ಕರಾವಳಿ: ಇಳೆ ತಣಿಸಿದ ಮಳೆ
ಮಂಗಳೂರು: ದ.ಕ. ಜಿಲ್ಲೆಯಲ್ಲಿ ಗುರುವಾರ ಮುಂಗಾರು ಮಾದರಿಯಲ್ಲಿ ಭಾರೀ ಮಳೆ ಸುರಿದಿದೆ. ನಗರದಲ್ಲಿ ದಿನವಿಡೀ ಸಾಧಾರಣ ಮಳೆ ಸುರಿದಿದೆ. ಪರಿಣಾಮ ನಗರದ ತಗ್ಗು ಪ್ರದೇಶಗಳಲ್ಲಿ ಕೃತಕ ನೆರೆ ಸೃಷ್ಟಿಯಾಗಿದೆ. ಅಲ್ಲದೆ ವಾಹನ ಸಂಚಾರ ಅಸ್ತವ್ಯಸ್ತಗೊಂಡಿದ್ದು, ಆಗಾಗ ಟ್ರಾಫಿಕ್ ಜಾಮ್ ಉಂಟಾಗಿತ್ತು.
ಗುರುವಾರ ಬೆಳಗ್ಗಿನ ವರೆಗೆ ಪುತ್ತೂರಿನಲ್ಲಿ 224.9 ಮಿ.ಮೀ. ಗರಿಷ್ಠ ಮಳೆಯಾದರೆ, ಬಂಟ್ವಾಳದಲ್ಲಿ 63.4 ಮಿ.ಮೀ. ಕನಿಷ್ಠ ಮಳೆಯಾಗಿದೆ. ಬೆಳ್ತಂಗಡಿಯಲ್ಲಿ 212.4 ಮಿ.ಮೀ., ಸುಳ್ಯ 107 ಮಿ.ಮೀ. ಹಾಗೂ ಮಂಗಳೂರು 72.3 ಮೀ.ಮೀ. ಮಳೆ ದಾಖಲಾಗಿದೆ. ಜನವರಿಯಿಂದ ಮೇ ತಿಂಗಳವರೆಗೆ ಜಿಲ್ಲೆಯಲ್ಲಿ 234.4 ಮಿ.ಮೀ. ಸಾಮಾನ್ಯ ಮಳೆಯಾಗುತ್ತದೆ. ಇದೇ ತಿಂಗಳಲ್ಲಿ ಕಳೆದ ವರ್ಷ ಸರಾಸರಿ 170.6 ಮಿ.ಮೀ. ಮಳೆ ದಾಖಲಾಗಿತ್ತು. ಈ ವರ್ಷ ಮೇ 8 ರವರೆಗೆ 136.0 ಮಿ.ಮೀ. ಮಳೆಯಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 98.3 ಮೀ.ಮೀ. ಮಳೆಯಾಗಿತ್ತು.
ದಿನದ ಮಳೆ: ಗುರುವಾರ ಬೆಳ್ತಂಗಡಿಯಲ್ಲಿ 46.6 ಮಿ.ಮೀ. ಮಳೆಯಾಗಿದ್ದರೆ, ಪುತ್ತೂರಿನಲ್ಲಿ 2.6 ಮಿ.ಮೀ. ಅತಿ ಕಡಿಮೆ ಮಳೆ ಸುರಿದಿತ್ತು. ಬಂಟ್ವಾಳದಲ್ಲಿ 13.5 ಮಿ.ಮೀ., ಮಂಗಳೂರು 7.0 ಮಿ.ಮೀ. ಹಾಗೂ ಸುಳ್ಯದಲ್ಲಿ 5.4 ಮಿ.ಮೀ. ಮಳೆ ದಾಖಲಾಗಿದೆ.
ನಗರದಲ್ಲಿ ಗುರುವಾರ ದಿನವಿಡೀ ಸಾಧಾರಣಾ ಮಳೆ ಸುರಿದಿದೆ. ಪರಿಣಾಮ ನಗರದ ತಗ್ಗು ಪ್ರದೇಶಗಳಲ್ಲಿ ಕೃತಕ ನೆರೆ ಸೃಷ್ಟಿಯಾಗಿದೆ. ಅಲ್ಲದೆ ವಾಹನ ಸಂಚಾರ ಅಸ್ತವ್ಯಸ್ತಗೊಂಡಿದ್ದು, ಆಗಾಗ ಟ್ರಾಫಿಕ್ ಜಾಮ್ ಉಂಟಾಗಿತ್ತು.
ಪಂಪ್ವೆಲ್ ಟ್ರಾಫಿಕ್ ಜಾಮ್: ಪಂಪ್ವೆಲ್ ವೃತ್ತದಲ್ಲಿ ರಸ್ತೆ ಕಾಮಗಾರಿ ಸಂದರ್ಭ ತೆಗೆದು ಹಾಕಲಾಗಿದ್ದ ಮಣ್ಣು ರಸ್ತೆಯಿಡೀ ಹರಡಿದ್ದು, ಪ್ರಯಾಣಿಕರು, ವಾಹನ ಸವಾರರು ನಡೆದಾಡಲು ಹರಸಾಹಸಪಟ್ಟರು. ಪಂಪ್ವೆಲ್ನಿಂದ ತೊಕ್ಕೊಟ್ಟುವರೆಗಿನ ರಸ್ತೆ ಕೆಸರುಮಯಗೊಂಡಿತ್ತು. ನೇತ್ರಾವತಿ ಸೇತುವೆ ಬಳಿ ಮಣ್ಣು ಹಾಕಿದ ರಸ್ತೆಯಲ್ಲಿ ಕೆಲವೊಂದು ವಾಹನಗಳು ಹೂತು ಹೋದ ಪರಿಣಾಮ ಗಂಟೆಗಟ್ಟಲೆ ವಾಹನಗಳು ಸರತಿ ಸಾಲಿನಲ್ಲಿ ನಿಲ್ಲಬೇಕಾಯಿತು. ಮದುವೆ ಸಮಾರಂಭಕ್ಕೆ ತೆರಳಿದ್ದ ಜನರು ಒಂದು ಗಂಟೆಗೂ ಹೆಚ್ಚು ಪಂಪ್ವೆಲ್ನಿಂದ ಜಪ್ಪಿನಮೊಗರು ನೇತ್ರಾವತಿ ಸೇತುವೆವರೆಗಿನ ಟ್ರಾಫಿಕ್ ಜಾಮ್ನಲ್ಲಿ ಸಿಕ್ಕಿ ಹಾಕಿಕೊಳ್ಳಬೇಕಾಯಿತು. ನಗರದಲ್ಲಿ ಪಿವಿಎಸ್ ವೃತ್ತದಿಂದ ಜ್ಯೋತಿ ವೃತ್ತದವರೆಗೆ ದಿನವಿಡೀ ಟ್ರಾಫಿಕ್ ಜಾಮ್ ಉಂಟಾಗಿತ್ತು.
ದ್ವಿಚಕ್ರ ಸವಾರರು ಇಲ್ಲಿ ಸಂಚರಿಸಲು ಪರದಾಡಿದರೆ, ಸಮಾರಂಭಕ್ಕೆ ತೆರಳುತ್ತಿದ್ದ ಜನರು ನಡೆದಾಡಲು ಕಷ್ಟಪಡುವಂತಾಯಿತು. ಕೆಡವಿ ಹಾಕಿದ ಪೆಂಟಗಾನ್ ಹೊಟೇಲ್ ಎದುರು ಮಳೆ ನೀರು ನಿಂತು ಕೆರೆಯಂತಾಗಿದೆ.
ತುಂಬೆ ರಾಷ್ಟ್ರೀಯ ಹೆದ್ದಾರಿಯಲ್ಲಿ ರಸ್ತೆಯಲ್ಲಿ ನೀರು ತುಂಬಿಕೊಂಡು ಕೃತಕ ನೆರೆ ಸೃಷ್ಟಿಯಾಗಿತ್ತು. ದಿನವಿಡೀ ಸುರಿದ ಮಳೆಗೆ ನದಿಯಲ್ಲಿ ನೀರಿನ ಹರಿವು ಹೆಚ್ಚಾಗಿದ್ದು, ತುಂಬಿ ಹರಿಯುತ್ತಿದೆ.
ಸೆಂಟ್ರಲ್ ಮಾರ್ಕೆಟ್ ಬಳಿ ಹಾಗೂ ಕುದ್ರೋಳಿಗೆ ತೆರಳುವ ಕಾಂಕ್ರೀಟ್ ರಸ್ತೆ ಬದಿ ಸರಿಪಡಿಸದ ಕಾರಣ ತಗ್ಗು ಪ್ರದೇಶದಲ್ಲಿ ನೀರು ನಿಂತು ಕೃತಕ ನೆರೆ ಸೃಷ್ಟಿಯಾಗಿತ್ತು.