ವಿವಾಹಿತ ಮಹಿಳೆ ಸಂಶಯಾಸ್ಪದ ಸಾವು
ಪುತ್ತೂರು: ವಿವಾಹಿತ ಮಹಿಳೆಯೊಬ್ಬರು ಸಂಶಯಾಸ್ಪದ ರೀತಿಯಲ್ಲಿ ಮೃತಪಟ್ಟ ಘಟನೆ ಪುತ್ತೂರು ತಾಲೂಕಿನ ಸರ್ವೆ ಎಂಬಲ್ಲಿ ಶನಿವಾರ ರಾತ್ರಿ ನಡೆದಿದೆ. ಕುಡಿತದ ಚಟವಿದ್ದ ಪತಿಯೇ ಈಕೆಯನ್ನು ಕೊಲೆ ಮಾಡಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.
ಸರ್ವೆ ಸೇತುವೆ ಬಳಿ ನಿವಾಸಿ ಮಡಂಕಿ ಎಂಬವರ ಪತ್ನಿ ಜಾನಕಿ (40) ಮೃತರು. ಪತಿ ಮಡಂಕಿ ಪ್ರತಿದಿನ ಕುಡಿದು ಬಂದು ಹಿಂಸೆ ನೀಡುತ್ತಿದ್ದ ಎನ್ನಲಾಗಿದ್ದು, ಶನಿವಾರ ರಾತ್ರಿ ಜಾನಕಿ, ಮೂವರು ಗಂಡು ಮಕ್ಕಳು ಹಾಗೂ ಆಕೆಯ ಮಾವ ಮನೆ ಬಾಗಿಲು ಹಾಕಿ ಮಲಗಿದ್ದರು. ರಾತ್ರಿ ಪಾನಮತ್ತನಾಗಿ ಆಗಮಿಸಿದ ಮಡಂಕಿ ಬಾಗಿಲು ತೆರೆಯುವಂತೆ ಪತ್ನಿಯನ್ನು ಕೂಗಿದ್ದು, ಸಕಾಲದಲ್ಲಿ ಆಕೆ ಬಾಗಿಲು ತೆರೆದಿಲ್ಲ ಎಂದು ಹೊರ ಭಾಗದಿಂದ ಮುಚ್ಚಿದ ಬಾಗಿಲನ್ನು ದೂಡುತ್ತಿದ್ದ. ಅದೇ ವೇಳೆಗೆ ಜಾನಕಿ ಬಾಗಿಲು ತೆರೆಯಲು ಮುಂದಾಗಿದ್ದು, ಏಕಕಾಲದಲ್ಲಿ ಬಾಗಿಲು ತೆರೆಯುವ ಮತ್ತು ದೂಡುವ ಕೆಲಸ ನಡೆದಿರುವುದರಿಂದ ರಭಸವಾಗಿ ತೆರೆದುಕೊಂಡ ಬಾಗಿಲು ಜಾನಕಿ ಹಣೆಗೆ ಬಡಿದಿತ್ತು. ಗಾಯಗೊಂಡ ಆಕೆ ಅಲ್ಲಿಯೇ ಕುಸಿದು ಬಿದ್ದಿದ್ದರು. ಬಳಿಕ ಮನೆಯವರು ಆಕೆಗೆ ನೀರು ಕುಡಿಸಿದ್ದು, ಚೇತರಿಸಿಕೊಂಡ ಬಳಿಕ ಎಲ್ಲರೂ ಮಲಗಿದ್ದರು. ಬೆಳಗ್ಗಿನ ವೇಳೆ ಜಾನಕಿ ಮಲಗಿದಲ್ಲೇ ಮೃತಪಟ್ಟಿರುವುದು ಬೆಳಕಿಗೆ ಬಂದಿದೆ.
ಮೃತ ದೇಹದ ಹಣೆ ಮತ್ತು ಕಣ್ಣಿನ ಭಾಗದಲ್ಲಿ ಗಾಯಗಳು ಕಂಡು ಬಂದಿವೆ. ಸಾವಿನ ಬಗ್ಗೆ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಗೆ ಜಾನಕಿ ಮಾವ ರಾಜು ದೂರು ನೀಡಿದ್ದು, ಸಾವಿಗೆ ಆಕೆಯ ಪತಿ ಮಡಂಕಿ ಕಾರಣ ಎಂದು ಆರೋಪಿಸಿದ್ದಾರೆ. ದೂರು ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.