ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಒಂದೇ ಕುಟುಂಬದ ನಾಲ್ವರ ಆತ್ಮಹತ್ಯೆ

Mainashree
Updated On : 11 May 2014, 10:45 am

ಸುಬ್ರಹ್ಮಣ್ಯ: ಸುಬ್ರಹ್ಮಣ್ಯ ಕ್ಷೇತ್ರ ದರ್ಶನಕ್ಕಾಗಿ ಬೆಂಗಳೂರಿನಿಂದ ಆಗಮಿಸಿದ್ದ ಒಂದೇ ಕುಟುಂಬದ ನಾಲ್ವರು ವಸತಿಗೃಹದಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಶನಿವಾರ ಸಂಜೆ ಬೆಳಕಿಗೆ ಬಂದಿದೆ.
 ಮೇ 7ರಂದು ಮುಂಜಾನೆ 5 ಗಂಟೆಗೆ ಬೆಂಗಳೂರಿನ ರಾಜಾಜಿನಗರದ ಕಿಲೋರಿ ರಸ್ತೆಯ ನಿವಾಸಿ ಎಂದು ಸುಬ್ರಹ್ಮಣ್ಯದ ಖಾಸಗಿ ವಸತಿಗೃಹವೊಂದರಲ್ಲಿ ವಿಳಾಸ ನೀಡಿ ಕೊಠಡಿ ಪಡೆದ ನಂಜುಂಡಯ್ಯ (42), ಪತ್ನಿ ಜಯಲಕ್ಷ್ಮಿ (35), ಪುತ್ರ ಪವನ್ (16), ಪುತ್ರಿ ಶ್ರೀಲಕ್ಷ್ಮಿ (13) ಮೃತರು. ನಂಜುಂಡಯ್ಯ ಹಣೆಗೆ ವಿಭೂತಿ ಹಚ್ಚಿದ್ದು, ಪತ್ನಿ ಮತ್ತು ಪುತ್ರನ ಕೈಯಲ್ಲಿ ಎರಡು ಬ್ಯಾಗ್ ಇರುವುದು ಅವರು ವಸತಿಗೃಹಕ್ಕೆ ಪ್ರವೇಶಿಸಿದ ವೇಳೆ ಸಿಸಿ ಕ್ಯಾಮರಾದಲ್ಲಿ ದಾಖಲಾಗಿದೆ.
ದೇವರ ದರ್ಶನ ಮಾಡಿದ್ದರು..: ನಂಜುಂಡಯ್ಯ ಕುಟುಂಬವು ವಸತಿಗೃಹದ ನಾಲ್ಕನೇ ಮಹಡಿಯಲ್ಲಿ ಕೊಠಡಿ ಪಡೆದು ತಂಗಿದ್ದರು. ಬುಧವಾರ ದೇವರ ದರ್ಶನ ಮಾಡಿ ವಸತಿಗೃಹಕ್ಕೆ ಹಿಂತಿರುಗಿದ್ದರು ಎಂದು ತಿಳಿದುಬಂದಿದೆ. ಕೊಠಡಿ ಪಡೆದು ನಾಲ್ಕು ದಿನವಾದರೂ ಈ ಕುಟುಂಬ ಕೊಠಡಿ ತೆರವುಗೊಳಿಸಿರಲಿಲ್ಲ. ಶನಿವಾರ ಮಧ್ಯಾಹ್ನ ಕೊಠಡಿಯ ಹೊರಗೆ ದುರ್ನಾತ ಬರುತ್ತಿದ್ದುದನ್ನು ಗಮನಿಸಿದ ರೂಂ ಬಾಯ್ ಮಾಲೀಕರಿಗೆ ವಿಷಯ ತಿಳಿಸಿದರು. ಬಳಿಕ ಪೊಲೀಸರು ವಸತಿ ಗೃಹಕ್ಕೆ ಆಗಮಿಸಿ ನಂಜುಂಡಯ್ಯ ತಂಗಿದ್ದ ಕೊಠಡಿಯನ್ನು ಹೊರಗಿನಿಂದ ಕಿಟಕಿ ಮೂಲಕ ನೋಡಿದಾಗ ನಾಲ್ವರು ಹಾಸಿಗೆ ಮೇಲೆ ಶವವಾಗಿರುವುದು ಕಂಡುಬಂದಿದೆ. ಇವರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಶಂಕಿಸಲಾಗಿದ್ದು, ಕಾರಣ ತಿಳಿದು ಬಂದಿಲ್ಲ.
 ಕೊಠಡಿಯ ಬಾತ್‌ರೂಂನಲ್ಲಿ ಒದ್ದೆ ಬಟ್ಟೆಗಳಿದ್ದು, ಬಾತ್ ರೂಂನ ಲೈಟ್ ಉರಿಯುತ್ತಿರುವುದು ಗಮನಕ್ಕೆ ಬಂದಿದೆ. ಬುಧವಾರ ಅಥವಾ ಗುರುವಾರ ರಾತ್ರಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ.
 ಮೃತರ ಕುಟುಂಬದವರಿಗೆ ಮಾಹಿತಿ ರವಾನಿಸಲಾಗಿದ್ದು, ಅವರು ಸುಬ್ರಹ್ಮಣ್ಯದತ್ತ ಪ್ರಯಾಣ ಬೆಳೆಸಿದ್ದಾರೆ. ಸುಬ್ರಹ್ಮಣ್ಯ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು, ಸುಳ್ಯ ವೃತ್ತ ನಿರೀಕ್ಷಕರು ಬಂದ ನಂತರವೇ ಕೊಠಡಿಯ ಬಾಗಿಲನ್ನು ಮೃತರ ಸಂಬಂಧಿಕರು, ವಸತಿ ಗೃಹದವರು ಹಾಗೂ ಸಾರ್ವಜನಿಕರ ಸಮಕ್ಷಮದಲ್ಲಿ ತೆರೆಯಲಾಗುವುದು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement