ಧರ್ಮಸ್ಥಳದಲ್ಲಿ ಇಂದು 185 ಜೋಡಿ ಸಪ್ತಪದಿ
ಬೆಳ್ತಂಗಡಿ: ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ 43ನೇ ವರ್ಷದ ಸಾಮೂಹಿಕ ಉಚಿತ ವಿವಾಹ ಸಮಾರಂಭ ಶುಕ್ರವಾರ ಗೋಧೂಳಿ ಮುಹೂರ್ತದಲ್ಲಿ ನೆರವೇರಲಿದೆ. ರಾಜ್ಯ ಮೀನುಗಾರಿಕಾ ಸಚಿವ ಅಭಯಚಂದ್ರ ಜೈನ್ ಅತಿಥಿಗಳಾಗಿದ್ದು, ಶ್ರೀಕ್ಷೇತ್ರ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ, ಹೇಮಾವತಿ ಹೆಗ್ಗಡೆ ಮತ್ತು ಕುಟುಂಬಸ್ಥರು ಉಪಸ್ಥಿತರಿರುತ್ತಾರೆ. ಕ್ಷೇತ್ರದ ಅಮೃತವರ್ಷಿಣಿ ಸಭಾಂಗಣದಲ್ಲಿ ನಡೆಯುವ ಸಮಾರಂಭದಲ್ಲಿ 185ಕ್ಕೂ ಹೆಚ್ಚು ಜೋಡಿ ದಾಂಪತ್ಯ ಜೀವನ ಸ್ವೀಕರಿಸಿ ಸುಂದರ ಜೀವನಕ್ಕೆ ಪ್ರಮಾಣಬದ್ಧರಾಗಲಿದ್ದಾರೆ. 1972ರಲ್ಲಿ ಪ್ರಾರಂಭಗೊಂಡ ಈ ಜನಮಂಗಲ ಕಾರ್ಯದಲ್ಲಿ 2013ರವರೆಗೆ 11,465 ಜೋಡಿಗಳು ವಿವಾಹವಾಗಿದ್ದಾರೆ. ಕ್ಷೇತ್ರದಲ್ಲಿ ಮದುವೆ ಸಂಭ್ರಮ, ಸಡಗರ ಮೇಳೈಸಿದ್ದು, ಶುಭ ಗಳಿಗೆಗೆ ಎಲ್ಲ ಪೂರ್ವ ತಯಾರಿಗಳನ್ನು ಮಾಡಲಾಗಿದೆ. ಕ್ಷೇತ್ರವನ್ನು ತಳಿರುತೋರಣಗಳಿಂದ ಸಿಂಗರಿಸಲಾಗಿದೆ.