ಬಾಲ್ಯವಿವಾಹಕ್ಕೆ ತಡೆ
ಸುಳ್ಯ: ಅಧಿಕಾರಿಗಳು ಸಕಾಲಕ್ಕೆ ತೆರಳಿ ಬಾಲ್ಯವಿವಾಹ ತಡೆದ ಘಟನೆ ಸುಳ್ಯದಲ್ಲಿ ನಡೆದಿದೆ. ಸುಳ್ಯ ಕಸಬಾ ಗ್ರಾಮದ ಕುರುಂಜಿಗುಡ್ಡೆ ಶಾರದಾ-ನಾರಾಯಣ ದಂಪತಿ ಪುತ್ರಿಯನ್ನು ಆಕೆಯ ಸಂಬಂಧಿಯೊಬ್ಬರು ಕಾಸರಗೋಡಿನ ಕಾಂಞಂಗಾಡ್ನಲ್ಲಿರುವ ತಮ್ಮ ಮನೆಗೆ ಕರೆದುಕೊಂಡು ಹೋಗಿದ್ದು, ಮೇ 15ರಂದು ಕಾಂಞಂಗಾಡಿನ ಯುವಕನೊಂದಿಗೆ ವಿವಾಹ ಮಾಡುತ್ತಿದ್ದಾರೆಂದು ತಿಳಿದುಬಂದಿತ್ತು. ಈ ಬಾಲಕಿ ಈಗಷ್ಟೇ ಪಿಯುಸಿ ಶಿಕ್ಷಣ ಮುಗಿಸಿದ್ದಾಗಿ ಸ್ಥಳೀಯ ಕೇರ್ಪಳ ಅಂಗನವಾಡಿ ಕಾರ್ಯಕರ್ತೆ ಶೋಭಾವತಿ ಅವರಿಗೆ ತಿಳಿದಾಗ ಸಿಡಿಪಿಒ ನಾರಾಯಣ ಮಾರ್ಗದರ್ಶನದಂತೆ ಬಾಲಕಿಯ ಮನೆಗೆ ಹೋಗಿ ಶಾಲೆಯ ದಾಖಲಾತಿಗಳನ್ನು ಪರಿಶೀಲಿಸಿದರು. ಈ ವೇಳೆ ಬಾಲಕಿಗೆ ಕೇವಲ 17 ವರ್ಷ ನಾಲ್ಕೂವರೆ ತಿಂಗಳು ಆಗಿರುವುದು ಬೆಳಕಿಗೆ ಬಂತು.