2ನೇ ಸ್ಥಾನಕ್ಕೆ ಉಡುಪಿ
ಉಡುಪಿ: ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶದಲ್ಲಿ ಹಿಂದಿನ ವರ್ಷ ಅಗ್ರಸ್ಥಾನದಲ್ಲಿದ್ದ ಉಡುಪಿ ಜಿಲ್ಲೆ ಈ ಬಾರಿ 2ನೇ ಸ್ಥಾನಕ್ಕೆ ಜಾರಿದೆ.
ನೆರೆಯ ದಕ್ಷಿಣ ಕನ್ನಡ ಜಿಲ್ಲೆ ಮತ್ತೆ ಮೊದಲ ಸ್ಥಾನಕ್ಕೇರಿದೆ. ಉಡುಪಿ ಜಿಲ್ಲೆ 2ನೇ ಸ್ಥಾನಕ್ಕೆ ಇಳಿದದ್ದು ಮಾತ್ರವಲ್ಲದೇ ಶೇಕಡವಾರು ಫಲಿತಾಂಶದಲ್ಲಿಯೂ ಕುಸಿತ ಕಂಡಿದೆ. 2012ರಲ್ಲಿ ಉಡುಪಿ ಜಿಲ್ಲೆ ಶೇ 85.32ರಷ್ಟು ಅತ್ಯುತ್ತಮ ಸಾಧನೆ ಮಾಡಿದ್ದರೆ, 2013ರಲ್ಲಿ ಶೇ 92.76 ಸಾಧನೆ ಮಾಡಿತ್ತು. ಆದರೂ ಪ್ರಥಮ ಸ್ಥಾನವನ್ನು ಕಾಯ್ದುಕೊಂಡಿತ್ತು. ಆದರೆ ಈ ಬಾರಿ ಶೇ 85.57ರಷ್ಟು ಫಲಿತಾಂಶ ಸಾಧನೆಯಾಗಿದೆ.
ಈ ಬಾರಿಯೂ ಅನೇಕ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆ ಮಾಡಿದ್ದಾರೆ. ಎಂದಿನಂತೆ ಈ ಸಾಧನೆಯಲ್ಲಿ ವಿದ್ಯಾರ್ಥಿನಿಯರದ್ದೇ ಮೇಲುಗೈ.
ಸುಪ್ರಿಯಾ ರಾವ್‌ಗೆ ಶೇ.97: ಉಡುಪಿಯ ಪೂರ್ಣಪ್ರಜ್ಞ ಪಿಯು ಕಾಲೇಜಿನ ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ಸುಪ್ರಿಯಾ ರಾವ್ 582 (ಶೇ. 97)ಪಡೆದಿದ್ದಾರೆ. ಗಣಿತ- 100, ಭೌತಶಾಸ್ತ್ರ- 98, ರಸಾಯನಶಾಸ್ತ್ರ- 99, ಕಂಪ್ಯೂಟರ್ ವಿಜ್ಞಾನ- 97, ಇಂಗ್ಲಿಷ್- 96, ಹಿಂದಿ- 92 ಅಂಕ ಗಳಿಸಿದ್ದಾರೆ. ಈಕೆ ಕುಕ್ಕಿಕಟ್ಟೆ ಕಲ್ಯಾಣನಗರದ ಗಣೇಶ್ ಕೆ.ಆರ್. ಮತ್ತು ಸುಧಾ ರಾವ್ ದಂಪತಿ ಪುತ್ರಿ. ಇದೇ ಕಾಲೇಜಿನ ನೇಹಾ ಬಿ.ಎಸ್. ವಿಜ್ಞಾನ ವಿಭಾಗದಲ್ಲಿ 565 (ಶೇ94.16) ಅಂಕಗಳೊಂದಿಗೆ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಗೊಂಡಿದ್ದಾರೆ. ಗಣಿತ- 99, ಭೌತಶಾಸ್ತ್ರ- 98, ರಸಾಯನಶಾಸ್ತ್ರ- 94, ಸಂಖ್ಯಾಶಾಸ್ತ್ರ- 96, ಇಂಗ್ಲಿಷ್- 89 ಹಾಗೂ ಹಿಂದಿ- 88 ಅಂಕಗಳನ್ನು ಗಳಿಸಿದ್ದಾರೆ.
ಎಂಜಿಎಂ ವಿದ್ಯಾರ್ಥಿಗಳ ಸಾಧನೆ: ಎಂಜಿಎಂ ಕಾಲೇಜಿನ ವಿಜ್ಞಾನ ವಿಭಾಗದಲ್ಲಿ ಪ್ರತೀಕ್ಷಾ 583 (ಶೇ 97.16), ಮಹಾಲಕ್ಷ್ಮೀ ಕಿಣಿ ಟಿ. 579 (ಶೇ 96.50), ಕಲಾವಿಭಾಗದಲ್ಲಿ ಸಂಜನಾ ಜೆ. 526 (87.66) ಮತ್ತು ರಮ್ಯಾ ಕಾಮತ್ 521 (ಶೇ 86.83) ಅಂಕ ಗಳಿಸಿ ಕಾಲೇಜಿಗೆ ಕೀರ್ತಿ ತಂದಿದ್ದಾರೆ.