ಪಿಯುಸಿ: ರಾಜ್ಯಕ್ಕೆ ದ.ಕ. ಪ್ರಥಮ
ಮಂಗಳೂರು: ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ದ.ಕ.ಜಿಲ್ಲೆಗೆ ಪ್ರಥಮ ಸ್ಥಾನ ಲಭಿಸಿದೆ. ವಿಜ್ಞಾನ ವಿಭಾಗದಲ್ಲಿ ಪ್ರಥಮ ಹಾಗೂ ದ್ವಿತೀಯ ರ್ಯಾಂಕ್ ಕೂಡ ಮಂಗಳೂರಿಗೆ ಬಂದಿದೆ. ಮಂಗಳೂರು ಕೆನರಾ ಪಿಯು ಕಾಲೇಜಿನ ವೆಂಕಟೇಶ ಕಾಮತ್ ಪ್ರಥಮ(594 ಅಂಕ) ಮತ್ತು ಇದೇ ಕಾಲೇಜಿನ ಪೂಜಾ ಬಾಳಿಗಾ (593 ಅಂಕ)ದ್ವಿತೀಯ ಸ್ಥಾನ ಪಡೆದಿದ್ದಾರೆ. ಈ ಇಬ್ಬರೂ ಮುಂದೆ ಎಂಜಿನಿಯರಿಂಗ್ ಮಾಡುವ ಬಯಕೆ ವ್ಯಕ್ತಪಡಿಸಿದ್ದಾರೆ.
ವೆಂಕಟೇಶ್ ಕಾಮತ್‌ಗೆ ಭೌತಶಾಸ್ತ್ರ 99, ಎಲೆಕ್ಟ್ರಾನಿಕ್ಸ್, ಗಣಿತ, ರಸಾಯನಶಾಸ್ತ್ರದಲ್ಲಿ ತಲಾ ನೂರು, ಸಂಸ್ಕೃತ 98, ಇಂಗ್ಲಿಷ್‌ನಲ್ಲಿ 97 ಅಂಕ ಗಳಿಸಿದ್ದಾರೆ. ಇವರು ಪದವಿನಂಗಡಿ ನಿವಾಸಿ ಉದ್ಯಮಿ ಜಿ.ಸುರೇಶ್ ಕಾಮತ್ ಮತ್ತು ಸುಧಾ ಕಾಮತ್ ಪುತ್ರ. ಇವರ ಇಬ್ಬರು ಸಹೋದರಿಯರು ಕಾಲೇಜಿನಲ್ಲಿ ಓದುತ್ತಿದ್ದಾರೆ. ಎಸ್‌ಎಸ್‌ಎಲ್‌ಸಿಯಲ್ಲಿ ಶೇ.96 ಅಂಕ ಪಡೆದಿದ್ದ ವೆಂಕಟೇಶ ಕಾಮತ್ ಪಿಯುನಲ್ಲಿ ಸಂಜೆ ಬಾಸ್ಕೋಸ್‌ನಲ್ಲಿ ಟ್ಯೂಷನ್ ಪಡೆಯುತ್ತಿದ್ದರು. 'ಕಾಲೇಜಿನಲ್ಲಿ ಹಾಗೂ ಮನೆಯಲ್ಲಿ ಓದಲು ಪ್ರೋತ್ಸಾಹ ಸಿಕ್ಕಿದೆ. ಆದರೆ ರಾಜ್ಯಕ್ಕೆ ಪ್ರಥಮ ಬರುವ ನಿರೀಕ್ಷೆ ಇರಲಿಲ್ಲ. ಪ್ರಥಮ ರ್ಯಾಂಕ್ ಪಡೆದಿರುವುದು ಖುಷಿ ಕೊಟ್ಟಿದೆ. ಸಿಇಟಿ ಪರೀಕ್ಷೆ ಬರೆದಿದ್ದೇನೆ, ಎಂಜಿನಿಯರಿಂಗ್ ಕಲಿಯುವ ಆಶೆ ಇದೆ' ಎನ್ನುತ್ತಾರೆ ಅವರು.
ರ್ಯಾಂಕ್ ನಿರೀಕ್ಷಿತ: ಪೂಜಾ
ದ್ವಿತೀಯ ಸ್ಥಾನ ಗಳಿಸಿದ ಪೂಜಾ ಬಾಳಿಗ ಭೌತಶಾಸ್ತ್ರ, ಗಣಿತ, ಸಂಖ್ಯಾಶಾಸ್ತ್ರ ಹಾಗೂ ಸಂಸ್ಕೃತದಲ್ಲಿ ತಲಾ ನೂರು ಅಂಕ ಗಳಿಸಿದ್ದಾರೆ. ಇಂಗ್ಲಿಷ್ 95 ಹಾಗೂ ರಸಾಯನಶಾಸ್ತ್ರದಲ್ಲಿ 98 ಅಂಕ ಪಡೆದಿದ್ದಾರೆ. ಉರ್ವಸ್ಟೋರ್ ಬಳಿಯ ನಿವಾಸಿ. ತಂದೆ ರಾಧಾಕೃಷ್ಣ ಓರಿಯಂಟಲ್ ಇನ್ಸೂರೆನ್ಸ್ ಕಂಪನಿ ಉದ್ಯೋಗಿ, ತಾಯಿ ಚಂದ್ರಿಕಾ ಮಂಗಳೂರು ಆಕಾಶವಾಣಿ ಉದ್ಯೋಗಿ. 'ಕಾಲೇಜಿನಲ್ಲಿ ಕಲಿತದ್ದಲ್ಲದೆ ಕೋಚಿಂಗ್ ತೆಗೆದುಕೊಂಡಿದ್ದೇನೆ. ತನಗೆ ರ್ಯಾಂಕ್ ಬರುವ ನಿರೀಕ್ಷೆ ಇತ್ತು. ಮುಂದೆ ಎಂಜಿನಿಯರಿಂಗ್ ಕಲಿಯುತ್ತೇನೆ' ಎನ್ನುತ್ತಾರೆ. ಈಕೆಗೆ ಎಸ್‌ಎಸ್‌ಎಲ್‌ಸಿಯಲ್ಲಿ ಶೇ.97 ಅಂಕ ಬಂದಿತ್ತು.