ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಕ್ವಾರಿಗಳಿಗಿಲ್ಲ ಅಂಕೆ ಏರುತ್ತಿದೆ ಮೃತರ ಸಂಖ್ಯೆ!

Mainashree
Updated On : 2 May 2014, 12:46 pm

 ಸುಭಾಶ್ಚಂದ್ರ ಎಸ್. ವಾಗ್ಳೆ
ಉಡುಪಿ: ಪ್ರತಿವರ್ಷ ಮಳೆಗಾಲದಲ್ಲಿ ಉಡುಪಿ ಜಿಲ್ಲೆಯಲ್ಲಿ ಪ್ರಕೃತಿ ವಿಕೋಪ ಪರಿಹಾರ ನಿಧಿ ದುರ್ಬಳಕೆಯಾಗುತ್ತದೆ!
ಹೌದು, ಕಳೆದ ಅನೇಕ ವರ್ಷಗಳಿಂದ ಉಡುಪಿ ಜಿಲ್ಲೆಯಲ್ಲಿ ಮಳೆಗಾಲದಲ್ಲಿ ಮಾನವ ನಿರ್ಮಿತ ದುರಂತಗಳಲ್ಲಿ ಮೃತಪಟ್ಟವರನ್ನು ಪ್ರಾಕೃತಿಕ ದುರಂತದಲ್ಲಿ ಮೃತಪಟ್ಟವರು ಎಂದು ಪರಿಗಣಿಸಿ ಲಕ್ಷಾಂತರ ರು. ಪರಿಹಾರ ನೀಡಲಾಗುತ್ತಿದೆ. ಹಾಗೆಂದು ಈ ಸಾವುಗಳನ್ನು ತಪ್ಪಿಸಲು ಶಾಶ್ವತ ಮುಂಜಾಗ್ರತ ಕ್ರಮಗಳನ್ನು ಕೈಗೊಂಡಿಲ್ಲ.
ಮಕ್ಕಳೇ ಬಲಿಪಶು: ಇನ್ನೇನು, ಮಳೆಗಾಲ ಆರಂಭವಾಗಲಿದೆ, ಈ ಬಾರಿ ಮತ್ತೆ ಈ ಮಾನವ ನಿರ್ಮಿತ ಕ್ವಾರಿಗಳು ಬಲಿಗಾಗಿ ಬಾಯ್ತೆರೆದು ಕಾಯುತ್ತಿವೆ. ಇವುಗಳಿಗೆ ಮುಖ್ಯವಾಗಿ ಬಲಿಯಾಗುವುದು ಮುಗ್ಧ ಮಕ್ಕಳು. ಉಡುಪಿ ಜಿಲ್ಲೆಯಲ್ಲಿ 2 ಬಗೆಯ ಕ್ವಾರಿಗಳಿವೆ. ಒಂದು ಮಣ್ಣಿನ ಕ್ವಾರಿ, ಇವು ಕುಂದಾಪುರ ತಾಲೂಕಿನಲ್ಲಿ ಹೆಚ್ಚಿವೆ. ಕೃಷಿಕರು ಹಣದಾಸೆಗೆ ತಮ್ಮ ಗದ್ದೆಯಲ್ಲಿರುವ ಆವೆ ಮಣ್ಣನ್ನು ಮಾರುತ್ತಾರೆ. ಗುತ್ತಿಗೆದಾರರು ಗದ್ದೆಗಳಲ್ಲಿ ನೂರಾರು ಲಾರಿಗಳಿಗಾಗುವಷ್ಟು ಮಣ್ಣು ಅಗೆಯುತ್ತಾರೆ.  ಹೀಗೆ ನಿರ್ಮಾಣಗೊಂಡ ಭಾರಿ ಹೊಂಡಗಳಲ್ಲಿ ಮಳೆಗಾಲದಲ್ಲಿ ನೀರು ತುಂಬಿಕೊಳ್ಳುತ್ತದೆ. ಕುಂದಾಪುರ ತಾಲೂಕಿನ ಹಟ್ಟಿಯಂಗಡಿ, ಕನ್ಯಾನ, ಕೋಟ, ಕಂಡ್ಲೂರು, ಕಾಲ್ತೋಡು, ಬೆಲೂರು, ವಂಡ್ಸೆ ಗ್ರಾಪಂಗಳಲ್ಲಿ ಈ ಕ್ವಾರಿಗಳು ನೂರಾರು ಸಂಖ್ಯೆಯಲ್ಲಿವೆ.
ಇನ್ನೊಂದು, ಕಲ್ಲು ಕ್ವಾರಿಗಳು. ಇವು ಕಾರ್ಕಳ ತಾಲೂಕಿನಲ್ಲಿ ವಿಪರೀತ ಸಂಖ್ಯೆಯಲ್ಲಿವೆ. ಸ್ಫೋಟಕಗಳನ್ನು ಬಳಸಿ ಕಲ್ಲು ತೆಗೆದು ಉಂಟಾದ ಹೊಂಡಗಳಲ್ಲಿ ಮಳೆಗಾಲದಲ್ಲಿ ನೀರು ತುಂಬಿ ಮಿನಿ ಸರೋವರಗಳಾಗುತ್ತವೆ. ಅಲ್ಲಿನ ಸೂಡ, ಜಾರ್ಕಳ, ಕೂಡ್ಲು, ಅಜೆಕಾರು ಮುಂತಾದ ಗ್ರಾಮಗಳಲ್ಲಿ ವಿಪರೀತ ಎನ್ನುವಷ್ಟು ಕಲ್ಲು ಕ್ವಾರಿಗಳಿವೆ.
ಗುತ್ತಿಗೆದಾರರ ಹೊಣೆ ಮಾಡುವವರಾರು?: ಇದು ಪ್ರಾಕೃತಿಕ ದುರಂತ ಅಲ್ಲ, ಮಕ್ಕಳದ್ದೂ ತಪ್ಪಿಲ್ಲ, ಮಳೆಯನ್ನೂ ದೂರುವಂತಿಲ್ಲ. ಆದರೆ, ಹಣದಾಸೆಗೆ ಹೊಂಡ ಅಗೆದು ಹಾಗೇ ಬಿಟ್ಟು ಹೋಗುವ ಗುತ್ತಿಗೆದಾರರು ಈ ದುರಂತಕ್ಕೆ ನೇರ ಹೊಣೆಯಾಗಿದ್ದರೂ, ಅವರನ್ನು ಕೇಳುವವರಿಲ್ಲ. ಯುದ್ಧ ಆರಂಭವಾದ ಮೇಲೆ ಶಸ್ತ್ರಾಭ್ಯಾಸ ಎಂಬಂತೆ, ಜಿಲ್ಲಾಡಳಿತ ಹತ್ತಾರು ಮಂದಿ ಜೀವ ಕಳೆದುಕೊಂಡ ನಂತರ ಎಚ್ಚೆತ್ತುಕೊಂಡು ಮೃತರ ಕುಟುಂಬಕ್ಕೆ ಪ್ರಕೃತಿ ದುರಂತ ಪರಿಹಾರ ನಿಧಿಯಿಂದ ಹಣ ಕೊಟ್ಟು ಕೈತೊಳೆದುಕೊಳ್ಳುತ್ತದೆ. ಮತ್ತೆ ಮುಂದಿನ ವರ್ಷ ಇದು ಪುನರಾವರ್ತನೆಯಾಗುತ್ತದೆ.

ಮೃತ್ಯುಕೂಪಗಳು
2012ರಲ್ಲಿ ಉಡುಪಿ ಜಿಲ್ಲೆಯಲ್ಲಿ ಮಳೆಗಾಲದಲ್ಲಿ 23 ಮಂದಿ ಮೃತಪಟ್ಟಿದ್ದರು. ಅವರಲ್ಲಿ 7 ಮಂದಿ ಪ್ರವಾಹಕ್ಕೆ ಮತ್ತು ನದಿಯಲ್ಲಿ ಕೊಚ್ಚಿ ಹೋದವರು.  ಉಳಿದ 16 ಮಂದಿ ಯಾರೋ ಗುತ್ತಿಗೆದಾರರು ಹಣದಾಸೆಗೆ ನಿರ್ಮಿಸಿದ್ದ ಮಣ್ಣು ಕ್ವಾರಿ ಅಥವಾ ಕಲ್ಲು ಕ್ವಾರಿಗೆ ಬಿದ್ದು ಮೃತಪಟ್ಟವರು. 2013ರಲ್ಲಿಯೂ ಸುಮಾರು 15 ಮಂದಿ ಮೃತಪಟ್ಟಿದ್ದರು. ಅವರಲ್ಲಿ 10 ಮಂದಿ ಮಾನವ ನಿರ್ಮಿತ ಹೊಂಡ, ಕ್ವಾರಿಗಳೆಂಬ ಮೃತ್ಯು ಕೂಪಕ್ಕೆ ಬಿದ್ದು ಮೃತಪಟ್ಟವರು.
ತಡೆಬೇಲಿಯಿಲ್ಲ, ಸತ್ತವರು ಲೆಕ್ಕಕ್ಕಿಲ್ಲ
ಈ ಹೊಂಡಗಳಿಗೆ ತಡೆಬೇಲಿ ಇರುವುದಿಲ್ಲ. ಮೀನು ಹಿಡಿಯಲು, ಸ್ನಾನ ಮಾಡಲು, ಬಟ್ಟೆ ಒಗೆಯಲು ಈ ಹೊಂಡಗಳಿಗೆ ಇಳಿಯುವ ಮಕ್ಕಳು ಕೆಸರಿನಲ್ಲಿ ಕಾಲು ಸಿಲುಕಿ ಮೇಲೆ ಬರಲಾಗದೆ ಮುಳುಗಿ ಸಾಯುತ್ತಾರೆ. ಶಾಲೆಯಿಂದ ಮರಳಿ ಬರುವಾಗ ಕಾಲು ಜಾರಿ ಹೊಂಡಕ್ಕೆ ಬಿದ್ದು ಮಕ್ಕಳು ಮೃತಪಟ್ಟ ಘಟನೆಗಳೂ ನಡೆದಿವೆ.

ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಹಾಗೂ ಸ್ಥಳೀಯ ಗ್ರಾಮ ಪಂಚಾಯಿತಿಗಳು ಕಟ್ಟುನಿಟ್ಟು ಮಾಡಿದರೆ ಈ ದುರಂತಗಳನ್ನು ತಪ್ಪಿಸಬಹುದು. ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಈ ಕ್ವಾರಿಗಳಿಗೆ ಅನುಮತಿ ನೀಡುವಾಗಲೇ, ಕ್ವಾರಿಗಳ ಸುತ್ತ ಬೇಲಿ ಹಾಕಬೇಕು. ಅಪಾಯದ ಬಗ್ಗೆ ಫಲಕಗಳನ್ನು ಹಾಕಬೇಕು ಎನ್ನುವ ನಿಬಂಧನೆಯೇ ವಿಧಿಸುತ್ತದೆ. ಗುತ್ತಿಗೆದಾರರು ಅನುಮತಿ ಸಿಕ್ಕಿದ ಮೇಲೆ ಈ ನಿಯಮವನ್ನು ಪಾಲಿಸುವುದಿಲ್ಲ. ಸ್ಥಳೀಯ ಗ್ರಾಮ ಪಂಚಾಯಿತಿಗಳು ಈ ಕ್ವಾರಿಗಳಿಗೆ ಅನುಮತಿ ನೀಡಬೇಕಾಗಿರುವುದರಿಂದ, ಗ್ರಾ.ಪಂ. ಕೂಡ ಕಟ್ಟುನಿಟ್ಟಾಗಿ ಗುತ್ತಿಗೆದಾರರಿಂದ ಬೇಲಿ ಹಾಕಿಸಿದರೆ ಅಪಾಯ ತಪ್ಪಿಸಬಹುದು. ಈ ಅಪಾಯಕ್ಕೆ ಕ್ವಾರಿ ಗುತ್ತಿಗೆದಾರರೇ ನೇರ ಹೊಣೆಯಾಗಿರುತ್ತಾರೆ.
ಟಿ ರಾಜೇಂದ್ರ ಬೇಕಲ್, ಉಪನಿರ್ದೇಶಕರು, ಮಕ್ಕಳ ಮತ್ತು ಮಹಿಳಾ ಕಲ್ಯಾಣ ಇಲಾಖೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement