ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಖಾತರಿಗೆ ಸಿಗದ ಜಿಪಿಎಸ್ ಮಾರ್ಗದರ್ಶನ!

Lingaraj Badiger
Updated On : 14 May 2014, 11:57 am

ಮಂಗಳೂರು: ಉದ್ಯೋಗ ಖಾತರಿ ಯೋಜನೆಯ ಕಾಮಗಾರಿಗೆ ಏಪ್ರಿಲ್‌ನಿಂದ ಜಿಪಿಎಸ್ ಪದ್ಧತಿ ಅಳವಡಿಸಬೇಕು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆ ಸೂಚನೆ ನೀಡಿದೆ. ಅದನ್ನು ಯಾವ ರೀತಿ ಮಾಡಬೇಕು ಎಂಬ ಮಾರ್ಗದರ್ಶನ ನೀಡಿಲ್ಲ. ಹಾಗಾಗಿ ಹೇಗೆ ಜಿಪಿಎಸ್ ಮಾಡುವುದು ಎಂಬ ಗೊಂದಲದಲ್ಲಿದ್ದಾರೆ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳು.   
ಏ.10ರಂದು ಗ್ರಾಮೀಣಾಭಿವೃದ್ಧಿ ಆಯುಕ್ತರ ಅಧ್ಯಕ್ಷತೆಯಲ್ಲಿ ವಿಡಿಯೊ ಸಂವಾದದಲ್ಲಿ ಖಾತರಿ ಯೋಜನೆಯ ಹೊರಗುತ್ತಿಗೆ ಸಿಬ್ಬಂದಿಯ ಕರ್ತವ್ಯ ಮತ್ತು ಜವಾಬ್ದಾರಿಯನ್ನು ನಿಗದಿಪಡಿಸುವ ಬಗ್ಗೆ ತಿಳಿಸಿದ್ದರು. ಇದೇ ವೇಳೆ ಕಾಮಗಾರಿಯನ್ನು ಜಿಪಿಎಸ್ ಮಾಡಬೇಕು ಎಂದು ಸೂಚಿಸಿದ್ದರು. ಅಲ್ಲದೆ ಏಪ್ರಿಲ್ ಆರಂಭದಿಂದಲೇ ಜಿಪಿಎಸ್ ಅನುಷ್ಠಾನಕ್ಕೆ ತರುವಂತೆ ಸೂಚಿಸಿದ್ದರು.
 ಜಿಪಿಎಸ್ ಮಾಡುವುದು ಎಂದರೆ, ಕಾಮಗಾರಿ ನಡೆಯುವ ಜಾಗಕ್ಕೆ ತೆರಳಿ ಫೋಟೋ ತೆಗೆದು ಆ ಬಳಿಕ ಯೋಜನೆಯ ವೆಬ್‌ಸೈಟ್‌ಗೆ ಅಪ್‌ಲೋಡ್ ಮಾಡುವುದು. ಕಾಮಗಾರಿಯ ಅವ್ಯವಹಾರ ತಡೆಯಲು ಇದು ಉತ್ತಮ ಪ್ರಯತ್ನ.
ಆದರೆ ಈಗ ಜಿಪಿಎಸ್ ಇರುವುದು ಬಸವ ವಸತಿ ಮತ್ತು ಇಂದಿರಾ ಅವಾಸ್ ಗೃಹ ನಿರ್ಮಾಣಕ್ಕೆ ಮಾತ್ರ. ಇಲ್ಲಿ ಗೃಹ ನಿರ್ಮಾಣದ ಜಾಗ, ಕಾಮಗಾರಿ ಮಧ್ಯಭಾಗ ಮತ್ತು ಕಾಮಗಾರಿ ಮುಕ್ತಾಯವಾದಾಗ ಹೀಗೆ ಮೂರು ಹಂತದಲ್ಲಿ ಫೋಟೋ ತೆಗೆದು ಅಪ್‌ಲೋಡ್ ಮಾಡುತ್ತಾರೆ. ಖಾತರಿ ಯೋಜನೆಯಲ್ಲಿ ಯಾವ ರೀತಿ ಜಿಪಿಎಸ್ ಮಾಡಬೇಕು ಎಂಬ ಬಗ್ಗೆ ನಿಖರ ಮಾಹಿತಿಯನ್ನು ಇಲಾಖೆ ಇದುವರೆಗೆ ನೀಡಿಲ್ಲ.
ಮುಗಿದ ಕಾಮಗಾರಿಗೆ ಜಿಪಿಎಸ್!: ಮಾರ್ಚ್ ಮಧ್ಯ ಭಾಗಕ್ಕೆ ಕಳೆದ ವರ್ಷದ ಖಾತರಿ ಕಾಮಗಾರಿ ಮುಕ್ತಾಯವಾಗಬೇಕು. ಮಾರ್ಚ್ ಅಂತ್ಯಕ್ಕೆ ಆ ವರ್ಷದ ಬಿಲ್ ಕೂಡ ಪೂರ್ಣ ಪಾವತಿಯಾಗಬೇಕು, ಇದು ಖಾತರಿಯ ನಿಯಮ. ವಾಸ್ತವದಲ್ಲಿ ಜಿಪಿಎಸ್ ಹೊಸ ಕಾಮಗಾರಿಗೆ ಅನ್ವಯ.
ಆದರೆ ತಾಲೂಕು ಪಂಚಾಯ್ತಿ ಅಧಿಕಾರಿಗಳು, ಹಿಂದೆ ಮುಗಿದ ಕಾಮಗಾರಿಯನ್ನು ಜಿಪಿಎಸ್‌ಗೆ ಒಳಪಡಿಸುವಂತೆ ಪಿಡಿಒಗೆ ಹೇಳುತ್ತಿದ್ದಾರೆ. ಆದರೆ ಕಾಮಗಾರಿ ಮುಗಿದಿರುವುದರಿಂದ ಮುಕ್ತಾಯದ ಫೋಟೋ ತೆಗೆಯಬೇಕಷ್ಟೆ. ಈ ಬಗ್ಗೆ ಮಾರ್ಗದರ್ಶಿ ಸುತ್ತೋಲೆ ಬಾರದ ಕಾರಣ ಜಿಪಿಎಸ್ ಹೇಗೆ ಮಾಡುವುದು ಎಂಬ ಜಿಜ್ಞಾಸೆ ಪಿಡಿಒಗಳಲ್ಲಿದೆ. ಒಂದು ವೇಳೆ ಮುಗಿದ ಕಾಮಗಾರಿಗೆ ಜಿಪಿಎಸ್ ಮಾಡಿದರೆ ಆಡಿಟ್‌ನಲ್ಲಿ ಆಕ್ಷೇಪ ಬಂದರೆ ತಮ್ಮ ವೇತನಕ್ಕೆ ಕತ್ತರಿ ಬೀಳುತ್ತದೆ ಎಂಬ ಭೀತಿ ಪಿಡಿಒಗಳದ್ದು. ಉದ್ಯೋಗ ಚೀಟಿ ಪಡೆದು ಖಾತರಿ ಕಾಮಗಾರಿ ಮುಗಿಸಿದ ಒಂದು ವಾರದಲ್ಲಿ ಕೂಲಿ ಪಾವತಿಸದಿದ್ದರೆ ನಿಯಮಾನುಸಾರ ಕೆಲಸ ಕೊಟ್ಟ ಪಿಡಿಒ ದಂಡ ತೆರಬೇಕು. ಅಂತೂ ಸರ್ಕಾರದ ಅಸ್ಪಷ್ಟ ಸೂಚನೆಯಿಂದ ಪಿಡಿಒ ಸಂಕಷ್ಟ ಅನುಭವಿಸಬೇಕಾಗಿದೆ.
 'ಈಗಾಗಲೇ ಪಂಚಾಯ್ತಿಯ ಹಲವು ಕೆಲಸ ಇರುವುದರಿಂದ ಖಾತರಿ ಕಾಮಗಾರಿಯ ಜಿಪಿಎಸ್ ಅಪ್‌ಲೋಡ್ ಮಾಡುವ ಹೆಚ್ಚುವರಿ ಕೆಲಸವೂ ಸೇರಿದೆ. ಖಾತರಿ ಯೋಜನೆಗೆ ಸಹಾಯಕ ತಾಂತ್ರಿಕ ಸಿಬ್ಬಂದಿ ಇದ್ದರೂ ಅವರು ಜಿಪಿಎಸ್ ಫೋಟೋ ತಂದರೆ ನಾವೇ ಅಪ್‌ಲೋಡ್ ಮಾಡಬೇಕು. ಖಾತರಿಗೆ ನಿರ್ದಿಷ್ಟ ಗುರಿ ನಿಗದಿಪಡಿಸದಿದ್ದರೂ, ಮೇಲಧಿಕಾರಿಗಳು ಕಡ್ಡಾಯವಾಗಿ ಗುರಿ ನಿಗದಿ ಮಾಡುತ್ತಾರೆ. ಹೀಗಾಗಿ ಒತ್ತಡದಲ್ಲಿ ಕೆಲಸ ಮಾಡುವಂತಾಗಿದೆ' ಎನ್ನುತ್ತಾರೆ ಹೆಸರು ಹೇಳಲಿಚ್ಛಿಸದ ಪಿಡಿಒ.
- ಆತ್ಮಭೂಷಣ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement