ಯುವಕನ ಮೇಲೆ ತಂಡ ಗಂಭೀರ ಹಲ್ಲೆ
ವಿಟ್ಲ: ಹಳೆ ದ್ವೇಷದ ಹಿನ್ನೆಲೆಯಲ್ಲಿ ಆರು ಮಂದಿಯ ತಂಡ ಯುವಕನೊಬ್ಬನಿಗೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ ಘಟನೆ ವಿಟ್ಲದ ಮೇಗಿನಪೇಟೆ ಎಂಬಲ್ಲಿ ಸೋಮವಾರ ನಡೆದಿದೆ. ಗಾಯಗೊಂಡವರನ್ನು ವಿಟ್ಲ ಕಸಬಾ ಗ್ರಾಮದ ಮೇಗಿನಪೇಟೆ ನಿವಾಸಿ ಹಸನ್ ಶಾಫಿ ಎಂಬವರ ಪುತ್ರ ಚಪ್ಪ ಯಾನೆ ಸರ್ಫ್‌ರಾಝ್ (20) ಹಾಗೂ ಅವರ ತಾಯಿ ಜುಬೈದಾ ಎಂದು ಗುರುತಿಸಲಾಗಿದೆ. ಹಸನ್ ಶಾಫಿ ಮೇಗಿನಪೇಟೆಯ ತಮ್ಮ ಮನೆಯ ಮುಂಭಾಗ ಕಳೆದ ಹಲವಾರು ವರ್ಷಗಳಿಂದ ಮೀನು ವ್ಯಾಪಾರ ನಡೆಸುತ್ತಿದ್ದರು. ಅವರ ಪುತ್ರ ಮಂಗಳೂರಿನಲ್ಲಿ ಮೊಬೈಲ್ ರಿಪೇರಿ ತರಬೇತಿ ಕಲಿಯುತ್ತಿದ್ದ. ಸೋಮವಾರ ಹಸನ್ ಶಾಫಿ ಅವರ ಆರೋಗ್ಯ ಇಲ್ಲದ ಹಿನ್ನೆಲೆಯಲ್ಲಿ ಸರ್ಫ್‌ರಾಝ್ ಅಂಗಡಿಯಲ್ಲಿ ವ್ಯಾಪಾರ ನಡೆಸುತ್ತಿದ್ದ. ಸಂಜೆ ಸುಮಾರು 5 ಗಂಟೆಗೆ ಮಾರುತಿ 800 ಕಾರಿನಲ್ಲಿ ವಿಟ್ಲ ಕಡೆಯಿಂದ ಬಂದ ಆರು ಮಂದಿಯ ತಂಡ ತಲವಾರು ಹಾಗೂ ದೊಣ್ಣೆಯಿಂದ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದ್ದು, ಸರ್ಫ್‌ರಾಝ್ ಕೈಗೆ ಕಡಿದು ಗಾಯಗೊಳಿಸಿದ್ದಾರೆ. ಈ ವೇಳೆ ಮನೆಯಿಂದ ಹೊರ ಬಂದ ಆತನ ತಾಯಿ ಜುಬೈದಾ ಅವರನ್ನು ದೂಡಿ ಹಾಕಿದ್ದು, ಬಳಿಕ ತಂಡ ಅಲ್ಲಿಂದ ಪರಾರಿಯಾಗಿದೆ ಎಂದು ಸರ್ಫ್‌ರಾಝ್ ವಿಟ್ಲ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.ವಿಟ್ಲ ಠಾಣಾಧಿಕಾರಿ ರಾಘವೇಂದ್ರ ಟಿ.ಆರ್. ಹಾಗೂ ಸಿಬ್ಬಂದಿ ಆಗಮಿಸಿ ಪರಿಸ್ಥಿತಿ ಹತೋಟಿಗೆ ತಂದಿದ್ದಾರೆ.