ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ದುಷ್ಕರ್ಮಿಗಳ ಕೃತ್ಯ; ಒಣ ಮೀನು ಅಂಗಡಿಗಳು ಬೆಂಕಿಗಾಹುತಿ

Mainashree
Updated On : 17 May 2014, 10:07 am

ಪುತ್ತೂರು: ಪುತ್ತೂರು ಪುರಸಭೆ ಮುಂಭಾಗದಲ್ಲಿರುವ ಕಿಲ್ಲೆ ಮೈದಾನದಲ್ಲಿ ತಾತ್ಕಾಲಿಕ ನೆಲೆಯಲ್ಲಿ ವ್ಯಾಪಾರ ನಡೆಸುತ್ತಿದ್ದ ಒಣ ಮೀನು ಅಂಗಡಿಗಳಿಗೆ ಬುಧವಾರ ತಡರಾತ್ರಿ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದು, 9 ಅಂಗಡಿಗಳು ಬೆಂಕಿಗಾಹುತಿಯಾಗಿವೆ. ಅಂಗಡಿ ಮುಂದೆ ನಿಲ್ಲಿಸಲಾಗಿದ್ದ ರಿಕ್ಷಾವೊಂದಕ್ಕೂ ಬೆಂಕಿ ತಗಲಿ ಸಂಪೂರ್ಣ ಭಸ್ಮಗೊಂಡಿದೆ.
 ಘಟನೆಯಿಂದ ಸುಮಾರು ರು. 40 ಲಕ್ಷಕ್ಕೂ ಅಧಿಕ ನಷ್ಟ ಸಂಭವಿಸಿದೆ ಎಂದು ಸ್ಥಳೀಯ ವ್ಯಾಪಾರಿಗಳು ತಿಳಿಸಿದ್ದಾರೆ.
 ಪುತ್ತೂರಿನ ಒಣ ಮೀನು ವ್ಯಾಪಾರಿಗಳಾದ ಮಹಮ್ಮದ್, ಇಬ್ರಾಹಿಂ, ಅಬುಲ್ ರಝಾಕ್, ಅಬ್ದುಲ್ ರಹೀಂ, ಅಬ್ದುಲ್ ಹಾಜಿ, ಪುತ್ತು ಮೋನು, ಉಮ್ಮರ್ ಹಾಜಿ, ರಿಯಾಝ್, ಅಬ್ದುಲ್ ಖಾದರ್ ಎಂಬವರಿಗೆ ಸೇರಿದ ಒಣ ಮೀನಿನ ಅಂಗಡಿಗಳು ಮತ್ತು ಬಪ್ಪಳಿಗೆ ನಿವಾಸಿ ಅಶ್ರಫ್ ಎಂಬವರ ಆಟೊ ಬೆಂಕಿಗಾಹುತಿಯಾಗಿದೆ.
ಲಕ್ಷಾಂತರ ಮೌಲ್ಯದ ಮೀನು ದಾಸ್ತಾನಿತ್ತು: ಪುತ್ತೂರು ಪುರಸಭೆ ವತಿಯಿಂದ ನೂತನವಾಗಿ ಮಾಂಸ ಮತ್ತು ಮೀನು ವ್ಯಾಪಾರದ ಕಟ್ಟಡ ರಚಿಸುತ್ತಿರುವ ಹಿನ್ನೆಲೆಯಲ್ಲಿ ಒಣ ಮೀನು ವ್ಯಾಪಾರಿಗಳಿಗೆ ವಾರದ ಸಂತೆ ನಡೆಯುತ್ತಿರುವ ಕಿಲ್ಲೆ ಮೈದಾನದ ಅಂಚಿನಲ್ಲಿ ವ್ಯಾಪಾರ ಮಾಡಲು ಅವಕಾಶ ಮಾಡಿಕೊಡಲಾಗಿತ್ತು. ಇದಕ್ಕಾಗಿ ಪುರಸಭೆ ವತಿಯಿಂದ ಶೀಟ್ ಅಳವಡಿಸಿದ ಸುಮಾರು 15ಕ್ಕೂ ಮಿಕ್ಕಿ ಅಂಗಡಿಗಳನ್ನು ತಾತ್ಕಾಲಿಕವಾಗಿ ನಿರ್ಮಿಸಿ ವ್ಯಾಪಾರಿಗಳಿಗೆ ನೀಡಲಾಗಿತ್ತು. ಒಣ ಮೀನು ವ್ಯಾಪಾರಿಗಳು ಅಲ್ಲಿ ಕಳೆದ ಎರಡು ವರ್ಷಗಳಿಂದ ವ್ಯಾಪಾರ ಮಾಡುತ್ತಿದ್ದು, ಬುಧವಾರ ತಡರಾತ್ರಿ ದುಷ್ಕರ್ಮಿಗಳು ಅಂಗಡಿಗಳಿಗೆ ಬೆಂಕಿ ಹಚ್ಚಿದ್ದಾರೆ. 9 ಅಂಗಡಿಗಳು ಬೆಂಕಿಗೆ ಸಂಪೂರ್ಣ ಭಸ್ಮವಾಗಿದ್ದು, ಕೆಲವು ಅಂಗಡಿಗಳಿಗೆ ಭಾಗಶಃ ಹಾನಿಯಾಗಿದೆ.
ಗುರುವಾರ ಬೆಳಗ್ಗಿನ ವೇಳೆ ಘಟನೆ ಬೆಳಕಿಗೆ ಬಂದಿದ್ದು, ಅಂಗಡಿಗಳ ಮಾಲೀಕರು ಸ್ಥಳಕ್ಕೆ ಆಗಮಿಸಿದ್ದರು. ಎಲ್ಲ ಅಂಗಡಿಗಳಲ್ಲಿಯೂ ಮಳೆಗಾಲದಲ್ಲಿ ಮಾರಾಟಕ್ಕೆಂದು ಲಕ್ಷಾಂತರ ರು. ಮೊತ್ತದ ಮೀನು ದಾಸ್ತಾನು ಇರಿಸಲಾಗಿತ್ತು. ಇದೀಗ ಎಲ್ಲ ಮೀನುಗಳು ಬೆಂಕಿಗಾಹುತಿಯಾಗಿವೆ.
ರಿಕ್ಷಾ ಸಂಪೂರ್ಣ ಭಸ್ಮ: ಮೀನು ಮಾರುಕಟ್ಟೆಗೆ ತಾಗಿಕೊಂಡು ಬಪ್ಪಳಿಗೆ ನಿವಾಸಿ ಅಶ್ರಫ್ ಎಂಬವರ ರಿಕ್ಷಾ ನಿಲ್ಲಿಸಲಾಗಿತ್ತು. ರಿಕ್ಷಾವನ್ನು ಮಾರುಕಟ್ಟೆಯ ಬಳಿ ತಂದು ನಿಲ್ಲಿಸಿದವರು ಯಾರು ಮತ್ತು ಯಾಕೆ ಅಲ್ಲಿ ನಿಲ್ಲಿಸಲಾಗಿತ್ತು ಎಂಬುದು ನಿಗೂಢವಾಗಿದೆ. ಸ್ಥಳೀಯರು ಹೇಳುವಂತೆ ಸುಲೈಮಾನ್ ರಿಕ್ಷಾವನ್ನು ಕೋರ್ಟ್ ಬಳಿ ನಿಲ್ಲಿಸಿದ್ದು, ಅದನ್ನು ದುಷ್ಕರ್ಮಿಗಳು ದೂಡಿಕೊಂಡು ಬಂದು ಮಾರುಕಟ್ಟೆ ಬಳಿ ನಿಲ್ಲಿಸಿದ್ದಾರೆ ಎನ್ನಲಾಗಿದೆ.
ಘಟನಾ ಸ್ಥಳಕ್ಕೆ ಶಾಸಕಿ ಶಕುಂತಳಾ ಶೆಟ್ಟಿ, ಪುರಸಭಾಧ್ಯಕ್ಷೆ ವಾಣಿ ಶ್ರೀಧರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶರಣಪ್ಪ ಎಸ್.ಡಿ, ಡಿವೈಎಸ್ಪಿ ಮೆಂಡೋನ್ಸಾ, ಉಪವಿಭಾಗಾಧಿಕಾರಿ ಎಚ್.ಕೆ. ಕೃಷ್ಣಮೂರ್ತಿ, ತಹಸೀಲ್ದಾರ್ ಎಂ.ಟಿ. ಕುಳ್ಳೇಗೌಡ, ಪುರಸಭಾ ಮುಖ್ಯಾಧಿಕಾರಿ ಸುಧಾಕರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನಾ ಸ್ಥಳದಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ.
ವ್ಯಾಪಾರಿಗಳ ಸಭೆ- ವಾಣಿ ಶ್ರೀಧರ್: ಘಟನೆಯಿಂದ ಸಂತ್ರಸ್ತರಾದ ವ್ಯಾಪಾರಿಗಳ ಸಭೆಯನ್ನು ಪುತ್ತೂರು ಪುರಸಭಾ ಕಚೇರಿಯಲ್ಲಿ ಗುರುವಾರ ಸಂಜೆ ಕರೆಯಲಾಗಿದ್ದು, ಸಂತ್ರಸ್ತರ ಕಷ್ಟ ನಷ್ಟಗಳ ಬಗ್ಗೆ ಚರ್ಚೆ ನಡೆಸಲಾಗುವುದು ಹಾಗೂ ಪರಿಹಾರ ನೀಡುವ ಸಾಧ್ಯತೆಗಳ ಕುರಿತು ಈ ಸಂದರ್ಭ ಚರ್ಚಿಸಲಾಗುವುದು ಎಂದು ಪುರಸಭಾ ಅಧ್ಯಕ್ಷೆ ವಾಣಿ ಶ್ರೀಧರ್ ತಿಳಿಸಿದ್ದಾರೆ.
ತಕ್ಷಣ ಕ್ರಮ- ಎಸ್ಪಿ: ಬೆಂಕಿ ಹಚ್ಚಿದ ಕಿಡಿಗೇಡಿಗಳನ್ನು ತಕ್ಷಣವೇ ಬಂಧಿಸಿ ಕಾನೂನು ಕ್ರಮ ಕೈಗೊಳ್ಳಲಾಗುವುದು. ಕೋಮು ಪ್ರಚೋಧನೆ ನೀಡುವ ಪ್ರಯತ್ನ ಯಾರೇ ನಡೆಸಿದರೂ ಇಲಾಖೆಯು ಸುಮ್ಮನಿರಲಾರದು. ಆರೋಪಿಗಳ ಪತ್ತೆ ಕಾರ್ಯ ನಡೆಸಲಾಗುತ್ತಿದೆ ಎಂದು ಎಸ್‌ಪಿ ಶರಣಪ್ಪ  ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement