ಮರಕ್ಕೆ ಚುಚ್ಚುಮದ್ದು ನೀಡಿ ಹಣ ಪೀಕಿಸುವವರಿದ್ದಾರೆ ಎಚ್ಚರ!
ಮಂಗಳೂರು: ತೆಂಗಿನ ಮರಕ್ಕೆ ವಿಟಮಿನ್ ಇಂಜಕ್ಷನ್ ನೀಡುತ್ತಾರೆ! ಖಾಸಗಿ ಮನೆಗಳ ಗಾರ್ಡನ್ ಕ್ಯಾರೆಕ್ಟರ್ ಹೇಳಿಕೊಂಡು ರು. 25 ಸಾವಿರ ಬಿಲ್ ಮಾಡುತ್ತಾರೆ, ಬಳಿಕ ವಾದ ಮಾಡಿ ಸಿಕ್ಕಷ್ಟು ಪಡೆದು ಜಾಗ ಖಾಲಿ ಮಾಡುತ್ತಾರೆ!
ನಾನಾ ಅವತಾರ ಎತ್ತುವ ವಂಚಕರು ಮಂಗಳೂರಲ್ಲಿ ಗಾರ್ಡನ್ ಕ್ಯಾರ್ ಟೇಕರ್ ರೂಪದಲ್ಲಿ ಒಂಟಿ, ವೃದ್ಧ ಮಹಿಳೆಯರನ್ನು ಗುರಿಯಾಗಿಸಿ ವಂಚನೆ ಮಾಡುತ್ತಿದ್ದಾರೆ.
ತೋಟಗಾರಿಕೆ ಇಲಾಖೆಯ ಅಧಿಕೃತ ಗಾರ್ಡನ್ ಟೇಕರ್ ತಾನು ಎಂದು ಹೇಳಿಕೊಂಡ ರಾಜಯ್ಯ ಹೆಸರಿನ ವ್ಯಕ್ತಿಯೊಬ್ಬ ಅಶೋಕ ನಗರದಲ್ಲಿ ಅನೇಕ ಮನೆಗಳಿಗೆ ಹೋಗಿ, ವಂಚಿಸಿದ್ದಾನೆ.
ವಂಚನೆಗೆ ಒಳಗಾದ ಏರ್ ಎಂಡಿಯಾ ಎಕ್ಸ್‌ಪ್ರೆಸ್ ನಿವೃತ್ತ ಸೇಲ್ಸ್ ಮ್ಯಾನೇಜರ್ ಆಗಿದ್ದ ಶೆರ್ಲಾ ಸಲ್ಡಾನ (67) ಪೊಲೀಸರಲ್ಲಿ ದೂರು ತೋಡಿಕೊಂಡಿದ್ದಾರೆ. ಪೊಲೀಸರಿಗೂ ಈ ಹೊಸ ರೂಪದ ವಂಚನೆ ನೋಡಿ ಅಚ್ಚರಿಯಾಗಿದೆ.
ಶೆಲ್ಡಾ ಅವರ ಮನೆಯಲ್ಲಿ ಇದ್ದದ್ದು ಒಂದೇ ತೆಂಗಿನ ಮರ! ಅಶೋಕನಗರ, ಕೊಟ್ಟಾರ ಚೌಕಿ, ಜೆಬಿ ಲೋಬೋ ರಸ್ತೆಯ ಪರಿಸರದಲ್ಲಿ ಸುತ್ತಾಡಿದ್ದು, ಕೆಲವರು ಹಣ ನೀಡಿದ್ದಾರೆ. ಕೆಲವೆಡೆ ಕೃಷಿ ಇಲಾಖೆ ಅಧಿಕೃತ ಗಾರ್ಡನ್ ಹೇಳಿಕೊಂಡಿದ್ದಾನೆ.
'ಮನೆಗೆ ಬಂದ ವ್ಯಕ್ತಿಯೊಬ್ಬ ನಾನು ನಿಮ್ಮ ಮರಕ್ಕೆ ಇಂಜಕ್ಷನ್ ಕೊಟ್ಟಿದ್ದೇನೆ. ನಿಮ್ಮ ಗಾರ್ಡನ್‌ಗೆ ನಾನೇ ಮೂರು ವರ್ಷ ಗಾರ್ಡಿಯನ್. ಅದಕ್ಕೆಲ್ಲ ರಾಸಾಯನಿಕ ಗೊಬ್ಬರ ಹಾಕಬೇಕು' ಎಂದು ಹೇಳಿದ. ಆದರೆ ನಾನು, ನಿಮ್ಮ ಬಳಿ ಇಂಜಕ್ಷನ್ ನೀಡಿ ಎಂದು ಕೇಳಿಲ್ಲ, ಹಣ ಕೊಡುವುದಿಲ್ಲ ಎಂದು ಹೇಳಿದೆ. ಆದರೆ ಆ ವ್ಯಕ್ತಿ ನಾನು ಕರ್ತವ್ಯ ಮಾಡಿದ್ದೇನೆ, ಇಂಜಕ್ಷನ್ ಕೊಟ್ಟಾಗಿದೆ ಎಂದು ಹೇಳಿದ. ಆವನ ಜತೆ ಬ್ಯಾಗ್ ಹಿಡಿದುಕೊಂಡಿದ್ದ ಹುಡುಗ ಇದ್ದ. ಅವನು ಏನೋ ಮೋಡಿ ಮಾಡಿದ. ನಾನು ಚೆಕ್ ಬುಕ್ ತೆಗೆದುಕೊಂಡು ಬಂದೆ. ನೀಡುವ ಮೊತ್ತದ ಕುರಿತು ಚರ್ಚೆ ಆರಂಭವಾಯಿತು. ಕೊನೆಗೆ 4 ಸಾವಿರ ಸೆಲ್ಫ್ ಚೆಕ್ ಬರೆದು ಕೊಟ್ಟೆ. 1 ಸಾವಿರ ನಗದು ನೀಡುವಂತೆ ಒತ್ತಾಯಿಸಿದ ಎನ್ನುತ್ತಾರೆ ವೃದ್ಧೆ.
ಆತ ಹೋದ ಬಳಿಕ ನೆರೆ ಹೊರೆಯವರ ಬಳಿ ವೃದ್ಧೆ ಚರ್ಚಿಸಿದ್ದಾರೆ.ಆಗ ಮೋಸ ಹೋಗಿರುವುದು ಗೊತ್ತಾಗಿದೆ. ಬ್ಯಾಂಕ್‌ಗೆ ಕರೆ ಮಾಡಿ ಚೆಕ್ ಡ್ರಾ ಮಾಡಿಸದಂತೆ ವಿನಂತಿಸಿದ್ದಾರೆ. ಆದರೆ ಒಂದು ಗಂಟೆ ಒಳಗೆ ಆ ಧೂರ್ತ ಚೆಕ್ ನಗದೀಕರಿಸಿಕೊಂಡು ಪರಾರಿಯಾಗಿದ್ದ.
ವ್ಯಕ್ತಿ ಶ್ರೀವಾಣಿ ನರ್ಸರಿ, ಕೆ. ರಾಜಯ್ಯ ಎಂದು ಹೇಳಿ ಮೊಬೈಲ್ ನಂಬರ್ ಕೂಡಾ ನೀಡಿದ್ದಾನೆ. ಆ ನಂಬರ್‌ಗೆ 'ಕನ್ನಡಪ್ರಭ' ಪ್ರತಿನಿಧಿ ಕರೆ ಮಾಡಿದರೆ ಆಂಧ್ರಪ್ರದೇಶದ ರಾಜಾಮಂಡ್ರಿ ಶ್ರೀವಾಣಿ ನರ್ಸರಿ ಆಗಿತ್ತು. ಕೆ.ರಾಜಯ್ಯ ಅವರನ್ನು ವಿಚಾರಿಸಿದಾಗ 'ನೀವು ಹೇಳಿರುವ ವಿಳಾಸ ಸರಿ ಇದೆ ಆದರೆ ರಾಜಯ್ಯ ಈಗ ಇಲ್ಲಿಲ್ಲ' ಎಂದ ಹೇಳಿದ ವ್ಯಕ್ತಿ ಮತ್ತೆ ಕರೆ ಮಾಡಿದರೆ ಸ್ವೀಕರಿಸಲಿಲ್ಲ.
ಹಲವರು ಗುರಿ: ಪಕ್ಕದ ಮನೆಯವರು 1,800 ಕೊಟ್ಟಿದ್ದಾರೆ. ಒಂದೇ ಪರಿಸರದಲ್ಲಿ 7 ಮನೆಗಳಿಗೆ ನುಗ್ಗಿದ್ದಾನೆ. ಕೆಲವರು ಇಲ್ಲ ಹೇಳಿದ್ದಾರೆ. 'ಬುದ್ಧಿವಂತರ ಜಿಲ್ಲೆಯ ಈ ಸಣ್ಣ ಪರಿಸರದಲ್ಲಿಯೇ 3-4 ಮನೆಗಳಿಂದ ಹಣ ಪಡೆದಿರಬೇಕಾದರೆ ಎಷ್ಟು ಮಂದಿಗೆ ಮೋಸ ಮಾಡಿರಬೇಕು. ಆತನಲ್ಲಿ ವೃತ್ತಿಪರ ವಂಚಕನ ಎಲ್ಲ ಗುಣಗಳೂ ಇದ್ದವು. ಆತನ ಬಳಿ ರಶೀದಿಯ ದೊಡ್ಡ ಪುಸ್ತಕವೇ ಇತ್ತು' ಎನ್ನುತ್ತಾರೆ ಸ್ಥಳೀಯರು. ಈ ಕುರಿತು ಶೆಲ್ಡಾ ಹೇಳುವುದು ಹೀಗೆ:ಸಾರ್ವಜನಿಕರಿಗೆ ಜಾಗೃತಿ ಮೂಡಿಸಬೇಕು. ಬೇರೆಯವರು ಮೋಸ ಹೋಗಬಾರದು. ವಂಚಕನನ್ನು ಬಂಧಿಸಬೇಕು. ಈ ಕಾರಣಕ್ಕೆ ಪೊಲೀಸ್ ಠಾಣೆ ಮೆಟ್ಟಿಲು ಹತ್ತಿದ್ದೇನೆ.
ಜಿತೇಂದ್ರ ಕುಂದೇಶ್ವರ