ಟೋಲ್ಪ್ಲಾಝಾ ದಾಂದಲೆ: ಪ್ರಮುಖ ಆರೋಪಿ ಬಂಧನ
ಬಂಟ್ವಾಳ: ಬ್ರಹ್ಮರಕೂಟ್ಲು ರಾ.ಹೆ.75ರ ಟೋಲ್ ಪ್ಲಾಝಾದಲ್ಲಿ ಸರಣಿ ದಾಂದಲೆ ನಡೆಸಿದ ಪ್ರಮುಖ ಆರೋಪಿ ಹಸೈನಾರ್ ಸಹಿತ ನಾಲ್ವರು ಆರೋಪಿಗಳನ್ನು ಬಂಟ್ವಾಳ ಪೊಲೀಸರು ಬಂಧಿಸಿದ್ದು, ಇದರೊಂದಿಗೆ ಬಂಧಿತ ಆರೋಪಿಗಳ ಸಂಖ್ಯೆ ಐದಕ್ಕೇರಿದೆ.
ಬಂಧಿತರನ್ನು ಸಲಾಂ, ಶರೀಫ್ ಯಾನೆ ಪಕ್ಷ ಶರೀಫ್, ಹಸೈನಾರ್ ಹಾಗೂ ಸಮೀರ್ ಎಂದು ಗುರುತಿಸಲಾಗಿದೆ.
ಈ ಪೈಕಿ ಸಲಾಂ ಹಾಗೂ ಶರೀಫ್ನನ್ನು ಕೈಕಂಬ ಬಸ್ ನಿಲ್ದಾಣದಲ್ಲಿ ಭಾನುವಾರ ಹಾಗೂ ಹಸೈನಾರ್ ಹಾಗೂ ಶಮೀರ್ನನ್ನು ಸೋಮವಾರ ಮುಂಜಾನೆ ಬಿ.ಸಿ.ರೋಡ್ ರೇಲ್ವೆ ನಿಲ್ದಾಣದಲ್ಲಿ ಬಂಧಿಸಲಾಗಿದೆ ಎಂದು ವೃತ್ತ ನಿರೀಕ್ಷಕ ಮಂಜಯ್ಯ ತಿಳಿಸಿದ್ದಾರೆ. ಮತ್ತೋರ್ವ ಆರೋಪಿ ಅಬೂಬಕರ್ನನ್ನು ಕಳೆದೆರಡು ದಿನಗಳ ಹಿಂದೆಯೇ ಬಂಧಿಸಲಾಗಿತ್ತು.
ಏ.15ರಂದು ಬ್ರಹ್ಮರಕೂಟ್ಲು ಟೋಲ್ ಪ್ಲಾಝಾ ಸಿಬ್ಬಂದಿ ಮೇಲೆ ತಂಡ ಹಲ್ಲೆ ನಡೆಸಿತ್ತು. ಏ.27ರಂದು ನಡೆದ ದಾಂದಲೆ ಪ್ರಕರಣದಲ್ಲಿ ಸುಮಾರು 25 ಮಂದಿಯ ತಂಡ ಟೋಲ್ ಪ್ಲಾಝಾದ ಸೊತ್ತುಗಳಿಗೆ ಹಾನಿ ಮಾಡಿದ್ದಲ್ಲದೆ, ಲಕ್ಷ ರು. ದರೋಡೆ ಮಾಡಿದ್ದಾರೆ ಎಂದು ಆರೋಪಿಸಿ ದೂರು ನೀಡಲಾಗಿತ್ತು. ಪೊಲೀಸರ ಎದುರೇ ದಾಂದಲೆ ನಡೆದಿದ್ದರೂ, ಆರೋಪಿಗಳನ್ನು ಬಂಧಿಸಿಲ್ಲ ಎಂಬ ಆರೋಪ ಪೊಲೀಸರ ವಿರುದ್ಧ ಕೇಳಿ ಬಂದಿತ್ತು.
ಈ ಮಧ್ಯೆ, ಕಾನೂನು ಸುವ್ಯವಸ್ಥೆ ಕಾಪಾಡಲು ವಿಫಲರಾದ ಆರೋಪದಲ್ಲಿ ಬಂಟ್ವಾಳ ವೃತ್ತ ನಿರೀಕ್ಷಕ ರಾಜಶೇಖರ ಮೇಸ್ತ್ರಿ ಅವರನ್ನು ಕರ್ತವ್ಯದಿಂದ ಅಮಾನತುಗೊಳಿಸಿದ್ದು, ಬಳಿಕ ಇಲ್ಲಿ ಪ್ರಭಾರ ಸಿಐ ಆಗಿ ಅಧಿಕಾರ ವಹಿಸಿಕೊಂಡ ಮಂಜಯ್ಯ ನೇತೃತ್ವದಲ್ಲಿ ಆರೋಪಿಗಳ ಬಂಧನ ಪ್ರಕ್ರಿಯೆ ಚುರುಕುಗೊಂಡಿದೆ. ನಗರ ಠಾಣಾಧಿಕಾರಿ ಸಂಜಯ್ ಕುಮಾರ್ ಮತ್ತು ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ಬೈಕ್ ಅಪಘಾತ: ಇಬ್ಬರಿಗೆ ಗಾಯ
ಮೂಲ್ಕಿ: ಇಲ್ಲಿನ ಪೊಲೀಸ್ ಠಾಣೆ ವ್ಯಾಪ್ತಿಯ ಕಾರ್ನಾಡು ಬೈಪಾಸ್ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಹೆಳೆಯಂಗಡಿ ಕಡೆಯಿಂದ ಮೂಲ್ಕಿ ಕಡೆಗೆ ಬರುತ್ತಿದ್ದ ಬೈಕ್ಗೆ ಇನ್ನೊಂದು ಬೈಕ್ ಡಿಕ್ಕಿಯಾಗಿದ್ದು, ಇಬ್ಬರು ಗಾಯಗೊಂಡ ಘಟನೆ ಭಾನುವಾರ ರಾತ್ರಿ ನಡೆದಿದೆ.
ಮೂಲ್ಕಿಯ ದೀಪಕ್ ದೇವಾಡಿಗ, ರೇಷ್ಮಾ ಗಾಯಗೊಂಡಿದ್ದು, ಸುರತ್ಕಲ್ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇಂಡಿಕೇಟರ್ ಹಾಕಿ ಬೈಕ್ ತಿರುಗಿಸುತ್ತಿದ್ದ ವೇಳೆ ಹಿಂದಿನಿಂದ ಅತೀ ವೇಗವಾಗಿ ಬಂದ ಬೈಕ್ ಡಿಕ್ಕಿಯಾಗಿದೆ. ಮಾತ್ರವಲ್ಲದೇ ಡಿಕ್ಕಿ ಹೊಡೆದ ಬೈಕ್ ಸವಾರ ಪರಾರಿಯಾಗಿರುವುದಾಗಿ ದೀಪಕ್ ಮೂಲ್ಕಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.