'ನನ್ನ ಹೆಸರಲ್ಲಿ ಕೋಟಿ ಲೂಟಿ ಮಾಡಿದ್ದಕ್ಕೆ ಆನೀಶ್ ಕೊಲೆ': ಕೊರಗ ವಿಶ್ವನಾಥ ಶೆಟ್ಟಿ
ಮಂಗಳೂರು: 'ಬಸ್ ಮಾಲೀಕ ಆನೀಶ್ ನನ್ನ ಹೆಸರಲ್ಲಿ ಕೋಟಿಗಟ್ಟಲೆ ಮಿಕ್ಕಿ ಹಣ ಮಾಡಿದ್ದಾನೆ. ತನ್ನದೇ ಗೆಳೆಯರಿಗೆ ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ವಂಚಿಸಿದ್ದಾನೆ. ತನ್ನ ಗೆಳೆಯನನ್ನು ಮುಗಿಸಲು ಹೊರಟ ಕಾರಣ ಆತನನ್ನು ಮುಗಿಸಬೇಕಾಯಿತು' ಎಂದು ಭೂಗತ ಪಾತಕಿ ಕೊರಗ ವಿಶ್ವನಾಥ ಶೆಟ್ಟಿ ಹೇಳಿದ್ದಾನೆ. 'ಕನ್ನಡಪ್ರಭ' ಕಚೇರಿಗೆ ಕರೆ ಮಾಡಿದ ವಿಶ್ವನಾಥ ಶೆಟ್ಟಿ, 'ಮಕ್ಕಳಿಗೆ, ಅಮಾಯಕರಿಗೆ ತೊಂದರೆ ಕೊಡುವುದಿಲ್ಲ. ವಾಮಂಜೂರು ರೋಹಿ ಕೊಲೆಯಲ್ಲಿ ನನ್ನದೇ ಪಾತ್ರ. ಆನೀಶ್ ತಂಗಿ ಮದುವೆಗೆ ನಾನೇ 10 ಲಕ್ಷ ಕೊಟ್ಟಿದ್ದೆ. ಆದರೆ ಆನೀಶ್ ನನ್ನ ಹೆಸರಲ್ಲಿ ಕೋರೆ ಮಾಲೀಕರಿಗೆ ಕರೆ ಮಾಡಿ ಒಂದೂವರೆ ಕೋಟಿ ಹಣ ವಸೂಲಿ ಮಾಡಿದ್ದಾನೆ. ಆತನ ಗೆಳೆಯರಿಗೂ ವಂಚಿಸಿದ್ದಾನೆ. ಆನೀಶ್ ಸಹೋದರಿ ಮದುವೆಯಲ್ಲಿ ಹೇಮಂತ್ ಮತ್ತು ಆನೀಶ್ ಒಂದಾಗಿ ಇದ್ದರೂ ಪರಸ್ಪರ ಕೊಲೆಗೆ ಸ್ಕೆಚ್ ಹಾಕುತ್ತಿದ್ದರು. ಹೇಮಂತ್ ತನ್ನನ್ನು ಕೊಲೆ ಮಾಡಲು ಆನೀಶ್ ಯತ್ನಿಸುತ್ತಿದ್ದಾನೆ ಎಂದು ನನ್ನ ಬಳಿ ಹೇಳಿದ್ದ. ಹಾಗಾದರೆ ಆನೀಶ್ನನ್ನೇ ಮುಗಿಸಿಬಿಡಿ ಎಂದು ನಾನೇ ಸೂಚನೆ ಕೊಟ್ಟೆ' ಎಂದು ಹೇಳಿದ್ದಾನೆ. ದಕ್ಷಿಣ ಕೊರಿಯಾ ಮೂಲದ ಇಂಟರ್ನೆಟ್ ಮೂಲಕ ಕರೆ ಮಾಡಿದ ಶೆಟ್ಟಿ, ತಾನು ಬ್ಯಾಂಕಾಕ್ನಲ್ಲಿರುವುದಾಗಿ ಹೇಳಿದ್ದು, ಶೀಘ್ರದಲ್ಲಿ ತನ್ನೂರು ಕರಾವಳಿಗೆ ಆಗಮಿಸುತ್ತೇನೆ ಎಂದು ಹೇಳಿದ್ದಾನೆ.