ಬೇರೆ ಭಾಷಾ ಸಾಹಿತ್ಯ ನಮ್ಮ ಭಾಷೆಯಲ್ಲೇ ಓದಬಹುದು!
ಮಣಿಪಾಲ: ಕನ್ನಡ ಸಾಹಿತ್ಯ ಲೋಕದಲ್ಲಿ ಕಂಪ್ಯೂಟರ್ ಬಳಕೆ ಸುಲಭವಾಗುವಂತೆ ಕಿಬೋರ್ಡ್ ವಿನ್ಯಾಸಗೊಳಿಸಿದ, ತಮ್ಮದೇ ಹೆಸರಿನ ಕೆ.ಪಿ. ರಾವ್ ಎಂಬ ಕನ್ನಡ ಅಕ್ಷರವಿನ್ಯಾಸ (ಲಿಪಿ ಅಥವಾ ಫಾಂಟ್) ರಚಿಸಿ ಪ್ರಸಿದ್ಧರಾಗಿರುವ ಸಂಶೋಧಕ ಕೆ.ಪಿ. ರಾವ್ ಇದೀಗ ಇನ್ನೊಂದು ಮೈಲಿಗಲ್ಲು ನೆಟ್ಟಿದ್ದಾರೆ.
ವಿಶ್ವದಲ್ಲಿಯೇ ಪ್ರಥಮ ಬಾರಿಗೆ ಬೇರೆ ಭಾಷೆಗಳ ಸಾಹಿತ್ಯವನ್ನು ನಮಗೆ ಬೇಕಾದ ಭಾಷೆಯ ಲಿಪಿಯಲ್ಲಿ ಓದಲು ಸಾಧ್ಯವಾಗುವಂತಹ ಸಾಫ್ಟ್‌ವೇರ್‌ನ್ನು ಅವರು ಅಭಿವೃದ್ಧಿಪಡಿಸಿದ್ದಾರೆ. ಇದರಿಂದ ಸದ್ಯಕ್ಕೆ ದೇವನಾಗರಿ ಲಿಪಿಯಲ್ಲಿರುವ ಸಾಹಿತ್ಯವನ್ನು ಕನ್ನಡ ಲಿಪಿಯಲ್ಲಿ ಓದಲು ಸಾಧ್ಯವಾಗುತ್ತಿದೆ. ಇನ್ನಷ್ಟು ಸಂಶೋಧನೆಗಳು ನಡೆದರೆ ಮುಂದೆ ಎಲ್ಲ ಭಾಷೆಯ ಲಿಪಿಗಳಲ್ಲಿ ಓದಲು ಸಾಧ್ಯವಾಗಲಿದೆ.
ಮೊಮ್ಮಗಳೂ ಭಾಗಿ: ಈ ಬಾರಿ ಅವರ ಈ ಸಾಧನೆಯಲ್ಲಿ ಅವರ ಮೊಮ್ಮಗಳು ಅದಿತಿ ಬಾಗಲೋಡಿ ಕೂಡ ಪಾಲುದಾರಳಾಗಿದ್ದಾಳೆ. ಕೆ.ಪಿ. ರಾವ್ ಕಂಡು ಹಿಡಿರುವ ಲಿಪಿಯನ್ನು 'ದೇವಮ್' ಎಂದವರು ಹೆಸರಿಸಿದ್ದಾರೆ. ಇದನ್ನೇ ಅಧಾರವಾಗಿಟ್ಟುಕೊಂಡು ಅದಿತಿ ಸೃಷ್ಟಿಸಿರುವ ಲಿಪಿಗೆ 'ವಿ-ಅದಿತಿ' ಎಂದು ಆಕೆ ಹೆಸರಿಟ್ಟಿದ್ದಾರೆ. ಗುರುವಾರ ಮಣಿಪಾಲದ ಸ್ಕೂಲ್ ಆಫ್ ಕಮ್ಯುನಿಕೇಶನ್‌ನಲ್ಲಿ ಈ ಲಿಪಿಗಳನ್ನು ಲೋಕಾರ್ಪಣೆ ಮಾಡಲಾಯಿತು. ಪ್ರಸ್ತುತ ಒಂದು ಭಾಷೆಯ ಸಾಹಿತ್ಯವನ್ನು ಯಾವುದಾದರೊಂದು ಲಿಪಿಯಲ್ಲಿ ಬರೆದಾಗ ಓದುಗನಿಗೆ ಅದನ್ನು ಅರ್ಥ ಮಾಡಿಕೊಳ್ಳುವುದಕ್ಕೆ ಆ ಲಿಪಿಯ ಸಂಪೂರ್ಣ ಜ್ಞಾನ ಬೇಕಾಗಿರುತ್ತದೆ. ಉದಾ- ಸಂಸ್ಕೃತವನ್ನು ದೇವನಾಗರಿ ಲಿಪಿಯಲ್ಲಿ ಬರೆದರೆ ಅದನ್ನು ಓದುವುದಕ್ಕೆ ದೇವನಾಗರಿ ಲಿಪಿಯ ಪೂರ್ಣ ಜ್ಞಾನ ಅಗತ್ಯವಾಗಿರುತ್ತದೆ. ಆದರೆ ಕೆ.ಪಿ. ರಾವ್ ಅವರ ದೇವಮ್ ಸಾಫ್ಟ್‌ವೇರ್ ಮೂಲಕ ದೇವನಾಗರಿ ಲಿಪಿಯಲ್ಲಿ ಬರೆಯಲಾಗಿರುವ ಸಂಸ್ಕೃತ ಸಾಹಿತ್ಯವನ್ನು ಕನ್ನಡ ಲಿಪಿಗೆ ಬದಲಾಯಿಸಿಕೊಂಡು ಸಂಸ್ಕೃತ ಭಾಷೆಯಲ್ಲಿಯೇ ಸರಾಗವಾಗಿ ಓದಬಹುದು.
ಅದೇ ರೀತಿ ವಿ-ಅದಿತಿ ಸಾಫ್ಟ್‌ವೇರ್ ಮೂಲಕ ದೇವನಾಗರಿ ಲಿಪಿಯಲ್ಲಿರುವ ಸಂಸ್ಕೃತ ಸಾಹಿತ್ಯವನ್ನು ಇಂಗ್ಲಿಷ್ ಲಿಪಿಗೆ ಬದಲಾಯಿಸಿಕೊಂಡು ಸಂಸ್ಕೃತದಲ್ಲಿಯೇ ಓದಬಹುದು. ಇಲ್ಲಿ ಯಾವುದೇ ಭಾಷಾಂತರ ನಡೆಯುವುದಿಲ್ಲ, ಕೇವಲ ಲಿಪ್ಯಂತರ ನಡೆಯುತ್ತದೆ ಅಷ್ಟೇ. ಈ ನೂತನ ಅವಿಷ್ಕಾರದಿಂದ ಸ್ವಂತ ಲಿಪಿ ಇಲ್ಲದ ತುಳು, ಕೊಡವ, ಕೊಂಕಣಿಯಂತಹ ಸಾಹಿತ್ಯವನ್ನು ಬೇರೆ ಬೇರೆ ಭಾಷೆಯ ಲಿಪಿಯಲ್ಲಿ ಆಯಾ ಭಾಷೆಯಲ್ಲಿಯೇ ಓದುವುದಕ್ಕೆ ಸಾಧ್ಯವಾಗುತ್ತದೆ ಎನ್ನುತ್ತಾರೆ ರಾವ್.