ಪತ್ರಕರ್ತರ ಪ್ರತಿಭಟನೆ, ರಾಜ್ಯಪಾಲರಿಗೆ ದೂರು
ಮಂಗಳೂರು: ಪತ್ರಕರ್ತನ ಕೈಕಾಲು ಮುರಿಯು ಧಮಕಿ ಹಾಕಿರುವ ಸಚಿವ ಅಭಯಚಂದ್ರ ಜೈನ್ ವಿರುದ್ಧ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘಟನೆ ಪ್ರತಿಭಟನೆ ನಡೆಸಿದೆ.
ಪತ್ರಕರ್ತರಿಗೆ ರಕ್ಷಣೆ ಒದಗಿಸಬೇಕು, ಸಚಿವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಅವರಿಗೆ ಜಿಲ್ಲಾಧಿಕಾರಿ ಮೂಲಕ ಪತ್ರಕರ್ತರ ಸಂಘದ ಅಧ್ಯಕ್ಷ ಪಿ.ಬಿ.ಹರೀಶ್ ರೈ ಮನವಿ ಸಲ್ಲಿಸಿದರು. ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ಮನವಿ ಸ್ವೀಕರಿಸಿದರು. ಪ್ರತಿಭಟನೆ ಸಭೆಯಲ್ಲಿ ಮಾತನಾಡಿದ ಪತ್ರಕರ್ತರ ಸಂಘ ಅಧ್ಯಕ್ಷ ಪಿ.ಬಿ.ಹರೀಶ್ ರೈ, ದಕ್ಷಿಣ ಕನ್ನಡ ಜಿಲ್ಲೆಗೆ ಮೂವರು ಸಚಿವರನ್ನು ನೀಡಿದಾಗ ಹೆಚ್ಚು ಹರ್ಷಿಸಿ ವರದಿ ಮಾಡಿದವರು ಇದೇ ಪತ್ರಕರ್ತರು. ಆದರೆ ಇಂದು ಸರ್ಕಾರದ ಮುಂದೆ ರಕ್ಷಣೆ ಕೋರಿ ಪ್ರತಿಭಟಿಸುವ ಸಂದರ್ಭ ಉಂಟಾಗಿದೆ. ಪತ್ರಕರ್ತರು ದೌರ್ಜನ್ಯಕ್ಕೆ ಒಳಗಾಗಿ ಪದೇ ಪದೇ ಪ್ರತಿಭಟನೆ ನಡೆಸುವುದು ಯಾವುದೇ ಸರ್ಕಾರಕ್ಕೆ ಶೋಭೆ ತರುವುದಿಲ್ಲ ಎಂದರು. ಹಿಂದೂ ಪತ್ರಿಕೆ ಸ್ಥಾನೀಯ ಮುಖ್ಯಸ್ಥ ಗೋವಿಂದ ಬೆಳಗಾಂವ್ಕರ್, ಕನ್ನಡ ಪ್ರಭ ಪ್ರಧಾನ ವರದಿಗಾರ ಜಿತೇಂದ್ರ ಕುಂದೇಶ್ವರ, ಸಂಯುಕ್ತ ಕರ್ನಾಟಕ ರಾಮಕೃಷ್ಣ, ರವೀಂದ್ರ ಶೆಟ್ಟಿ ಘಟನೆ ಖಂಡಿಸಿ ಮಾತನಾಡಿದರು.
ಬೆಳ್ತಂಗಡಿ ಪತ್ರಕರ್ತರ ಖಂಡನೆ
ಬೆಳ್ತಂಗಡಿ: ಮೂಡುಬಿದರೆಯ ಪತ್ರಕರ್ತನಿಗೆ ಮೀನುಗಾರಿಕಾ ಸಚಿವ ಅಭಯಚಂದ್ರ ಜೈನ್ ಬೆದರಿಕೆಯೊಡ್ಡಿದ್ದನ್ನು ಬೆಳ್ತಂಗಡಿ ತಾಲೂಕು ಪತ್ರಕರ್ತರ ಸಂಘ ತೀವ್ರವಾಗಿ ಖಂಡಿಸಿದೆ.
ಮೂಡುಬಿದಿರೆ: ಪ್ರತಿಭಟನೆ
ಮೂಡುಬಿದಿರೆ: ಮೂಡಬಿದಿರೆಯಲ್ಲಿ ಪತ್ರಕರ್ತರು ಪ್ರತಿಭಟನೆ ಮೆರವಣೆಗೆ ಮೂಲಕ ಸಚಿವ ಅಭಯಚಂದ್ರ ಜೈನ್ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ತಹಸೀಲ್ದಾರ್ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು. ಮೊಬೈಲ್ ಕರೆಯಲ್ಲಿ ಪತ್ರಕರ್ತ ಯಶೋಧರ ಬಂಗೇರ ಅವರಿಗೆ ಸಚಿವರು ಕೈಕಾಲು ಮುರಿಯುವ ಬೆದರಿಕೆ ಹಾಕಿದ್ದಾರೆ. ಇದು ಮಾಧ್ಯಮಕ್ಕೆ ಅವಮಾನ. ಭೀತಿ ಮುಕ್ತವಾಗಿ ಪತ್ರಿಕಾರಂಗ ಕೆಲಸ ಮಾಡಲು ರಾಜ್ಯಪಾಲರು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ವಿನಂತಿಸಿದ್ದಾರೆ.
ಎಫ್ಐಆರ್ ದಾಖಲು: ಮೂಡುಬಿದರೆ ಪೊಲೀಸ್ ಠಾಣೆಯಲ್ಲಿ ಕೊಲೆ ಬೆದರಿಕೆ ಒಡ್ಡಿರುವ ಸಚಿವ ಅಭಯಚಂದ್ರ ಜೈನ್ ವಿರುದ್ಧ ದೂರು ದಾಖಲಾಗಿದೆ. ಭಾರತೀಯ ದಂಡ ಸಂಹಿತೆ ಅಡಿ ಸೆ.120 ಎ, 440, 506 ದಾಖಲಿಸಲಾಗಿದೆ.
ಮೂಲ್ಕಿ ಪತ್ರಕರ್ತರ ಖಂಡನೆ
ಮೂಲ್ಕಿ: ಸಚಿವರ ಕೃತ್ಯವನ್ನು ಮೂಲ್ಕಿ ಹೋಬಳಿ ಪತ್ರಕರ್ತರ ಸಂಘ ಖಂಡಿಸಿದೆ. ಮೂಲ್ಕಿಯ ಪುನರೂರು ಟೂರಿಸ್ಟ್ ಹೋಮ್ನ ಸಭಾಂಗಣದಲ್ಲಿ ಜರಗಿದ ಸಂಘದ ಸಭೆಯಲ್ಲಿ ಈ ಬಗ್ಗೆ ಖಂಡನಾ ನಿರ್ಣಯವನ್ನು ಮಂಡಿಸಲಾಯಿತು.