ಜೀವಂತ ಇದ್ದಾಗಲೇ ಮರಣ ಪ್ರಮಾಣ ಪತ್ರ ಪ್ರಕರಣ ತನಿಖೆಗೆ ಜಿಲ್ಲಾಡಳಿತಕ್ಕೆ ಮುಖ್ಯಮಂತ್ರಿ ಸಚಿವಾಲಯ ಪತ್ರ
ಮಂಗಳೂರು: ಮರಣ ಪ್ರಮಾಣ ಪತ್ರ ರದ್ದತಿಗೆ ಹೋರಾಡಿ, ಅದು ಆಗುವುದರೊಳಗೆ ಪ್ರಾಣ ಬಿಟ್ಟ ರಾಮಣ್ಣ ಶೆಟ್ಟಿ ಪ್ರಕರಣ ಕುರಿತು ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಸಚಿವಾಲಯ ಜಿಲ್ಲಾಧಿಕಾರಿಗೆ ಸೂಚನೆ ನೀಡಿದೆ.
'ಕನ್ನಡ ಪ್ರಭ' ಪತ್ರಿಕೆಯಲ್ಲಿ ಪ್ರಕಟವಾದ ರಾಮಣ್ಣ ಶೆಟ್ಟರ ಕುಟುಂಬದ ದಯನೀಯ ಪರಿಸ್ಥಿತಿ ವಿಶೇಷ ವರದಿ ದಾರಿ ಸಂಘಟನೆ ಮೂಲಕ ಅಂತರ್ಜಾಲದಲ್ಲಿ ಸಂಚಲನ ಸೃಷ್ಟಿಸಿದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳ ಕಚೇರಿ ವರೆಗೂ ದೂರು ಹೋಗಿತ್ತು.
ಈ ಕುರಿತು ಶೀಘ್ರ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗೆ ಸಚಿವಾಲಯದಿಂದ ಪತ್ರ ಬಂದಿದೆ. ಇದೇ ಪತ್ರವನ್ನು ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂ ಜಿಲ್ಲಾ ಸಾಂಖ್ಯಿಕ ಅಧಿಕಾರಿಗೆ ಹಸ್ತಾಂತರಿಸಿದ್ದು, ಪ್ರಕರಣ ಕುರಿತು ಎಲ್ಲರ ಜತೆ ಚರ್ಚಿಸಿ ಪರಿಹಾರ ಕಂಡು ಹುಡುಕುವಂತೆ ಸೂಚಿಸಿದ್ದಾರೆ.
ಬಂಟ್ವಾಳದ ರಾಮಣ್ಣ ಶೆಟ್ಟಿ ಮುಂಬಯಿಯಲ್ಲಿ ಅಪಘಾತದಿಂದ ನೆನಪು ಶಕ್ತಿ ಕಳೆದುಕೊಂಡು ಆಶ್ರಮದಲ್ಲಿದ್ದರು. ಅವರು ಮೃತಪಟ್ಟಿದ್ದಾರೆ ಎಂದು ಸಹೋದರರು ಮತ್ತು ಅಳಿಯ ಬಂಟ್ವಾಳದಲ್ಲಿ ಮರಣ ಪ್ರಮಾಣ ಪತ್ರ ಮಾಡಿಸಿ, ಆಸ್ತಿ ತಮ್ಮ ಹೆಸರಿಗೆ ಬರೆಸಿಕೊಂಡಿದ್ದರು. ರಾಮಣ್ಣ ಶೆಟ್ಟರ ಪತ್ನಿ, ಮಕ್ಕಳನ್ನು ಮನೆಯಿಂದ ಹೊರ ಹಾಕಿದ್ದರು.
ಬುದ್ಧಿ ತಿಳಿದು ಊರಿಗೆ ಬಂದ ರಾಮಣ್ಣ ಶೆಟ್ಟರು ತನ್ನ ಮಗಳಿಗೆ ಮದುವೆ ಮಾಡಲು ಸಾಲ ಪಡೆಯಲು ಬ್ಯಾಂಕ್‌ಗೆ ದಾಖಲೆ ನೀಡುವಾಗ ತಮ್ಮ ಆಸ್ತಿ ಸಹೋದರ ಪಾಲಾಗಿರುವುದು ತಿಳಿದು ಬಂದಿತ್ತು. ಇದೇ ಚಿಂತೆಯಲ್ಲಿ ಡೆತ್ ಸರ್ಟಿಫಿಕೆಟ್ ರದ್ದು ಮಾಡುವ ಹೋರಾಟದಲ್ಲಿ ರಾಮಣ್ಣ ತೀರಿಕೊಂಡರು. ತಂದೆ ಜಾಗ ಮಕ್ಕಳಿಗೆ ಸಿಕ್ಕಿಲ್ಲ. ಜಾಗ ಸಿಗಬೇಕಾಗದರೆ ವಂಚಿಸಿದ ಅಳಿಯ ಸಹೋದರರ ವಿರುದ್ಧ ಕೇಸ್ ಮಾಡಬೇಕು. ಅಧಿಕಾರಿಗಳು ರಾಜಿ ಮೂಲಕ ಇತ್ಯರ್ಥ ಮಾಡಲು ಯತ್ನಿಸಿದರು, ಆದರೆ ಆಸ್ತಿ ಬಿಟ್ಟುಕೊಡಬೇಕಾಗುವ ಹಿನ್ನೆಲೆಯಲ್ಲಿ ರಾಮಣ್ಣ ಶೆಟ್ಟಿ ಸಹೋದರರು ಒಪ್ಪಿಗೆ ನೀಡಿಲ್ಲ. ಹೀಗಾಗಿ ಅನಿವಾರ್ಯವಾಗಿ ಕ್ರಿಮಿನಲ್ ಕೇಸ್ ಹಾಕಬೇಕಾಗಿದೆ.
ಸಾಂಖ್ಯಿಕ ಇಲಾಖೆ ನೀಡಿದ ವರದಿ ಆಧಾರದಲ್ಲಿ ಸರ್ಕಾರವೇ ಕ್ರಿಮಿನಲ್ ಕೇಸ್ ಹಾಕಬೇಕು. ಸರ್ಕಾರ ಪರವಾಗಿ ಇರುವ ವಕೀಲರೆಂದರೆ ಸಾರ್ವಜನಿಕ ಅಭಿಯೋಜಕರು. ಅದರಂತೆ ಸಾಂಖ್ಯಿಕ ಅಧಿಕಾರಿ ಅಭಿಯೋಜಕರ ಬಳಿಗೆ ಹೋಗಿ ವಿವರಿಸಿದ್ದಾರೆ. ಆದರೆ ಅಭಿಯೋಜಕರು ತಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂದು ಸಾಗ ಹಾಕಿದ್ದಾರೆ. ಇದೀಗ ಪ್ರಕರಣ ಅಲ್ಲಿಗೆ ನಿಂತು ಬಿಟ್ಟಿದ್ದು, ಮುಂದುವರಿಸಲು ಜಿಲ್ಲಾ ಸಾಂಖ್ಯಿಕ ಅಧಿಕಾರಿ ಪ್ರಯತ್ನದಲ್ಲಿ ನಿರತರಾಗಿದ್ದಾರೆ.
ಮಾಹಿತಿ ಇಲ್ಲ: ಜಿಲ್ಲಾ ಸಾಂಖ್ಯಿಕ ಅಧಿಕಾರಿಗಳು ಕಾನೂನು ಪ್ರಕಾರ ಕ್ರಮ ಕೈಗೊಂಡು ಕೋರ್ಟ್‌ನಲ್ಲಿ ಪ್ರಕರಣ ದಾಖಲಿಸುವಂತೆ ಪಬ್ಲಿಕ್ ಪ್ರಾಸಿಕ್ಯೂಟರ್‌ಗೆ ಪತ್ರ ಬರೆದಿದ್ದಾರೆ. ಇದೀಗ ಪತ್ರಕ್ಕೆ ಉತ್ತರಿಸಿರುವ ಬಂಟ್ವಾಳ ಪಬ್ಲಿಕ್ ಪ್ರಾಸಿಕ್ಯೂಟರ್ 'ನಮಗೆ ಮಾಹಿತಿ ನೀಡಲು ಅವಕಾಶ ಇಲ್ಲ' ಎಂದಿದ್ದಾರೆ.
ವಕೀಲರ ಸೇವೆಗೆ ಚಿಂತನೆ: ಇದೀಗ ಮುಖ್ಯಮಂತ್ರಿ ಕಾರ್ಯಾಲಯದಿಂದ ಒತ್ತಡ ಬಂದಿರುವ ಹಿನ್ನೆಲೆಯಲ್ಲಿ ಪ್ರಕರಣ ಹೇಗಾದರೂ ಮುಗಿಸಬೇಕು, ಸಂತ್ರಸ್ತರಿಗೆ ನ್ಯಾಯ ಒದಗಿಸಿಕೊಡಬೇಕು ಎಂಬ ಉದ್ದೇಶದಿಂದ ಜಿಲ್ಲಾ ಸಾಂಖ್ಯಿಕ ಅಧಿಕಾರಿ ಕೆ.ಎನ್.ನಾಗೇಂದ್ರ ಅವರು, ಖಾಸಗಿ ವಕೀಲರ ಸೇವೆ ಪಡೆಯುವ ಕುರಿತು ಚಿಂತನೆ ನಡೆಸಿ ಚರ್ಚಿಸಿದ್ದಾರೆ. ಆದರೆ ಇದಕ್ಕೆ ಸರ್ಕಾರದ ಅನುಮತಿ ಬೇಕು. ಅನುಮತಿ ನೀಡುವಂತೆ ಈಗಾಗಲೇ ಪತ್ರ ಬರೆದಿದ್ದಾರೆ.
'ಡಿಸಿ ಸೂಚನೆಯಂತೆ ಸಾರ್ವಜನಿಕ ಅಭಿಯೋಜಕರ ಬಳಿ ಮಾತನಾಡಿದ್ದೇನೆ. ಅವರು ಒಲ್ಲೆ ಎಂದು ಹೇಳಿದ್ದಾರೆ. ಖಾಸಗಿ ವಕೀಲರನ್ನು ನೇಮಿಸಬಹುದೇ ಎಂಬ ಬಗ್ಗೆ ಕಾನೂನು ಅಭಿಪ್ರಾಯ ಪಡೆಯುವತ್ತ ನಿರ್ದೇಶಕರಿಗೆ ಹಣಕಾಸು ಮತ್ತು ಸಾಂಖ್ಯಿಕ ನಿರ್ದೇಶಕರಿಗೆ ಪತ್ರ ಬರೆದಿದ್ದೇವೆ. ಅಲ್ಲಿಂದ ಇನ್ನು ಉತ್ತರ ಬಂದಿಲ್ಲ. ಈ ಹಿಂದಿನ ಪತ್ರಕ್ಕೆ ಉತ್ತರ ಬಾರದೆ ಇರುವ ಕುರಿತು ಮತ್ತು ನಿಯಮ ಪಾಲಿಸದವರ ವಿರುದ್ದ ಕ್ರಮ ಕೈಗೊಳ್ಳಬೇಕು ಎಂಬುದಾಗಿ ಮತ್ತೆ ಪತ್ರ ಬರೆಯುತ್ತೇನೆ, 2-3 ದಿನದೊಳಗೆ ಕೋರ್ಟ್‌ಗೆ ಹೋಗಿ ಕೇಸ್ ದಾಖಲಿಸುವಂತೆ ಪ್ರಯತ್ನಿಸುತ್ತೇನೆ. ಒಟ್ಟಾರೆ ನೊಂದವರ ಕುಟುಂಬಕ್ಕೆ ನ್ಯಾಯ ಸಿಗಬೇಕು ಎನ್ನುವುದೇ ನಮ್ಮ ಉದ್ದೇಶ' ಎಂದು ನಾಗೇಂದ್ರ ಹೇಳುತ್ತಾರೆ.
ನ್ಯಾಯಕ್ಕೆ 'ದಾರಿ'
'ಕನ್ನಡಪ್ರಭ' ದಲ್ಲಿ ಪ್ರಕಟವಾದ ವರದಿ ಗಮನಿಸಿದ 'ದಾರಿ' ಎಂಬ ಸೇವಾ ಸಂಘಟನೆ ರಾಮಣ್ಣ ಶೆಟ್ಟಿ ಕುಟುಂಬಕ್ಕೆ ನ್ಯಾಯ ಒದಗಿಸಲು ಮುಂದಾಗಿದೆ. ಮುಖ್ಯಮಂತ್ರಿ ಗಮನಕ್ಕೂ ಹೋರಾಟ ಮೂಲಕ ತಂದಿದೆ. 'ಕನ್ನಡಪ್ರಭ' ಕೂಡಾ ಈ ಪ್ರಕರಣ ಯಾವ ಹಂತದಲ್ಲಿದೆ, ಅಧಿಕಾರಿಗಳು ಕೈಗೊಳ್ಳುತ್ತಿರುವ ಕ್ರಮಗಳ ಕುರಿತು ಸದಾ ಕಣ್ಣಿಟ್ಟು ವರದಿ ಮಾಡುತ್ತಿದೆ.
-ಜಿತೇಂದ್ರ ಕುಂದೇಶ್ವರ