ಪುತ್ತೂರು: ಗುಡುಗು ಮಿಂಚು ಸಹಿತ ಸಾಧಾರಣ ಮಳೆ
ಪುತ್ತೂರು: ಪುತ್ತೂರು ತಾಲೂಕಿನ ಹಲವೆಡೆ ಭಾನುವಾರ ಸಂಜೆ ವೇಳೆಗೆ ಗುಡುಗು ಮಿಂಚು ಸಹಿತ ಸಾಧಾರಣ ಮಳೆಯಾಗಿದೆ.
ಸಂಜೆ ಸುಮಾರು ಒಂದು ಗಂಟೆ ಕಾಲ ಮಳೆ ಸುರಿಯಿತು. ಜೊತೆಗೆ ಆಗಾಗ ಸಿಡಿಲಿನ ಅಬ್ಬರವೂ ಕಂಡು ಬಂದಿದ್ದು, ಜನರನ್ನು ಬೆಚ್ಚಿ ಬೀಳುವಂತೆ ಮಾಡಿತು.
ಒಂದು ವಾರದ ಹಿಂದೆ ಪುತ್ತೂರು ತಾಲೂಕಿನಾದ್ಯಂತ ಭಾರಿ ಗಾಳಿ ಸಹಿತ ಮಳೆ ಸುರಿದಿದ್ದು ಹಲವೆಡೆ ಹಾನಿ ಸಂಭವಿಸಿತ್ತು. ಬಳಿಕ ತಣ್ಣಗಾದ ಮಳೆ ಭಾನುವಾರ ಸಂಜೆ ಹಠಾತ್ ಪ್ರತ್ಯಕ್ಷಗೊಂಡಿತು. ಮಳೆಯ ಜೊತೆಗೆ ಗುಡುಗು- ಮಿಂಚುಗಳೂ ಕಂಡು ಬಂದಿದ್ದು, ಈಗಾಗಲೇ ಗಾಳಿ ಮತ್ತು ಗುಡುಗಿಗೆ ಸಾಕಷ್ಟು ಹಾನಿ ಅನುಭವಿಸಿದ್ದ ಪುತ್ತೂರಿನ ಜನತೆಗೆ ಸಣ್ಣ ಮಟ್ಟಿನಲ್ಲಿ ಭಯವನ್ನೂ ಸೃಷ್ಟಿಸಿದೆ. ಆದರೆ ಈ ಮಳೆಯು ಕ್ಷಣ ಕಾಲ ಸುರಿದು ಮಾಯವಾಗಿದ್ದು, ಯಾವುದೇ ಅಪಾಯವನ್ನು ಉಂಟು ಮಾಡಿಲ್ಲ.
ಈಗಾಗಲೇ ಪುತ್ತೂರಿನಲ್ಲಿ ಮಳೆ, ಗಾಳಿ ಮತ್ತು ಸಿಡಿಲಿಗೆ 4 ಜೀವ ಹಾನಿಯಾದೆ. ತಾಲೂಕಿನಾದ್ಯಂತ ಹಲವೆಡೆ ಮನೆಗಳಿಗೆ ಹಾಗೂ ಕೃಷಿಗೆ ಹಾನಿಯುಂಟು ಮಾಡಿತ್ತು. ಇದರಿಂದಾಗಿ ಲಕ್ಷಾಂತರ ರು. ನಷ್ಟ ಸಂಭವಿಸಿತ್ತು. ಈ ಹಿನ್ನೆಲೆಯಲ್ಲಿ ಮಳೆ ಆರಂಭವಾಗುತ್ತಿದ್ದಂತೆ ಜನರು ಭಯಭೀತರಾಗುತ್ತಿದ್ದಾರೆ. ನಗರದ ಕೆಲವೆಡೆಗಳಲ್ಲಿ ಸಂಜೆ ಗುಡುಗು ಮಿಂಚುಗಳು ಆರಂಭಗೊಂಡಾಗ ರಸ್ತೆಯಲ್ಲಿದ್ದ ಸಾರ್ವಜನಿಕರು ಅಂಗಡಿ ಮುಂಭಾಗಕ್ಕೆ ಓಡಿ ಬರುತ್ತಿರುವ ದೃಶ್ಯ ಕಂಡುಬರುತ್ತಿತ್ತು.
ಉಪ್ಪಿನಂಗಡಿ ಪರಿಸರದಲ್ಲಿ ಮಳೆ: ಭಾನುವಾರ ಸಂಜೆ ಉಪ್ಪಿನಂಗಡಿ ಪರಿಸರದಲ್ಲಿ ಮಿಂಚು, ಗುಡುಗು ಸಹಿತ ಸಾಧಾರಣ ಮಳೆಯಾಗಿದೆ. ಸುಮಾರು 6.30 ಗಂಟೆಗೆ ಆರಂಭವಾದ ಮಳೆ 7.15ರವರೆಗೆ ಮುಂದುವರಿದಿತ್ತು. ಯಾವುದೇ ಹಾನಿಯಾದ ಬಗ್ಗೆ ತಿಳಿದುಬಂದಿಲ್ಲ.