ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಅವಧಿ ವಿಸ್ತರಣೆಯಾದರೂ ಯಶಸ್ಸು ಕಾಣದ ನೀರಿನ ಯೋಜನೆ

Lingaraj Badiger
Updated On : 14 May 2014, 11:57 am

ಮೂಲ್ಕಿ: ಮೂಲ್ಕಿ ಸಮೀಪದ ಕೊಲ್ಲೂರು ಪದವು ಬಳಿ ನಿರ್ಮಾಣಗೊಂಡಿರುವ ಬಹು ಗ್ರಾಮ ಕುಡಿಯುವ ನೀರಿನ ಯೋಜನೆ ಆರಂಭ ಹಂತದಲ್ಲೇ ವಿಫಲಗೊಂಡಿದೆ.
ಮೂಡುಬಿದಿರೆ ಕ್ಷೇತ್ರದಲ್ಲಿ 2010ರಲ್ಲಿ ಮೂಲ್ಕಿ ಸಮೀಪದ ಬಳ್ಕುಂಜೆ ಗ್ರಾಪಂ ವ್ಯಾಪ್ತಿಯ ಕೊಲ್ಲೂರು ಪದವು ಬಳಿ ಹಾಗೂ ಬಜಪೆ ಸಮೀಪದ ಮಳವೂರು ಬಳಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ನದಿಗೆ ಅಣೆಕಟ್ಟು ನಿರ್ಮಿಸಿ ಅಲ್ಲಿಂದ ಪೈಪ್‌ಲೈನ್ ಮೂಲಕ ಟ್ಯಾಂಕ್‌ನಲ್ಲಿ ನೀರು ಸಂಗ್ರಹಿಸಿ ಪೂರೈಸುವ ಬಹುಗ್ರಾಮ  ನೀರಿನ ಯೋಜನೆಯನ್ನು ಸರ್ಕಾರ ಕೈಗೆತ್ತಿಕೊಂಡಿತ್ತು. 2010ರ ಆಗಸ್ಟ್ 1ರಂದು ಮೂಲ್ಕಿ ಸಮೀಪದ ಬಳ್ಕುಂಜೆ ಗ್ರಾಪಂ ವ್ಯಾಪ್ತಿಯ ಕೊಲ್ಲೂರು ಪದವು ಬಳಿ 16.8 ಕೋಟಿ ವೆಚ್ಚದಲ್ಲಿ ಮೂಲ್ಕಿ ಹೋಬಳಿಯ ಕಿಲ್ಪಾಡಿ, ಕಿನ್ನಿಗೋಳಿ, ಕೆಮ್ರಾಲ್, ಮೆನ್ನಬೆಟ್ಟು, ಹಳೆಯಂಗಡಿ, ಪಡಪಣಂಬೂರು, ಐಕಳ, ಬಳ್ಕುಂಜೆ ಗ್ರಾಪಂ ವ್ಯಾಪ್ತಿಯ ಸುಮಾರು 17 ಗ್ರಾಮಗಳಿಗೆ ಕುಡಿಯುವ ನೀರಿನ ಸರಬರಾಜು ಮಾಡುವ ಯೋಜನೆಗೆ ಶಿಲಾನ್ಯಾಸ ಜರುಗಿತ್ತು.
ಅವಧಿ ವಿಸ್ತರಣೆಯಾದರೂ ಕಾಮಗಾರಿ ಅಪೂರ್ಣ: 11 ತಿಂಗಳ ಅವಧಿಯಲ್ಲಿ ಕಾಮಗಾರಿ ಮುಗಿಸುವ ಬಗ್ಗೆ ಟೆಂಡರ್ ಅನ್ನು ಹೈದರಾಬಾದ್ ಮೂಲದ ಸಾಯಿ ಸುಧೀರ್ ಇನ್ಫ್ರಾಸ್ಟ್ರಕ್ಟರ್ ಸಂಸ್ಥೆಗೆ ಗುತ್ತಿಗೆ ನೀಡಲಾಗಿತ್ತು. 2011ರ ಜುಲೈನಲ್ಲಿ ಸಂಪೂರ್ಣಗೊಳ್ಳಬೇಕಾಗಿದ್ದ ಯೋಜನೆಯನ್ನು ಗುತ್ತಿಗೆದಾರರ ಮನವಿಯಂತೆ 2012 ಮಾರ್ಚ್‌ಗೆ ಮುಂದೂಡಲಾಯಿತಾದರೂ ಅಂದು ಪೂರ್ಣಗೊಳ್ಳಲಿಲ್ಲ. 16.8 ಕೋಟಿ ವೆಚ್ಚದ ಯೋಜನೆಯನ್ನು ಬಳಿಕ 18.5 ಕೋಟಿಗೆ ಹೆಚ್ಚಿಸಲಾಯಿತು.
ಗುತ್ತಿಗೆದಾರರ ತರಾಟೆ: ಆದರೂ ಎರಡು ವರ್ಷಗಳ ಕಾಲ ಟ್ಯಾಂಕ್ ನಿರ್ಮಾಣ ಕಾರ್ಯ ಪೂರ್ಣಗೊಳ್ಳದ ಕಾರಣ ಅಂದಿನ ಜಿಪಂ ಸಿಇಒ ಡಾ. ವಿಜಯ ಪ್ರಕಾಶ್ ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿ ಪೂರ್ಣಗೊಳ್ಳದ ಬಗ್ಗೆ ಗುತ್ತಿಗೆದಾರರನ್ನು ತರಾಟೆಗೆ ತೆಗೆದುಕೊಂಡು ಕಾಮಗಾರಿ ಪೂರ್ಣಗೊಳಿಸದಿದ್ದರೆ ಕಪ್ಪು ಪಟ್ಟಿಗೆ ಸೇರಿಸುವುದಾಗಿ ಎಚ್ಚರಿಕೆ ನೀಡಿದ್ದರು. ಆ ಬಳಿಕ ಕೊಲ್ಲೂರು ಪದವಿನಲ್ಲಿ ಬ್ರಹತ್ ಟ್ಯಾಂಕ್ ನಿರ್ಮಾಣ ಮಾಡಲಾಯಿತು. 8 ಗ್ರಾಪಂಗಳಲ್ಲಿ ನೀರು ಪೂರೈಕೆಗೆ ಪೈಪ್‌ಲೈನ್ ಹಾಕುವ ಕಾಮಾಗಾರಿಯನ್ನು ಗುತ್ತಿಗೆದಾರರು ತುಂಡು ಗುತ್ತಿಗೆ ನೀಡಿದ್ದು ಹೆಚ್ಚಿನ ಪ್ರದೇಶದಲ್ಲಿ ತರಾತುರಿಯಲ್ಲಿ ಕಳಪೆ ಕಾಮಗಾರಿ ಮಾಡಿ ಯೋಜನೆ ಪೂರ್ಣಗೊಳಿಸಿದ್ದಾರೆ. ಪ್ರಾರಂಭಿಕ ಹಂತವಾಗಿ ನದಿ ನೀರನ್ನು ಪೈಪ್‌ಲೈನ್ ಮೂಲಕ ಪೂರೈಸಿದ್ದು ಕೊಲ್ಲೂರು ಪದವು ಪ್ರದೇಶದವರಿಗೆ ನೀರನ್ನು ಏಪ್ರಿಲ್ ತಿಂಗಳಿನಲ್ಲಿ ಸರಬರಾಜು ಮಾಡಲಾಗಿತ್ತು. ಈ ಹಿಂದೆ ಒಳ್ಳೆ ನೀರು ಬರುತ್ತಿತ್ತು. ಈಗ ಉಪ್ಪು ನೀರು ಬರುತ್ತಿದ್ದು ಜನರು ರೊಚ್ಚಿಗೆದ್ದಿದ್ದಾರೆ.
ಪೈಪ್‌ಗಳನ್ನು ಅಲ್ಲಲ್ಲಿ ಸರಿಯಾಗಿ ಜೋಡಿಸದಿರುವುದರಿಂದ ಕೆಲವು ಕಡೆ ರಸ್ತೆಯ ಬದಿಯ ಚರಂಡಿಯಲ್ಲಿ ನೀರು ನಿಂತು ಮುಂದಕ್ಕೆ ಸಾಗದಿರುವುರಿಂದ ಜನರಿಗೆ ನೀರಿನ ಭಾಗ್ಯವಿಲ್ಲದಂತಾಗಿದೆ. ವ್ಯಸಸ್ಥಿತವಾದ ರೀತಿಯಲ್ಲಿ ಯೋಜನೆಯನ್ನು ಕೈಗೆತ್ತಿಕೊಳ್ಳದಿರುವುದರಿಂದ ಸಮಸ್ಯೆಯಾಗಿದ್ದು 18.5 ಕೋಟಿಯ 8 ಗ್ರಾಪಂಗಳ ವ್ಯಾಪ್ತಿಯ ಗ್ರಾಮೀಣ ಪ್ರದೇಶದ ಜನರಿಗೆ ನೀರಿನ ಸಮಸ್ಯೆಯನ್ನು ಬಗೆಹರಿಸುವ ಯೋಜನೆಯು ಆರಂಭಿಕ ಹಂತದಲ್ಲೇ ವಿಫಲಗೊಂಡಿದ್ದು 18.5 ಕೋಟಿ ನೀರಲ್ಲಿ ಹೋಮ ಮಾಡಿದಂತಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement