ಸುಳ್ಯ: ಭಾರಿ ಮಳೆಗೆ ಜನಜೀವನ ಅಸ್ತವ್ಯಸ್ತ
ಸುಳ್ಯ: ತಾಲೂಕಿನಾದ್ಯಂತ ಗುರುವಾರ ಬೆಳಗ್ಗಿನಿಂದಲೇ ಸುರಿದ ಜಡಿಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿದೆ.
ಬೆಳಗ್ಗಿನಿಂದ ಬಿಡದೆ ಸುರಿಯುತ್ತಿರುವ ಮಳೆಯಿಂದ ಅಲ್ಲಲ್ಲಿ ತಗ್ಗು ಪ್ರದೇಶಗಳು ನೀರಿನಿಂದ ತುಂಬಿವೆ. ಮಳೆ ನೀರು ಚರಂಡಿ ಬಿಟ್ಟು ರಸ್ತೆಯಲ್ಲೇ ಹರಿಯತೊಡಗಿದೆ. ಮಣ್ಣು ತೇವಗೊಂಡು ಅಲ್ಲಲ್ಲಿ ವಾಹನಗಳು ಮಣ್ಣಿನಲ್ಲಿ ಹೂತುಹೋಗಿವೆ. ಕೆಲವೆಡೆ ಗಾಳಿಗೆ ಮರಗಳು ರಸ್ತೆಗೆ ಉರುಳಿ ಬಿದ್ದು ಸಂಚಾರಕ್ಕೆ ತಡೆಯುಂಟಾಗಿದೆ. ಗುರುವಾರ ಅಲ್ಲಲ್ಲಿ ವಿವಾಹ ಸಮಾರಂಭಗಳು ನಡೆದಿದ್ದು, ವರ್ಷಧಾರೆಯಿಂದ ಇವರಿಗೂ ತೊಂದರೆ ಉಂಟಾಯಿತು. ಪೈಚಾರಿನಲ್ಲಿ ನೂತನ ಸೇತುವೆ ಕಾಮಗಾರಿ ನಡೆಯುತ್ತಿರುವುದರಿಂದ ಹಳೆ ಸೇತುವೆ ಕಿರಿದಾಗಿದ್ದು, ಇಲ್ಲಿ ಟ್ರಾಫಿಕ್ಜಾಮ್ ಉಂಟಾಗುತ್ತಿದೆ.
ಮನೆಗೆ ಹಾನಿ: ಐನೆಕಿದು ಗ್ರಾಮದ ಪೈಲಾಜೆ ನಿವಾಸಿ ಬೆಳ್ಯಪ್ಪ ಆಚಾರಿ ಎಂಬವರ ಮನೆಗೆ ಮಂಗಳವಾರ ಸಿಡಿಲು ಬಡಿದು ಹಾನಿಯಾಗಿದೆ.
ಸಿಡಿಲು ಬಡಿದ ರಭಸಕ್ಕೆ ಮನೆಗೆ ಅಳವಡಿಸಲಾದ ವಿದ್ಯುತ್ ಸಂಪರ್ಕ, ವಯರಿಂಗ್ ಸಂಪೂರ್ಣ ಸುಟ್ಟು ಕರಕಲಾಗಿದೆ. ಮನೆಯ ಛಾವಣಿ ಶಿಥಿಲಗೊಂಡಿದ್ದು, ಗೋಡೆಗಳಿಗೆ ಹಾನಿಯಾಗಿದೆ. ಕುಡಿಯುವ ನೀರಿನ ಯಂತ್ರ ಸುಟ್ಟು ಹೋಗಿದೆ.