ನಳಿನ್ ಕುಮಾರ್ ಸೋಲಿಸಲು ಸ್ವಪಕ್ಷೀಯರಿಂದಲೇ ತಂತ್ರ!
ಬೆಂಗಳೂರು: ಒಳಜಗಳದಿಂದ 5 ವರ್ಷ ಅಧಿಕಾರವನ್ನು ಹಾಳು ಮಾಡಿಕೊಂಡರು, ಮತ್ತೆ ಬಂದ ಚುನಾವಣೆಯಲ್ಲಿ ಮಕಾಡೆ ಮಲಗಿದರು. ಆದರೂ ಬಿಜೆಪಿ ಮುಖಂಡರಿಗೆ ಬುದ್ಧಿ ಬಂದಂತಿಲ್ಲ. ಈಗ ಲೋಕಸಭೆ ಚುನಾವಣೆಯಲ್ಲಿಯೂ ಇದೇ ಪರಿಸ್ಥಿತಿ ಮುಂದುವರಿದಿರುವುದು ಮತ್ತೊಮ್ಮೆ ಬಹಿರಂಗವಾಗಿದೆ.
ಮಂಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ನಳೀನ್‌ಕುಮಾರ್ ಕಟೀಲ್ ಅವರನ್ನು ಸೋಲಿಸಲು ಸ್ಥಳೀಯ ಬಿಜೆಪಿ ಮುಖಂಡರೇ ಕೆಲಸ ಮಾಡಿರುವುದು ಈಗ ಬಹಿರಂಗವಾಗಿದೆ. ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ಶ್ರೀಕರ್ ಪ್ರಭು ಅವರನ್ನು ಪಕ್ಷದಿಂದ 6 ವರ್ಷ ಕಾಲ ಉಚ್ಛಾಟಿಸಲಾಗಿದ್ದರೆ, ರಾಷ್ಟ್ರೀಯ ಸುರಕ್ಷಾ ಪ್ರಕೋಷ್ಟದ ಸದಸ್ಯ ಪಿ.ಪಿ. ಹೆ ಗ್ಡೆ ಪದಮುಕ್ತಗೊಳಿಸಲಾಗಿದೆ. ಪಕ್ಷ ವಿರೋಧಿ ಚಟುವಟಿಕೆಯೇ ಇದಕ್ಕೆ ಕಾರಣ. ರಾಜ್ಯವನ್ನು 5 ವರ್ಷಗಳ ಕಾಲ ಆಳಿದ್ದ ಬಿಜೆಪಿ ಆಂತರಿಕ ಕಚ್ಚಾಟದಿಂದಲೇ ಅಧಿಕಾರದಿಂದ ಕೆಳಗಿಳಿಯುವಂತಾಯಿತು. ವಿಧಾನಸಭೆ ಚುನಾವಣೆಗೆ ಮುಂಚೆಯೇ ಪಕ್ಷದ ಆಂತರಿಕ ಕಚ್ಚಾಟಕ್ಕೆ ಜನ ಬೇಸತ್ತಿರುವುದು ತಿಳಿದು ಬಿಜೆಪಿ ಸುಧಾರಿಸಿಕೊಂಡಿರಲಿಲ್ಲ. ಆ ಬಳಿಕ ನಡೆದ ವಿಧಾನಸಭೆ ಚುನಾವಣೆಯಲ್ಲಿ ಆಡಳಿತ ವಿರೋಧಿ ಅಲೆಯ ಜತೆಗೆ ಆಂತರಿಕ ಗೊಂದಲವೂ ಪರಿಣಾಮ ಬೀರಿತ್ತು. ಬಿಜೆಪಿ ಪ್ರತಿಪಕ್ಷದಲ್ಲಿ ಕೂರಲೇ ಲೇಸು ಎಂದು ಜನ ತೀರ್ಪು ನೀಡಿದ ಬಳಿಕವು ಬಿಜೆಪಿ ನಾಯಕರಿಗೆ ಬುದ್ಧಿ ಬಂದಂತಿಲ್ಲ.
ಚುನಾವಣೆ ಮುಗಿದ ಎರಡು ವಾರದಲ್ಲಿ ಮಂಗಳೂರು ಲೋಕಸಭೆ ಕ್ಷೇತ್ರದ ಭಿನ್ನಮತ ಚಟುವಟಿಕೆಗಳು ಹೊರಬಿದ್ದಿವೆ. ಇನ್ನು ಫಲಿತಾಂಶ ಹೊರಬಂದರೆ ಇನ್ನಷ್ಟು ಇಂತಹ ಪ್ರಕರಣಗಳು ಹೊರಬೀಳಬಹುದು. ಗುರುವಾರ ಮಂಗಳೂರು ಬಿಜೆಪಿಯಲ್ಲಿ ನಡೆದ ಉಚ್ಛಾಟನೆಗಳು ಇನ್ನಷ್ಟು ನಡೆಯಬಹುದೆಂಬ ಅಂದಾಜಿದೆ.
ನಗರ ಬಿಜೆಪಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದ ಶ್ರೀಕರ್ ಪ್ರಭು ಮಂಗಳೂರು ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಬಯಸಿದ್ದರು. ಆದರೆ ಯೋಗೀಶ್ ಭಟ್ ಅವರಿಗೆ ಟಿಕೇಟ್ ನೀಡಲು ಪಕ್ಷ ನಿರ್ಧರಿಸಿತ್ತು. ಆ ಸಂದರ್ಭದಲ್ಲಿಯೂ ಭಟ್ ಅವರ ಸೋಲಿಗೆ ಪ್ರಭು ಅವರೇ ಕಾರಣವಾಗಿದ್ದರು ಎಂದು ಬಿಜೆಪಿಗೆ ದೂರು ಸಲ್ಲಿಸಲಾಗಿತ್ತು. ಆದರೆ ಅಂದು ಪಕ್ಷವು ಶಿಸ್ತು ಕ್ರಮಕ್ಕೆ ಮುಂದಾಗದ ಪರಿಣಾಮದಿಂದ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಬೆಲೆ ತೆತ್ತಬೇಕಾಯಿತು.
ಮಂಗಳೂರು ಲೋಕಸಭಾ ಕ್ಷೇತ್ರದ ಟಿಕೆಟ್ ಮೇಲೆ ಕಣ್ಣಿಟ್ಟಿದ್ದ ನ್ಯಾಯವಾದಿ ಪಿ.ಪಿ. ಹೆಗ್ಡೆ ಅವರ ಜತೆ ಸೇರಿ ಶ್ರೀಕರ್ ಪ್ರಭು ಅವರು ಕಟೀಲ್ ವಿರುದ್ಧ ಪ್ರಚಾರ ನಡೆಸಿದ್ದರು. ಇದಲ್ಲದೇ ಚುನಾವಣೆಗೆ ಎರಡು ದಿನ ಇರುವಾಗ ಸುದತ್ತ ಜೈನ್ ಮೂಲಕ ಪತ್ರಿಕಾಗೋಷ್ಠಿ ನಡೆಸಿ ಕಟೀಲ್ ವಿರುದ್ಧ ಅವಹೇಳನಕಾರಿ ಮಾಹಿತಿಗಳನ್ನು ಬಿಡುಗಡೆ ಮಾಡಿಸಿದ್ದರು ಎಂದು ಜಿಲ್ಲಾ ಬಿಜೆಪಿ ಆರೋಪಿಸಿದೆ. ಇದನ್ನು ಆಧರಿಸಿ ಚಪಕ್ಷದಿಂದ ಇಬ್ಬರೂ ಮುಖಂಡರನ್ನು ಉಚ್ಛಾಟಿಸಲಾಗಿದೆ.