ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಕೊರಗ ಹುಡುಗಿಗೆ ಶೇ.93.50 ಅಂಕ

Mainashree
Updated On : 9 May 2014, 10:52 am

 ವಿಶೇಷ ವರದಿ
ಉಡುಪಿ: ಇಂದಿಗೂ ತೀರ ಹಿಂದುಳಿದಿರುವ ಕೊರಗ ಬುಡಕಟ್ಟು ಸಮುದಾಯದ ವಿದ್ಯಾರ್ಥಿನಿಯೊಬ್ಬಳು ಪ್ರಥಮ ಬಾರಿಗೆ ಪಿ.ಯು. ಪರೀಕ್ಷೆಯಲ್ಲಿ ಶೇ.93.50 ಅಂಕ ಗಳಿಸಿದ್ದು, ಮುಂದೆ ಈ ಸಮುದಾಯದ ಪ್ರಥಮ ವೈದ್ಯೆಯಾಗುವ ಕನಸು ಕಾಣುತ್ತಿದ್ದಾಳೆ.
ಈಕೆ ಕುಂದಾಪುರ ತಾಲೂಕಿನ ತೆಕ್ಕಟ್ಟೆ ಸಮೀಪದ ಒಳ್ತೂರು ಗ್ರಾಮದ ಕೆ. ಸ್ನೇಹ. ಮೂಡುಬಿದಿರೆ ಆಳ್ವಾಸ್ ಪ.ಪೂ. ಕಾಲೇಜಿನ ವಿಜ್ಞಾನ ವಿಭಾಗದ ವಿದ್ಯಾರ್ಥಿನಿ. ಕೊರಗ ಸಮುದಾಯದಲ್ಲಿ ಇದುವರೆಗೆ ಯಾರೂ ಮಾಡದ ಸಾಧನೆಯನ್ನು ಈಕೆ ಮಾಡಿದ್ದಾಳೆ. ಈಕೆಯ ತಂದೆ ವಿ. ಗಣೇಶ್ ಸಮಾಜ ಸೇವಕ, ತಾಯಿ ಜಯಶ್ರೀ ಶೇಡ್ಗೇರಿ ಅಂಕೋಲದಲ್ಲಿ ಶಿಕ್ಷಕಿಯಾಗಿದ್ದಾರೆ, ಮಗಳ ಕನಸಿಗೆ ಒತ್ತಾಸೆಯಾಗಿ ನಿಂತಿದ್ದಾರೆ. ತಂಗಿ ಕೆ. ಸಾಕ್ಷಿ ಆಳ್ವಾಸ್‌ನಲ್ಲಿ ಎಸ್ಸೆಸ್ಸೆಲ್ಸಿ ವ್ಯಾಸಂಗ ಮಾಡುತ್ತಿದ್ದಾಳೆ.
ಕಾರ್ಕಳ ತಾಲೂಕಿನ ಚಾರದ ನವೋದಯ ಶಾಲೆಯಲ್ಲಿ ಶೇ.89 ಅಂಕಗಳೊಂದಿಗೆ ಎಸ್ಸೆಸ್ಸೆಲ್ಸಿ ಮುಗಿಸಿದ ಸ್ನೇಹಗೆ ಮೂಡುಬಿದಿರೆಯ ಡಾ. ಮೋಹನ್ ಆಳ್ವ ಸಂಪೂರ್ಣ ಉಚಿತವಾಗಿ ಪಿ.ಯು. ವ್ಯಾಸಂಗಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ. ಈ ಅವಕಾಶವನ್ನು ಸಂಪೂರ್ಣವಾಗಿ ಬಳಸಿಕೊಂಡ ಸ್ನೇಹ ಶೇ. 93.50 ಅಂಕ ಗಳಿಸಿದ್ದಾಳೆ.
ವೈದ್ಯೆಯಾಗುತ್ತೇನೆ: ಗುರುವಾರ ಫಲಿತಾಂಶದ ನಂತರ 'ಕನ್ನಡಪ್ರಭ'ದೊಂದಿಗೆ ತನ್ನ ಸಂತಸವನ್ನು ಹಂಚಿಕೊಂಡ ಸ್ನೇಹ ಸಿಇಟಿ ಪರೀಕ್ಷೆಯನ್ನೂ ಕಟ್ಟಿದ್ದು, ಮುಂದೆ ವೈದ್ಯೆಯಾಗುತ್ತೇನೆ, ಬಡವರ ಸೇವೆ ಮಾಡುತ್ತೇನೆ ಎನ್ನುತ್ತಾಳೆ. ವೈದ್ಯೆಯಾಗದಿದ್ದರೆ ಎಂಜಿನಿಯರ್ ಆಗುವುದಿಲ್ಲ, ಬೇರೆನಾದರೂ ಕೋರ್ಸ್ ಮಾಡುತ್ತೇನೆ ಎನ್ನುತ್ತಾಳೆ. ತನ್ನ ಸಾಧನೆಗೆ ಕಾರಣರಾದ ನವೋದಯದ ಶಿಕ್ಷಕರನ್ನು, ಆಳ್ವಾಸ್ ಪ್ರಾಧ್ಯಾಪಕರನ್ನು ನೆನೆಯುತ್ತಾಳೆ. ತನಗಿಷ್ಟ ಬಂದ ವಿಷಯವನ್ನು ವ್ಯಾಸಂಗಕ್ಕೆ ಅವಕಾಶ ಮಾಡಿಕೊಟ್ಟ ತಂದೆ- ತಾಯಿಗೆ ಕೃತಜ್ಞತೆ ಹೇಳುತ್ತಾಳೆ. ಇದುವರೆಗೆ ಆಕೆಯ ಶಿಕ್ಷಣದ ಕಾರಣಕ್ಕೆ ಆಕೆಯನ್ನು ಉಡುಪಿ ಬಿಟ್ಟು ಹೊರಗೆ ಎಲ್ಲೂ ಕರೆದುಕೊಂಡು ಹೋಗಿಲ್ಲ. ಈಗ  ಉತ್ತಮ ಫಲಿತಾಂಶ ಬಂದಿದೆ. ಆ ಖುಷಿಯಲ್ಲಿ ಶುಕ್ರವಾರ ಸಂಬಂಧಿಕರ ಜೊತೆಗೆ ಇಡಿ ಕುಟುಂಬ ಗೋವಾಕ್ಕೆ ಪ್ರವಾಸ ಹೋಗುತ್ತಿದ್ದೇವೆ ಎಂದು ತಾಯಿ ಜಯಶ್ರೀ ಹೇಳಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement