ಬತ್ತುತ್ತಿದೆ ಅಂತರ್ಜಲ: ಸಿಗುತ್ತಿಲ್ಲ ಜೀವಜಲ
ಸುಳ್ಯ: ಕೇರಳ ಗಡಿಗೆ ಹೊಂದಿಕೊಂಡಿರುವ ಅಜ್ಜಾವರ ಹಾಗೂ ಮಂಡೆಕೋಲು ಗ್ರಾಮಗಳಲ್ಲಿ ನೀರಿನ ಮಟ್ಟ ಕುಸಿದಿದ್ದು, ಕುಡಿಯುವ ನೀರಿಗೂ ತಾತ್ವಾರ ಉಂಟಾಗಿದೆ. ಎರಡೂ ಗ್ರಾಮಗಳ ಹಲವು ಕಾಲೋನಿಗಳಲ್ಲಿ ಕುಡಿಯುವ ನೀರು ಇಲ್ಲದೆ ಜನರು ಪರದಾಡುವಂತಾಗಿದೆ.
ಅಜ್ಜಾವರ ಗ್ರಾಮದ ಕರ್ಲಪ್ಪಾಡಿಯಲ್ಲಿ ಜಿಲ್ಲಾ ಪಂಚಾಯಿತಿ ಅನುದಾನದಲ್ಲಿ 2 ವರ್ಷಗಳ ಹಿಂದೆ ಓವರ್ ಹೆಡ್ ನೀರಿನ ಟ್ಯಾಂಕ್ ನಿರ್ಮಿಸಲಾಗಿದ್ದು, ವರ್ಷದ ಹಿಂದೆ ಇದಕ್ಕೆ 4 ಕಿ.ಮೀ. ದೂರದ ಕುಡೆಂಬಿ ಗುಡ್ಡದಿಂದ ಹರಿದು ಬರುವ ನೈಸರ್ಗಿಕ ನೀರನ್ನು ತುಂಬಿಸುವ ಯೋಜನೆಯನ್ನು ಹಾಕಿಕೊಳ್ಳಲಾಗಿತ್ತು. ನೀರು ಲೆಂಕಿರಿಕಾಡು ಎಂಬಲ್ಲಿಗೆ ಬಂದಾಗ ಅಲ್ಲಿ ಶುದ್ಧಿಕರಣ ಘಟಕ ನಿರ್ಮಿಸಲಾಗಿತ್ತು. ರು. 50 ಲಕ್ಷ ವೆಚ್ಚ ಮಾಡಿ ನಿರ್ಮಿಸಿದ ಯೋಜನೆ ಸ್ವಲ್ಪ ಸಮಯ ಸರಿಯಾಗಿ ಕೆಲಸ ಮಾಡಿತ್ತು. ಆದರೆ, ಈಗ ನೀರಿಲ್ಲದೆ ಈ ಯೋಜನೆ ಸಂಪೂರ್ಣ ವಿಫಲವಾಗಿದೆ.
ನೀರಿನ ಕ್ಷಾಮ: ಅಡ್ಪಂಗಾಯ ಕಾಲೋನಿಯಲ್ಲಿ ನೀರಿನ ಟ್ಯಾಂಕ್ ಇದ್ದರೂ ಇಲ್ಲೂ ನೀರಿನ ಕ್ಷಾಮ ಎದುರಾಗಿದೆ. ವಿದ್ಯುತ್ ಸಮಸ್ಯೆಯಿಂದ ನೀರನ್ನು ಎತ್ತಿ ಟ್ಯಾಂಕ್‌ಗೆ ತುಂಬಿಸಲು ಆಗುತ್ತಿಲ್ಲ ಎಂದು ಪಂಚಾಯಿತಿ ಆಡಳಿತದವರು ಹೇಳುತ್ತಿದ್ದಾರೆ.
ಹತ್ತಿರದ ಹೊಳೆ ಬದಿ ಹೊಸದಾಗಿ ತೆರೆದ ಬಾವಿ ನಿರ್ಮಿಸಿದ್ದರೂ ಅದರಲ್ಲೂ ನೀರು ಬತ್ತಿದೆ. ಅಜ್ಜಾವರ ಪ್ರೌಢಶಾಲೆಯ ಬಳಿ ಮೂರು ಟ್ಯಾಂಕ್ ಇದ್ದರೂ ಯಾವುದರಲ್ಲೂ ನೀರಿಲ್ಲ. ಇರವಂಬಳ್ಳದಲ್ಲೂ ಕುಡಿಯುವ ನೀರಿನ ಟ್ಯಾಂಕ್‌ಗಳನ್ನು ನಿರ್ಮಿಸಲಾಗಿದೆ. ಅಲ್ಲೂ ಇದೇ ಸಮಸ್ಯೆ. ಮಾವಿನಪಳ್ಳ ಕಾಲನಿಯಲ್ಲಿ ಗಂಗಾ ಕಲ್ಯಾಣ ಯೋಜನೆ, ಅದರ ಸಮೀಪ ರಾಜೀವ್ ಗಾಂಧಿ ಕುಡಿಯುವ ನೀರಿನ ಯೋಜನೆಯ ಟ್ಯಾಂಕ್ ಇದೆ. ಇವೆಲ್ಲದ್ದಕ್ಕೂ ಕೊಳವೆ ಬಾವಿ ನೀರು ಉಪಯೋಗ. ವಿದ್ಯುತ್ ಸಮಸ್ಯೆಯಿಂದ ಇಲ್ಲೂ ಟ್ಯಾಂಕ್ ತುಂಬುತ್ತಿಲ್ಲ ಎಂದು ಅಧಿಕಾರಿಗಳು ಹೇಳುತ್ತಾರೆ.
ವಿದ್ಯುತ್ ಸಮಸ್ಯೆ: ಮಂಡೆಕೋಲು ಗ್ರಾಮದ ಕಲ್ಲಡ್ಕ, ಪೆರಾಜೆ, ಪುತ್ಯ, ಶಿವಾಜಿನಗರ ಜಿ.ಪಂ. ನೆರವಿನಿಂದ ಹೊಸದಾಗಿ ಟ್ಯಾಂಕ್ ನಿರ್ಮಿಸಲಾಗಿದ್ದು, ಅಲ್ಲಿ ನೀರಿನ ಸಮಸ್ಯೆ ಇಲ್ಲ. ಆದರೆ, ವಿದ್ಯುತ್ ಪೂರೈಕೆ ಸರಿಯಾಗಿ ಇಲ್ಲದೇ ಇರುವುದರಿಂದ ಸಮಸ್ಯೆಯಾಗಿದೆ.
ಮಂಡೆಕೋಲು ಬೈಲು ಹಾಗೂ ಮಂಡೆಕೋಲು ಪೇಟೆಯಲ್ಲಿ ರಸ್ತೆ ಅಭಿವೃದ್ಧಿ ಸಂದರ್ಭ ಪೈಪ್‌ಲೈನ್ ಒಡೆದು ಹೋಗಿದ್ದು, 6 ತಿಂಗಳಿನಿಂದ ನೀರಿನ ಸಮಸ್ಯೆ ಉಂಟಾಗಿದೆ. ಈ ಕುರಿತು ಸ್ಥಳೀಯರು ಪ್ರತಿಭಟನೆಗೂ ಮಂದಾಗಿದ್ದರು. ಆದರೆ, ಕಾಮಗಾರಿ ಗುತ್ತಿಗೆದಾರರು ಹೊಸ ಪೈಪ್‌ಲೈನ್ ಹಾಕುವ ಕೆಲಸ ಆರಂಭಿಸಿದ್ದರಿಂದ ಪ್ರತಿಭಟನೆ ರದ್ದು ಮಾಡಲಾಗಿದೆ ಎನ್ನಲಾಗಿದೆ.
ಪೇರಾಲು- ಕುಕ್ಕೇಟಿಯಲ್ಲಿ ನೀರಿನ ಸಮಸ್ಯೆ ಇದ್ದು, ಪಯಸ್ವಿನಿ ನದಿ ದಡದಲ್ಲಿ ಬಾವಿ ಕೊರೆದು ನೀರಿನ ಸಮಸ್ಯೆ ಪರಿಹಾರಕ್ಕೆ ಜಿಲ್ಲಾ ಪಂಚಾಯಿತಿ ನೆರವಿನಿಂದ ಗ್ರಾಮ ಪಂಚಾಯಿತಿಯವರು ಕಾಮಗಾರಿ ಆರಂಭಿಸಿದ್ದಾರೆ.
ಬೇಂಗತ್ಮಲೆ ಎಂಬಲ್ಲಿಂದ ನೈಸರ್ಗಿಕ ನೀರನ್ನು ಪೈಪ್‌ಲೈನ್ ಮೂಲಕ ಮುರೂರು, ಕಲ್ಲಡ್ಕ- ಪೆರಾಜೆ, ಮಂಡೆಕೋಲು ಬೈಲು, ಕನ್ಯಾನ ಹಾಗೂ ಶಿವಾಜಿ ನಗರಗಳಿಗೆ ಪೂರೈಕೆ ಮಾಡುವ ರು. 1 ಕೋಟಿ ವೆಚ್ಚದ ಯೋಜನೆಯನ್ನು ಸಿದ್ಧಪಡಿಸಲಾಗಿದ್ದು, ಇದು ಕಾರ್ಯಗತವಾದರೆ ಗ್ರಾಮಕ್ಕೆ ನೀರಿನ ಸಮಸ್ಯೆ ಎದುರಾಗದು ಎಂದು ಮಂಡೆಕೋಲು ಗ್ರಾಮ ಪಂಚಾಯಿತಿ ಅಧ್ಯಕ್ಷ ಸುರೇಶ್ ಕಣೆಮರಡ್ಕ ತಿಳಿಸಿದ್ದಾರೆ.
ವಿದ್ಯುತ್‌ನದ್ದೇ ದೊಡ್ಡ ಸಮಸ್ಯೆ
ಎರಡೂ ಗ್ರಾಮಗಳಿಗೆ ಪಯಸ್ವಿನಿ ನದಿ ಸುತ್ತು ಹಾಕುವುದರಿಂದ ನದಿ ನೀರನ್ನೇ ಉಪಯೋಗಿಸಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯನ್ನು ಇಲ್ಲಿ ಅನುಷ್ಠಾನ ಮಾಡುವ ಕುರಿತು ಶಾಸಕ ಎಸ್. ಅಂಗಾರ ಹಲವು ಕಡೆ ಭಾಷಣಗಳಲ್ಲಿ ಹೇಳಿದ್ದಾರೆ. ಆದರೆ, ವಿದ್ಯುತ್ ಸಮಸ್ಯೆಯೇ ನೀರಿಗಿಂತಲೂ ದೊಡ್ಡದಾಗಿದ್ದು, ಸಣ್ಣ ಮಿಂಚು- ಮಳೆ ಬಂದರೂ ಎರಡು ದಿನ ವಿದ್ಯುತ್ ಸ್ಥಗಿತಗೊಳ್ಳುತ್ತದೆ. ಅದು ಸರಿಯಾದಾಗ ಮತ್ತೆ ಮಳೆ ಬಂದು ಮತ್ತೆ ವಿದ್ಯುತ್ ಸಮಸ್ಯೆ. ಹಾಗಾಗಿ ನೈಸರ್ಗಿಕ ನೀರಿನ ಯೋಜನೆಗೆ ಹೆಚ್ಚಿನ ಒತ್ತು ನೀಡಲಾಗುತ್ತದೆ ಎನ್ನುತ್ತಾರೆ ಸುರೇಶ್ ಕಣೆಮರಡ್ಕ.