ನೆಲ್ಲಿಗುಡ್ಡೆ ಕಲ್ಲು ಕ್ವಾರಿಯಲ್ಲಿ ಸ್ಫೋಟ: ಇಬ್ಬರ ಬಂಧನ
ಮೂಲ್ಕಿ: ಐಕಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನೆಲ್ಲಿಗುಡ್ಡೆಯ ಕ್ವಾರಿಯ ಶೆಡ್ನಲ್ಲಿ ಭಾನುವಾರ ನಡೆದ ಸ್ಫೋಟಕ್ಕೆ ಸಂಬಂಧಿಸಿ ಇಬ್ಬರನ್ನು ಮೂಲ್ಕಿ ಪೊಲೀಸರು ಬಂಧಿಸಿದ್ದು, ಇವರಿಗೆ 15 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಘಟನೆಗೆ ಸಂಬಂಧಿಸಿ ಕ್ವಾರಿಯ ಮಾಲೀಕ ಮಂಗಳೂರು ಬೊಂದೇಲ್ನ ಸಂತೋಷ್ ಮಿನೇಜಸ್ ಮತ್ತು ಕ್ವಾರಿಗೆ ಸ್ಫೋಟಕ ಮದ್ದು ಸರಬರಾಜು ಮಾಡುವ ಡೇನಿಸ್ ಮಿನೇಜಸ್ನನ್ನು ಬಂಧಿಸಿ, ಮೂಡುಬಿದಿರೆ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ನೆಲ್ಲಿಗುಡ್ಡೆ ಕಲ್ಲು ಕ್ವಾರಿಯಲ್ಲಿ ನಡೆದ ಭೀಕರ ಸ್ಫೋಟದಲ್ಲಿ ತಮಿಳುನಾಡಿನ ಮೂಲದವರಾದ ಎರಿಚಮ್ಮ ಮತ್ತವರ ಮಗ ಪರಮಾನ್ ಮೃತಪಟ್ಟಿದ್ದರು. ಇಲ್ಲಿ ಅಕ್ರಮ ಸ್ಫೋಟಕ ದಾಸ್ತಾನು ಸಂಬಂಧಪಟ್ಟಂತೆ ಕ್ವಾರಿಯ ಕಾರ್ಮಿಕ, ಶಿವಮೊಗ್ಗದ ನಾಗರಾಜ್ ಪೊಲೀಸರಿಗೆ ದೂರು ನೀಡಿದ್ದರು. ಈ ಕುರಿತು ಮೂಲ್ಕಿ ಠಾಣಾಧಿಕಾರಿ ನೇತೃತ್ವದಲ್ಲಿ ಸ್ಫೋಟಕ ತಜ್ಞರು, ಶ್ವಾನ ದಳ ಪರಿಶೀಲನೆ ನಡೆಸಿದ್ದು, ಸ್ಫೋಟ ಸಂಭವಿಸಿದ ಕೋಣೆಯಲ್ಲಿ ಜಿಲೆಟಿನ್ ಕಡ್ಡಿಗಳು ಸೇರಿದಂತೆ ಸ್ಫೋಟಕ ವಸ್ತುಗಳ ಅಕ್ರಮ ದಾಸ್ತಾನು ಇರಿಸಿದ್ದು ಕಂಡುಬಂದಿದೆ.ಹೀಗಾಗಿ ಕ್ವಾರಿಯ ಮಾಲೀಕ ಮತ್ತು ಸ್ಫೋಟಕ ಸರಬರಾಜು ಮಾಡುತ್ತಿದ್ದವರನ್ನು ಬಂಧಿಸಲಾಗಿದೆ. ಐಕಳ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಎಲ್ಲಾ ಕ್ವಾರಿಗಳಿಗೆ ಅನುಮತಿ ಪಡೆದಿದೆಯೇ ಎಂಬ ಬಗ್ಗೆ ತನಿಖೆ ನಡೆಸುತ್ತಿರುವ ಪೊಲೀಸರು ಕ್ವಾರಿಗಳಲ್ಲಿ ಸುರಕ್ಷತೆಗೆ ಆದ್ಯತೆ ನೀಡಲಾಗಿದೆಯೇ ಎಂಬುದರ ಕುರಿತು ಮಾಹಿತಿ ಕಲೆ ಹಾಕುತ್ತಿದ್ದಾರೆ.
ಭಾನುವಾರ ನಡೆದ ಘಟನೆಯಲ್ಲಿ ಮೃತಪಟ್ಟ ಎರಿಚಮ್ಮ ಮತ್ತು ಪರಮಾನ್ ಉತ್ತಂಡಿಯವರ ಶವವನ್ನು ಮೂಲ್ಕಿ ಸರ್ಕಾರಿ ಆಸ್ಪತ್ರೆಯಲ್ಲಿ ಮಹಜರು ನಡೆಸಿ ಅವರು ಸಂಬಂಧಿಕರಿಗೆ ಹಸ್ತಾಂತರಿಸಲಾಗಿದೆ. ಅವರು ಶವಗಳನ್ನು ತಮಿಳುನಾಡಿಗೆ ಕೊಂಡೊಯ್ದಿದ್ದಾರೆ.
ಕ್ವಾರಿಯಲ್ಲಿ ಸೋಮವಾರ ಕಾರ್ಮಿಕರು ಕೆಲಸಕ್ಕೆ ರಜೆ ಹಾಕಿ, ಬಿಡಾರದಲ್ಲೇ ಉಳಿದಿದ್ದರು. ಘಟನೆಯಿಂದ ಹಾನಿಯಾದ ತಮ್ಮ ಮನೆಗಳನ್ನು ಸರಿಪಡಿಸುವ ಕಾರ್ಯದಲ್ಲಿ ತೊಡಗಿರುವುದು ಕಂಡುಬಂದಿದೆ.