಆಯತಪ್ಪಿ 30 ಅಡಿ ಎತ್ತರದಿಂದ ಬಿದ್ದು, ಗಂಭೀರ ಗಾಯಗೊಂಡಿದ್ದರು. ಕೂಡಲೇ ಅವರನ್ನು ದೇರಳಕಟ್ಟೆ ಆಸ್ಪತ್ರೆಗೆ ದಾಖಲಿಸಿದ್ದರೂ, ಚಿಕಿತ್ಸೆಗೆ ಸ್ಪಂದಿಸದೆ ಭಾನುವಾರ ಮೃತಪಟ್ಟಿದ್ದಾರೆ. ಕೊಣಾಜೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಾಹನ ಅಪಘಾತ; ಪಾದಚಾರಿ ಸಾವು
ಬೆಳ್ತಂಗಡಿ: ವಾಹನ ಡಿಕ್ಕಿ ಹೊಡೆದ ಪರಿಣಾಮ ಪಾದಚಾರಿಯೊಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ವೇಣೂರು ಠಾಣಾ ವ್ತ್ಯಾಪ್ತಿಯಲ್ಲಿ ಭಾನುವಾರ ನಡೆದಿದೆ. ಟಾಟಾ ಏಸ್ ವಾಹನವೊಂದು ಪೆರಿಂಜೆ ಕುಲ್ಲರ್ ಬೆಟ್ಟು ಬಳಿ ನಡೆದುಕೊಂಡು ಹೋಗುತ್ತಿದ್ದ ಸ್ಥಳೀಯ ನಿವಾಸಿ ಹಸೈನಾರ್(52) ಎಂಬುವರಿಗೆ ಡಿಕ್ಕಿ ಹೊಡೆದು ಪರಾರಿಯಾಯಿತು. ಇದರಿಂದ ಅವರು ಸ್ಥಳದಲ್ಲೇ ಮೃತಪಟ್ಟರು. ವೇಣೂರು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಕ್ಷುಲ್ಲಕ ಕಾರಣಕ್ಕೆ ಹಲ್ಲೆ: ದೂರು
ಮೂಲ್ಕಿ: ಪಡಪಣಂಬೂರು ಪಂಚಾಯಿತಿ ವ್ಯಾಪ್ತಿಯ ಬೆಳ್ಳಾಯರು ಗ್ರಾಮದ ಕೆರೆಕಾಡಿನ ತೋಕೂರು ಸಮೀಪ ಶನಿವಾರ ರಾತ್ರಿ ಯಕ್ಷಗಾನ ಬಯಲಾಟವಿದ್ದು, ಈ ಸಂದರ್ಭದಲ್ಲಿ ಮನೆ ಎದುರು ರಸ್ತೆಯಲ್ಲಿ 'ಓಂ' ಬರೆಯಲಾಗಿತ್ತು. ಇದನ್ನು ಗಮನಿಸಿದ ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದು, ಪರಸ್ಪರ ಹಲ್ಲೆ ನಡೆಸಿದ ಘಟನೆ ನಡೆದಿದೆ. ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ಸೀತಾರಾಮ, ಸುರೇಶ, ರಾಮಕೃಷ್ಣ ಮತ್ತು ಸಂತೋಷ್ ಎಂಬವರಿಗೆ ರಾಜೇಶ್,ದಿನೇಶ್, ಸಂದೀಪ್ ಹಾಗೂ ಸಂಗಡಿಗರು ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಭಾನುವಾರ ಮಧ್ಯಾಹ್ನ ಚುನಾವಣಾ ಪ್ರಚಾರ ನಡೆಸಿ ಬರುತ್ತಿದ್ದ ಸಂದರ್ಭದಲ್ಲಿ ಮತ್ತೆ ಹಲ್ಲೆ ನಡೆಸಿದ್ದು, ಹಲ್ಲೆಗೊಳಗಾದವರಲ್ಲಿ ಇಬ್ಬರು ದಲಿತ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಈ ಬಗ್ಗೆ ದಲಿತ ಸಂಘಟನೆಗಳು ಮೂಲ್ಕಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಸುಮಾರು 25 ಕ್ಕೂ ಹೆಚ್ಚು ಮಂದಿ ಮೂಲ್ಕಿ ಠಾಣೆಯಲ್ಲಿ ಜಮಾಯಿಸಿ, ಪ್ರಕರಣ ದಾಖಲಿಸಬೇಕು ಎಂದು ಒತ್ತಾಯಿಸಿದರು. ಮತ್ತೊಂದು ಗುಂಪು ರಾಜಿ ಪ್ರಯತ್ನಕ್ಕೆ ಯತ್ನಿಸಿ ವಿಫಲವಾಗಿ ಕೊನೆಗೆ ಮೂಲ್ಕಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.