ತುಂಬೆ ಆಸ್ಪತ್ರೆ ಡಯಾಲಿಸಿಸ್ ಘಟಕ ಉದ್ಘಾಟನೆ ನಾಳೆ
ಮಂಗಳೂರು: ತುಂಬೆ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರ ಹಾಗೂ ನೂತನ ಡಯಾಲಿಸಿಸ್ ಘಟಕದ ಉದ್ಘಾಟನೆ ಮೇ 14ರಂದು ನೆರವೇರಲಿದೆ.
ಬೆಳಗ್ಗೆ 9ಕ್ಕೆ ಆರೋಗ್ಯ ಸಚಿವ ಯು.ಟಿ.ಖಾದರ್ ಘಟಕ ಉದ್ಘಾಟಿಸಲಿದ್ದು, ಜಿಲ್ಲಾ ಪಂಚಾಯ್ತಿ ಸದಸ್ಯೆ ಮಮತಾ ಗಟ್ಟಿ, ತುಂಬೆ ಗ್ರಾಮ ಪಂಚಾಯ್ತಿ ಅಧ್ಯಕ್ಷ ಮೊಹಮ್ಮದ್ ವಳವೂರು ಅತಿಥಿಯಾಗಿ ಪಾಲ್ಗೊಳ್ಳುವರು. ಮಂಗಳೂರು ಧರ್ಮಪ್ರಾಂತ್ಯ ವಿಕಾರ್ ಜನರಲ್ ರೆ.ಫಾ.ಡೆನಿಸ್ ಮೊರಾಸ್ ಪ್ರಭು ಅಧ್ಯಕ್ಷತೆ ವಹಿಸುವರು ಎಂದು ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜು ಆಸ್ಪತ್ರೆಯ ಸಮುದಾಯ ವೈದ್ಯಕೀಯ ವಿಭಾಗ ಮುಖ್ಯಸ್ಥ ಡಾ.ದಾಸ್ ಆಚಾರ್ಯ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಆರೋಗ್ಯ ತಪಾಸಣೆ ಶಿಬಿರ ಬೆಳಗ್ಗೆ 9.30ರಿಂದ ಸಂಜೆ 3ರ ವರೆಗೆ ನಡೆಯಲಿದೆ. ಶಿಬಿರದಲ್ಲಿ ಜನರಲ್ ಮೆಡಿಸಿನ್, ಮಕ್ಕಳ ಚಿಕಿತ್ಸೆ, ಕಿವಿ, ಮೂಗು, ಗಂಟಲು ರೋಗ, ಸ್ತ್ರೀರೋಗ, ಚರ್ಮರೋಗ, ಕಣ್ಣಿನ ಕಾಯಿಲೆ, ಮೂಳೆ ಮತ್ತು ಎಲುಬು ರೋಗ, ಶಸ್ತ್ರಚಿಕಿತ್ಸೆ, ಮೂತ್ರಪಿಂಡ ಚಿಕಿತ್ಸೆ, ಹೃದಯಕ್ಕೆ ಸಂಬಂಧಿತ ಕಾಯಿಲೆ, ಮನೋರೋಗ ಹಾಗೂ ಹೋಮಿಯೋಪಥಿ ತಪಾಸಣೆ ನಡೆಸಲಾಗುವುದು. ಶಿಬಿರಕ್ಕೆ ಆಗಮಿಸುವವರಿಗೆ ಮಾರಿಪಳ್ಳ, ಫರಂಗಿಪೇಟೆ ಮತ್ತಿತರ ಕಡೆಗಳಿಂದ ಬೆಳಗ್ಗೆ 8.30ರಿಂದ ಮಧ್ಯಾಹ್ನ 12.30ರ ವರೆಗೆ ಉಚಿತ ವಾಹನ ವ್ಯವಸ್ಥೆ ಮಾಡಲಾಗಿದೆ ಎಂದರು.
ಅಲ್ಲದೆ ಇಸಿಜಿ, ಎಚ್ಬಿ/ಟಿಸಿ/ಡಿಸಿ, ಆರ್ಬಿಎಸ್, ಬ್ಲಡ್ ಯೂರಿಯಾ, ಸೆರಮ್ ಕ್ರಿಯಾಟಿನಿನ್, ಯೂರಿನ್ ರುಟೀನ್, ಮಕ್ಕಳಿಗೆ ಲಸಿಕೆ, ಸಿಹಿಮೂತ್ರ, ರಕ್ತದೊತ್ತಡ, ಹೃದ್ರೋಗ ತಪಾಸಣೆ, ಕ್ಯಾನ್ಸರ್ ಕಾಯಿಲೆ ಪತ್ತೆಹಚ್ಚುವಿಕೆ ಉಚಿತವಾಗಿ ನಡೆಸಲಾಗುವುದು. ಬಡವರಿಗೆ ಉಚಿತವಾಗಿ ಔಷಧ ನೀಡಲಾಗುವುದು. ಫಾದರ್ ಮುಲ್ಲರ್ ಆರೋಗ್ಯ ಕಾರ್ಡ್ ಹಾಗೂ ಎಕ್ಸ್ರೇ, ಆಲ್ಟ್ರಾಸೌಂಡ್, ಸಿಟಿ ಸ್ಕ್ಯಾನಿಂಗ್, ಇಕೋ ಶಸ್ತ್ರಚಿಕಿತ್ಸೆ, ಶೇ.50 ರಿಯಾಯ್ತಿ ದರದಲ್ಲಿ ದೊರಕುತ್ತದೆ. ಒಂದು ತಿಂಗಳ ಅವಧಿಗೆ ಉಚಿತ ಸಂದರ್ಶನ ನೀಡಲಾಗುವುದು.
ಆಸ್ಪತ್ರೆಯ ಸಹಾಯಕ ಆಡಳಿತಾಧಿಕಾರಿ ಮ್ಯೂರೆಲ್ ಡೇಸಾ, ಬಂಟ್ವಾಳ ಲಯನ್ಸ್ ಕ್ಲಬ್ ಕಾರ್ಯದರ್ಶಿ ಜಗದೀಶ್ ಎಡಪಡಿತ್ತಾಯ ಇದ್ದರು.