ಬಡತನದ ನೋವಿಗೆ ಅನಾರೋಗ್ಯದ ಬರೆ
ಮೌನೇಶ ವಿಶ್ವಕರ್ಮ
ಬಂಟ್ವಾಳ: ತಾಲೂಕಿನ ಪಾಣೆಮಂಗಳೂರು ಗ್ರಾಮದ ಮೆಲ್ಕಾರ್ ಬೋಳಂಗಡಿಯ ಮನೆಯೊಂದರಲ್ಲಿ ಅನಾರೋಗ್ಯ ಪೀಡಿತ ತಾಯಿ ಜತೆಯಲ್ಲಿ ನಿತ್ಯವೂ ನೋವಿನಲ್ಲೇ ದಿನ ಕಳೆಯುವ ಅಣ್ಣ- ತಂಗಿಯ ಸ್ಥಿತಿಯನ್ನು ಕಂಡರೆ ಎಂಥವರ ಮನವೂ ಕರಗಲೇಬೇಕು.
ಆ ಕುಟುಂಬದಲ್ಲಿ ಇರುವ ಸದಸ್ಯರ ಸಂಖ್ಯೆ ಮೂರು. ಆದರೆ ಮೂವರೂ ಕಾಯಿಲೆಯಿಂದ ಬಳಲುತ್ತಿರುವುದು ಇಡೀ ಕುಟುಂಬದ ಸ್ಥೈರ್ಯವನ್ನೇ ಕುಗ್ಗಿಸಿದೆ. ಸಾಮಾನ್ಯ ಔಷಧಿಗೆ ಗುಣವಾಗದ, ಎದ್ದು ನಿಲ್ಲಲಾಗದ, ನಿಂತರೆ ಕೂರಲಾಗದ, ಮಲಗಿದರೆ ಏಳಲಾಗದ, ಎದ್ದರೂ ನಡೆಯಲಾಗದ ಸ್ಥಿತಿಯಲ್ಲಿ ಪಾಳುಬಿದ್ದ ಗುಡಿಸಲಿನಂಥ ಮನೆಯಲ್ಲಿ ಈ ಕುಟುಂಬ ದಿನ ಕಳೆಯುತ್ತಿದೆ. ಕುಟುಂಬದ ಹಿರಿಯ ಮಹಿಳೆ ಗಿರಿಜ ಆಚಾರ್ತಿ(70) ಅವರಿಗೆ ಇಬ್ಬರು ಮಕ್ಕಳು. ಪತಿ ಬದುಕಿದ್ದಾಗ ಬಡತನದಲ್ಲೇ ಜೀವನ ಕಳೆದ ಆಚಾರ್ತಿ, ಪತಿಯ ಸಾವಿನ ಬಳಿಕ ಕುಟುಂಬದ ಹೊಣೆ ಹೊತ್ತು ಕೂಲಿ ಮಾಡಿ ಮಕ್ಕಳನ್ನು ಸಲುಹಿದರು.
ಮಗ ಅಂಗವಿಕಲ, ಮಗಳಿಗೆ ಅನಾರೋಗ್ಯ: ಇನ್ನು ಕುಟುಂಬಕ್ಕೆ ಆಧಾರ ಆಗಬೇಕಿದ್ದ ಪುತ್ರ ಕೃಷ್ಣಪ್ಪ ಆಚಾರ್ಯ (37) ಹುಟ್ಟು ಅಂಗವಿಕಲ, ಕೊಕ್ಕೆ ಕಟ್ಟಿರುವಂಥ ಸ್ಥಿತಿಯಲ್ಲಿರುವ ಇವರ ಬೆರಳುಗಳು ದೊಡ್ಡ ಕೆಲಸಗಳನ್ನು ಮಾಡಲು ಸ್ಪಂದಿಸುತ್ತಿಲ್ಲ. ಮರದ ಮಿಲ್ನಲ್ಲಿ ಕೆಲಸಕ್ಕಿದ್ದ ಕೃಷ್ಣಪ್ಪ ಸಣ್ಣಪುಟ್ಟ ಕೆಲಸ ಮಾಡುತ್ತಿದ್ದರು. ಆದರೆ ಕಳೆದ ಐದು ವರ್ಷಗಳಿಂದ ದೈಹಿಕವಾಗಿ ಕೃಷರಾಗುತ್ತಾ ನೋವಿನ ಬಾಧೆಯಿಂದ ಕಂಗೆಟ್ಟಿದ್ದಾರೆ. ಪುತ್ರಿ ಬೇಬಿ (32) ಬೀಡಿ ಲೇಬಲ್ ಕೆಲಸ ಮಾಡುತ್ತಿದ್ದರು. ಆರ್ಥಿಕವಾಗಿ ಕುಟುಂಬಕ್ಕೆ ಆಧಾರದಂತಿದ್ದ ಇವರೂ ಎರಡು ವರ್ಷದ ಹಿಂದೆ ಹೃದಯ ಕಾಯಿಲೆಗೆ ತುತ್ತಾದವರು ಇನ್ನೂ ಚೇತರಿಸಿಕೊಂಡಿಲ್ಲ. ಈಗ ಪಾರ್ಶ್ವವಾಯು ಕೂಡ ಅಂಟಿಕೊಂಡಿದೆ.
ಮಾನಸಿಕವಾಗಿ ತೀವ್ರ ನೊಂದಿರುವ ಕುಟುಂಬಕ್ಕೆ ಸಹಾಯ ಮಾಡಬಯಸುವವರು ಕೃಷ್ಣಪ್ಪ ಆಚಾರ್ಯ ಅವರ ಪಾಣೆಮಂಗಳೂರು ಕಾರ್ಪೊರೇಷನ್ ಬ್ಯಾಂಕ್ ಖಾತೆ ಸಂಖ್ಯೆ 01006728, ಐಎಫಿಸಿ ಕೋಡ್ 0000200 ಗೆ ಉದಾರ ನೆರವು ನೀಡಬಹುದು.