ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಅಡಕೆ ಬೆಳೆಗಾರರಿಗಾಗಿ ರೈತಸಂಘ 24 ಗಂಟೆ ಉಪವಾಸ ಸತ್ಯಾಗ್ರಹ

Vishwanath S
Updated On : 22 May 2014, 11:00 am

ಮಂಗಳೂರು: ಅಡಕೆ ಬೆಳೆಗಾರರ ಪ್ರಮುಖ ಸಮಸ್ಯೆಗಳ ಪರಿಹಾರಕ್ಕೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ದ.ಕ. ಜಿಲ್ಲಾ ಘಟಕ ಮಂಗಳವಾರ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು 24 ಗಂಟೆಗಳ ಸಾಂಕೇತಿಕ ಉಪವಾಸ ಸತ್ಯಾಗ್ರಹ ಆರಂಭಿಸಿದೆ.
ಸತ್ಯಾಗ್ರಹಕ್ಕೆ ಚಾಲನೆ ನೀಡಿ ಮಾತನಾಡಿದ ರಾಜ್ಯಾಧ್ಯಕ್ಷ ಚಾಮರಾಸ ಮಾಲೀ ಪಾಟೀಲ್, ರೈತರೇ ದೇಶದ ಆಸ್ತಿಯಾಗಿದ್ದು, ರೈತರ ಹಿತವನ್ನು ಪ್ರತಿ ಸರ್ಕಾರಗಳು ಕಡೆಗಣಿಸುತ್ತಿವೆ. ಆಹಾರ ಭದ್ರತೆ ಬದಲು ರೈತರ ಭದ್ರತೆ ಕಾಪಾಡುವ ಕೆಲಸ ಆಗಬೇಕು. ರೈತರ ಹಿತಾಸಕ್ತಿ ಕಾಯುವ ಕೆಲಸದಲ್ಲಿ ರಾಜ್ಯ ಸರ್ಕಾರ ಕಾಲಹರಣ ಮಾಡಿದರೆ ವಿಧಾನಸೌಧ ಎದುರು ಹೋರಾಟ ನಡೆಸುವುದಾಗಿ ಹೇಳಿದರು.
ಬೇಡಿಕೆಗಳಿವು...
ಅಡಕೆ ಬೆಳೆಗಾರರ ಸಂಪೂರ್ಣ ಸಾಲ ಮನ್ನಾ ಮಾಡಬೇಕು, ಬಲಾತ್ಕಾರ ವಸೂಲಿ ನಿಲ್ಲಿಸಬೇಕು. ಅಡಕೆ ಕೊಳೆರೋಗಕ್ಕೆ ಬಿಡುಗಡೆ ಮಾಡಿದ ರು. 175 ಕೋಟಿ ಪರಿಹಾರ ರೈತರಿಗೆ ನೇರವಾಗಿ ನೀಡಬೇಕು. ಅಡಕೆ ಅಭಿವೃದ್ಧಿ ಮಂಡಳಿ ಸ್ಥಾಪಿಸಬೇಕು. ಮಂಗಳೂರಿನಿಂದ ಸೋಲೂರು ವರೆಗೆ ಎಚ್‌ಪಿಸಿಎಲ್ ಪೈಪ್‌ಲೈನ್ ಹಾಗೂ ಪಂಪ್‌ಹೌಸ್‌ನ್ನು ಜನವಸತಿ ಹಾಗೂ ಕೃಷಿಯೇತರ ಪ್ರದೇಶಕ್ಕೆ ವರ್ಗಾಯಿಸಬೇಕು. ಕಸ್ತೂರಿರಂಗನ್ ವರದಿ ಅನುಷ್ಠಾನ ವೇಳೆ ರೈತರ ಬದುಕಿಗೆ ತೊಂದರೆಯಾಗದಂತೆ ರೈತರ ಸಮಿತಿ ರಚಿಸಿ ಅದರ ಶಿಫಾರಸಿನಂತೆ ಕ್ರಮ ಕೈಗೊಳ್ಳಬೇಕು. ಎತ್ತಿಹೊಳೆ ಯೋಜನೆ ಬಗ್ಗೆ ಜನರಿಗೆ ಸ್ಪಷ್ಟಪಡಿಸಿದ ಬಳಿಕ ಕಾಮಗಾರಿಗೆ ಚಾಲನೆ ನೀಡಬೇಕು. ಕಾನ, ಬಾಣೆ, ಕುಮ್ಕಿ ಹಕ್ಕುಗಳನ್ನು ತಕ್ಷಣ ಇತ್ಯರ್ಥಪಡಿಸಬೇಕು. ಹಳದಿ ಎಲೆ ರೋಗಬಾಧಿತ ಅಡಕೆ ತೋಟದ ರೈತರಿಗೆ ಪರ್ಯಾಯ ಬೆಳೆಗೆ ಎಕರೆಗೆ ಕನಿಷ್ಠ ರು. 10 ಲಕ್ಷ ನೀಡಬೇಕು. ಬಂಟ್ವಾಳ, ಬೆಳ್ತಂಗಡಿ ಹಾಗೂ ಸುಳ್ಯ ತಾಲೂಕನ್ನು 2009ರಲ್ಲಿ ಕಪ್ಪುಬೂದು ಪ್ರದೇಶ ಪಟ್ಟಿಯಿಂದ ಹೊರಗಿಟ್ಟರೂ ಪಂಪ್‌ಸೆಟ್‌ಗಳಿಗೆ ನೇರ ಸಂಪರ್ಕ ಕಲ್ಪಿಸುತ್ತಿಲ್ಲ. ರೈತರಿಗೆ 12 ಗಂಟೆ ಗುಣಮಟ್ಟದ ವಿದ್ಯುತ್ ನೀಡಬೇಕು. ಪ್ರಾಕೃತಿಕ ವಿಕೋಪದಿಂದ ಹಾನಿಯಾದ ಬೆಳೆಗೆ ಹಾಗೂ ಕೃಷಿಗೆ ವೈಜ್ಞಾನಿಕ ಪರಿಹಾರ ನೀಡಬೇಕು, ವಿಮೆ ನೀಡಬೇಕು. ಕಾಡು ಪ್ರಾಣಿಯಿಂದ ಅಪಾರ ಕೃಷಿ ಹಾಗೂ ಬೆಳೆ ಹಾನಿಗೆ ಅರಣ್ಯ ಇಲಾಖೆ ಮತ್ತು ಗ್ರಾಮಸ್ಥರ ಜಂಟಿ ಸಮಿತಿ ರಚಿಸಿ ಪರಿಹಾರಕ್ಕೆ ಯೋಜನೆ ರೂಪಿಸಬೇಕು. ರೈತರು ಹಣಕಾಸು ಸಂಸ್ಥೆಗಳಲ್ಲಿ ಠೇವಣಿ ಇಟ್ಟಿದ್ದರೆ ಸರ್ಕಾರದಿಂದ ರಿಯಾಯ್ತಿ ಹಿಂಪಡೆಯಬೇಕು. ರೈತರಿಗೆ ಕನಿಷ್ಠ ರು. 5 ಸಾವಿರ ಮಾಸಿಕ ಪಿಂಚಣಿ ನೀಡಬೇಕು. ಅಡಕೆ ಉತ್ಪಾದನಾ ವೆಚ್ಚದ ಕನಿಷ್ಠ  ಒಂದೂವರೆ ಪಟ್ಟು ಬೆಲೆ ನಿಗದಿ ಮಾಡಬೇಕು ಇತ್ಯಾದಿ ಬೇಡಿಕೆ ಅನುಷ್ಠಾನಕ್ಕೆ ತರುವಂತೆ ಪ್ರತಿಭಟನಾಕಾರರು ಆಗ್ರಹಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement