ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ರಾಜೀನಾಮೆ ನೀಡ್ತೀರಾ? ರೈಗೆ ಪಂಥಾಹ್ವಾನ

Mainashree
Updated On : 31 Mar 2014, 12:17 pm

ಮಂಗಳೂರು: ಲೋಕಸಭೆಯಲ್ಲಿ ದ.ಕ. ಸಂಸದ, ಬಿಜೆಪಿ ಅಭ್ಯರ್ಥಿ ನಳಿನ್ ಕುಮಾರ್ ಮಾತನಾಡಿದ ಬಗ್ಗೆ ದಾಖಲೆ ಇದ್ದು, ಕೊಟ್ಟ ಮಾತಿನಂತೆ ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡುವಂತೆ ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈಗೆ ಜಿಲ್ಲಾ ಬಿಜೆಪಿ ಪಂಥಾಹ್ವಾನ ನೀಡಿದೆ.
ಭಾನುವಾರ ಬಿಜೆಪಿ ಜಿಲ್ಲಾ ಚುನಾವಣೆ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾಧ್ಯಕ್ಷ ಪ್ರತಾಪ್‌ಸಿಂಹ ನಾಯಕ್, ಇತ್ತೀಚೆಗೆ ರಮಾನಾಥ ರೈ ಕರೆದ ಸುದ್ದಿಗೋಷ್ಠಿಯಲ್ಲಿ ನಳಿನ್ ಕುಮಾರ್ ಬಗ್ಗೆ ಆಧಾರ ರಹಿತ ಆರೋಪ ಮಾಡಿದ್ದರು. ಅದಕ್ಕಾಗಿ ಅವರು ಲೋಕಸಭೆಯಲ್ಲಿ ಮಾತನಾಡಿದ ಕ್ಲಿಪ್ಪಿಂಗ್ಸ್‌ನ್ನು ಮಾಧ್ಯಮ ಎದುರು ತೋರಿಸಲಾಗಿದೆ. ನಳಿನ್ ಕುಮಾರ್ ಮಾತನಾಡಿದ್ದು ಸಾಬೀತಾದರೆ ರಾಜಿನಾಮೆ ನೀಡುವುದಾಗಿ ರಮಾನಾಥ ರೈ ಹೇಳಿದ್ದಾರೆ. ಈಗ ನಮ್ಮಲ್ಲಿ ದಾಖಲೆ ಇದೆ, ನೀವು ರಾಜಿನಾಮೆ ನೀಡುತ್ತೀರಾ ಎಂದು ಪ್ರತಿ ಸವಾಲು ಹಾಕಿದರು.
ರೈ ನಿದ್ದೆಗೆ ಸವಾಲ್: ಅಷ್ಟೇ ಅಲ್ಲ, ಜಿಲ್ಲೆಯ ಪ್ರಮುಖ ಸಮಸ್ಯೆಗಳ ಬಗ್ಗೆ ಉಸ್ತುವಾರಿ ಸಚಿವರಾಗಿ ಮಾತನಾಡಬೇಕಾದ ರಮಾನಾಥ ರೈ ವಿಧಾನಸಭೆ ಅಧಿವೇಶನದಲ್ಲಿ ನಿದ್ರೆ ಮಾಡುತ್ತಾರೆ. ರಾಜ್ಯದಲ್ಲಿ ಈ ಸರ್ಕಾರ ಬಂದ ಮೇಲೆ ಜನರ ಸಮಸ್ಯೆಗೆ ಸ್ಪಂದನ ಸಿಗುತ್ತಿಲ್ಲ. ನಿದ್ದೆ ಮಾಡದೇ ಅಧಿವೇಶನ ಪೂರ್ತಿ ಹಾಜರಿರುವುದನ್ನು ಸಾಬೀತು ಮಾಡಿದರೆ ತಾನು ರಾಜಕೀಯ ನಿವೃತ್ತಿ ಘೋಷಿಸುವುದಾಗಿ ಪ್ರತಾಪ್‌ಸಿಂಹ ನಾಯಕ್ ಸವಾಲು ಹಾಕಿದರು. ವಿಧಾನ ಪರಿಷತ್ತು ಸದಸ್ಯ ಗಣೇಶ್ ಕಾರ್ಣಿಕ್, ಮಾಜಿ ಸಚಿವ ನಾಗರಾಜ ಶೆಟ್ಟಿ ಇದ್ದರು.
ಕಸ್ತೂರಿರಂಗನ್ ವರದಿ ಹೆಸರಿನಲ್ಲಿ ವೋಟ್‌ಬ್ಯಾಂಕ್ ರಾಜಕಾರಣ: ರೈ
ಸುಬ್ರಹ್ಮಣ್ಯ: ಕಸ್ತೂರಿ ರಂಗನ್ ವರದಿ ವಿಚಾರ ಮುಂದಿಟ್ಟುಕೊಂಡು ಜನರ ದಾರಿ ತಪ್ಪಿಸಿ ವೋಟ್ ಬ್ಯಾಂಕ್ ರಾಜಕಾರಣ ಮಾಡುತ್ತಿದ್ದಾರೆ ಎಂದು ಅರಣ್ಯ ಸಚಿವ ಬಿ. ರಮಾನಾಥ ರೈ ಆರೋಪಿಸಿದ್ದಾರೆ. ಗುತ್ತಿಗಾರಿನ ಹಾಲೆಮಜಲು ವೆಂಕಟೇಶ್ವರ ಸಭಾಭವನದಲ್ಲಿ ಭಾನುವಾರ ಸುಳ್ಯ ಬ್ಲಾಕ್ ಕಾಂಗ್ರೆಸ್‌ನ ಗುತ್ತಿಗಾರು ಜಿಲ್ಲಾ ಪಂಚಾಯಿತಿ ಕ್ಷೇತ್ರ ವ್ಯಾಪ್ತಿಯ ಬೂತ್ ಮಟ್ಟದ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದಲ್ಲಿ ಅವರು ಮಾತನಾಡಿದರು.
ಜನಸಾಮಾನ್ಯರಿಗೆ ತೊಂದರೆಯಾಗುವ ಯಾವುದೇ ಯೋಜನೆ ಜಾರಿಗೆ ಅವಕಾಶ ನೀಡುವುದಿಲ್ಲ. ಆನೆ ಕಾರಿಡಾರ್, ಸೂಕ್ಷ್ಮ ವಲಯ, ಪುಷ್ಪಗಿರಿ ವನ್ಯಧಾಮಗಳ ಬಗ್ಗೆ ಸ್ಥಳೀಯರೊಂದಿಗೆ ಚರ್ಚಿಸದೆ ಜಾರಿಗೆ ಮುಂದಾಗುವುದಿಲ್ಲ ಎಂದರು.
ಅಭಿವೃದ್ಧಿಯಲ್ಲಿ ಹಿಂದೆ ಉಳಿದದ್ದೇಕೆ?: ಅತಿ ಹೆಚ್ಚು ಅನುದಾನ ವಿನಿಯೋಗಿಸಿ ಉತ್ತಮ ಸಂಸದ ಎಂಬ ಹೆಗ್ಗಳಿಕೆಯಿಂದ ಬೀಗುತ್ತಿದ್ದಾರೆ ಹಾಲಿ ಸಂಸದರು. ಕೋಟಿ ಕೋಟಿ ಅನುದಾನ ತರಿಸಿದ್ದರೆ ಜಿಲ್ಲೆಯ ಅಭಿವೃದ್ಧಿ ಹಿಂದೆ ಉಳಿಯುತ್ತಿತ್ತೇ ಎಂದು ಪ್ರಶ್ನಿಸಿದ ಅವರು, ಸಂಸದರು ತಮ್ಮ ವೇತನವನ್ನೂ ಸೇರಿಸಿ ಕೋಟಿ ಲೆಕ್ಕ ನೀಡಿ ಈ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ ಎಂದು ಕುಟುಕಿದರು. ಜಿ.ಪಂ. ಸದಸ್ಯ ದೇವರಾಜ್ ಕೆ.ಎಸ್. ಮಾತನಾಡಿದರು. ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೆಂಕಪ್ಪ ಗೌಡ ಅಧ್ಯಕ್ಷತೆ ವಹಿಸಿದ್ದರು. ಜಿ.ಪಂ. ಸದಸ್ಯೆ ಸರಸ್ವತಿ ಕಾಮತ್, ಕಾಂಗ್ರೆಸ್ ನಾಯಕರಾದ ನಿತ್ಯಾನಂದ ಮುಂಡೋಡಿ, ಜಿ.ಪಂ. ಮಾಜಿ ಸದಸ್ಯ ಭರತ್ ಮುಂಡೋಡಿ, ಡಾ.ರಘು, ಹಾಜಿ ಇಸಾಕ್ ಸಾಹೇಬ್, ಪಿ.ಸಿ.ಜಯರಾಮ್, ಸತೀಶ್ ಕೂಜುಗೋಡು, ದಿವ್ಯಪ್ರಭಾ ಚಿಲ್ತಡ್ಕ, ಪ್ರಮೀಳಾ ಶಶಿಧರ್, ಕಿರಣ್ ಬುಡ್ಲೆಗುತ್ತು, ಶಿವರಾಮ ರೈ, ಹರಿಪ್ರಸಾದ್, ಅಚ್ಚುತ್ತ ಮಲ್ಲಾಜೆ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement