ನಡು ರಸ್ತೆಯಲ್ಲೇ ಕೋಳಿ ತ್ಯಾಜ್ಯ...!
ಬಂಟ್ವಾಳ: ದುಷ್ಕರ್ಮಿಗಳ ತಂಡವೊಂದು ಸತ್ತ ಕೋಳಿಗಳು ಹಾಗೂ ಕೋಳಿ ತ್ಯಾಜ್ಯಗಳನ್ನು ರಸ್ತೆಯಲ್ಲೇ ಎಸೆದು ಪರಿಸರ ಮಾಲಿನ್ಯ ಮಾಡಿದ ಘಟನೆ ಬಿ.ಸಿ.ರೋಡ್- ಕಡೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.
ಭಾನುವಾರ ರಾತ್ರಿ ವಾಹನಗಳಲ್ಲಿ ಬಂದ ತಂಡವೊಂದು ಈ ಕೃತ್ಯ ಎಸಗಿದ್ದು, ತ್ಯಾಜ್ಯದಿಂದಾಗಿ ಮಣಿಹಳ್ಳದಿಂದ ಮೊದಲ್ಗೊಂಡು ಪೂಂಜಾಲಕಟ್ಟೆ, ಮಡಂತ್ಯಾರುವರೆಗೆ ಸೋಮವಾರ ಗಬ್ಬುನಾತ ಬೀರುತ್ತಿತ್ತು.
ಮಣಿಹಳ್ಳ, ಅಂಚಿಕಟ್ಟೆ, ವಗ್ಗ, ಪೂಂಜಾಲಕಟ್ಟೆ ಹಾಗೂ ಮಡಂತ್ಯಾರಿನ ಕೆಲವು ಪ್ರದೇಶಗಳಲ್ಲಂತೂ ತೆರೆದ ಗೋಣಿಗಳಲ್ಲಿ ತುಂಬಿಸಿ ಕೋಳಿ ತ್ಯಾಜ್ಯಗಳನ್ನು ಎಸೆಯಲಾಗಿತ್ತು.
ರಸ್ತೆ ಮಧ್ಯದಲ್ಲೇ ತ್ಯಾಜ್ಯ ಎಸೆದ ಕಾರಣದಿಂದ ಅದು ರಸ್ತೆಯಿಡಿ ಹರಡಿ ರಸ್ತೆಯಲ್ಲಿ ಸಂಚರಿಸುವ ವಾಹನ ಸವಾರರು ಮೂಗು ಮುಚ್ಚಿಕೊಳ್ಳುತ್ತಿದ್ದ ದೃಶ್ಯ ಕಂಡುಬಂತು.
ಹೆದ್ದಾರಿ ಅಕ್ಕಪಕ್ಕದ ನಿವಾಸಿಗಳೂ ಕೂಡ ಈ ಪರಿಸರ ಮಾಲಿನ್ಯದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದು, ಕೂಡಲೆ ತಪ್ಪಿತಸ್ಥರನ್ನು ಪತ್ತೆ ಹಚ್ಚಿ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದ್ದಾರೆ.