ಪುಸ್ತಕ ಮಳಿಗೆಯಲ್ಲೂ ಮೋದಿ ಮೇನಿಯಾ
ಮಂಗಳೂರು: ಕನ್ನಡ, ಇಂಗ್ಲಿಷ್ನಲ್ಲಿ ಮೋದಿ ಕುರಿತ ಸಾಹಿತ್ಯಕ್ಕೆ ಇನ್ನಿಲ್ಲದ ಬೇಡಿಕೆ ಕುದುರಿದ್ದು, ಮೋದಿ ಬಗ್ಗೆ ಹೊಸ ಹೊಸ ಪುಸ್ತಕ, ಸೀಡಿ ಕೇಳಿಕೊಂಡು ಮಳಿಗೆಗಳಿಗೆ ಎಡತಾಕುತ್ತಿದ್ದಾರೆ. ಕೆಲವು ಮಳಿಗೆಗಳು ಪ್ರಮುಖ ಪುಸ್ತಕಗಳ ಸಾಲಿಗೆ ಮೋದಿ ಪುಸ್ತಕವನ್ನು ಸೇರಿಸಿ ಅನಾವರಣಗೊಳಿಸಿವೆ. ವಿರೋಧಿಗಳೂ ಸತ್ಯ ವಿಚಾರ ತಿಳಿಯಲು ಮೋದಿ ಪುಸ್ತಕ ಮೊರೆ ಹೋಗುತ್ತಿದ್ದಾರೆ.
ಚುನಾವಣೆ ಪ್ರಚಾರ, ಮಾಧ್ಯಮಗಳಲ್ಲಿ ಮೋದಿ ಮೋಡಿ, ದೇಶದಲ್ಲೇ ಮೋದಿ ಹವಾ ಇದೆಲ್ಲ ಆಗಿಹೋಗಿದೆ. ಲೋಕಸಭೆ ಚುನಾವಣೆ ಮುಗಿದು, ನರೇಂದ್ರ ಮೋದಿ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕಾರಕ್ಕೆ ಮಾತ್ರ ಬಾಕಿ ಇದೆ. ಈಗ ಏಕಾಏಕಿ ನರೇಂದ್ರ ಮೋದಿ ಪುಸ್ತಕ ಹಾಗೂ ಸೀಡಿಗೆ ಪುಸ್ತಕ ಮಳಿಗೆಗಳಲ್ಲಿ ವಿಪರೀತ ಬೇಡಿಕೆ ಬಂದುಬಿಟ್ಟಿದೆ.
ಮೋದಿ ಕವನ ಕನವರಿಕೆ: 'ನರೇಂದ್ರ ಮೋದಿ ಅವರ ಬಾಲ್ಯ ಜೀವನ ಬಗ್ಗೆ ಹೊಸ ಪುಸ್ತಕ ಬಂದಿದೆಯೇ? ಮೋದಿ ಸ್ವತಃ ಕವನ ಬರೆದಿದ್ದಾರೆ. ಆಧ್ಯಾತ್ಮಿಕ ಚೌಕಟ್ಟಿನ ಕವನ ಅದ್ಭುತವಾಗಿದೆಯಂತೆ. ಅದರ ಪ್ರತಿಯನ್ನು ಎಲ್ಲಿಂದರಾದರೂ ತರಿಸಿಕೊಡಿ ಎಂದು ಓದುಗರೊಬ್ಬರು ಪುಸ್ತಕ ಮಳಿಗೆಗೆ ದುಂಬಾಲು ಬಿದ್ದಿದ್ದಾರೆ. ಇದೇ ರೀತಿ ಮೋದಿ ಬಗ್ಗೆ ಕನ್ನಡ ಮಾತ್ರವಲ್ಲ ಇಂಗ್ಲಿಷ್ನಲ್ಲೂ ಹೊಸ ಪುಸ್ತಕವನ್ನು ಓದುಗರು ವಿಚಾರಿಸುತ್ತಲೇ ಇದ್ದಾರೆ' ಎನ್ನುತ್ತಾರೆ ಸಾಹಿತ್ಯ ಕೇಂದ್ರದ ರತ್ನಾಕರ ರಾವ್.
ಮೊನ್ನೆ ದೆಹಲಿ ವ್ಯಾಪಾರಸ್ಥರೊಬ್ಬರು ಮಂಗಳೂರಿಗೆ ಬಂದಿದ್ದರು. ವಸತಿಗೃಹದಲ್ಲಿ ಒಂದು ದಿನ ವಾಸ್ತವ್ಯ ಇದ್ದರು. 'ಮೋದಿ ಪುಸ್ತಕ ಹಿಂದಿ ಆವೃತ್ತಿ ಇದೆಯೇ' ಎಂದು ಪ್ರಶ್ನಿಸಿದರು. 'ಇಲ್ಲಿ ಇಲ್ಲ, ಹಿಂದಿ ಪುಸ್ತಕ ದೆಹಲಿಯಲ್ಲಿ ಸಿಗುವುದಿಲ್ಲವೇ' ಎಂದು ಮರುಪ್ರಶ್ನಿದರೆ, ಆತ ಹೇಳಿದ್ದು, 'ವ್ಯರ್ಥ ಸಮಯ ಕಳೆಯುವ ಬದಲು ಮೋದಿ ಪುಸ್ತಕ ಓದುವುದು ಹಿತವಲ್ಲವೇ ಎಂದಿದ'್ದ!. ಉದ್ಯಮಿಗಳನ್ನೂ ಮೋದಿ ಮೋಡಿ ಬಿಟ್ಟಿಲ್ಲ ಎನ್ನುತ್ತಾರೆ ರತ್ನಾಕರ ರಾವ್.
ಬ್ರಿಟಿಷ್ ಲೇಖಕ ಆ್ಯಂಡಿ ಮರಿನೊ ಅವರು ಮೋದಿ ಜತೆಯಲ್ಲಿ ಸುತ್ತಾಡಿ ಬರೆದ ನಮೋ ಪೊಲಿಟಿಕಲ್ ಬಯೋಗ್ರಫಿ ಆಂಗ್ಲ ಆವೃತ್ತಿಯನ್ನು 'ನರೇಂದ್ರ ಮೋದಿ ರಾಜಕೀಯ ವ್ಯಕ್ತಿ ಚಿತ' ಹೆಸರಲ್ಲಿ ಆಕಾಶವಾಣಿ ನಿವೃತ್ತ ನಿಲಯ ನಿರ್ದೇಶಕ ಡಾ.ಶಿವಾನಂದ ಬೇಕಲ್ ಕನ್ನಡಕ್ಕೆ ಅನುವಾದಿಸಿದ್ದಾರೆ. ಈ ಪುಸ್ತಕಕ್ಕೆ ಸಾಕಷ್ಟು ಬೇಡಿಕೆ ಇದೆ. ಇದಲ್ಲದೆ ಕನ್ನಡದಲ್ಲೇ ಸ್ಥಳೀಯ ಲೇಖಕರು ಸೇರಿದಂತೆ ಹಲವು ಮಂದಿ ಬರೆದ 10ಕ್ಕೂ ಅಧಿಕ ಮೋದಿ ಕುರಿತ ಪುಸ್ತಕ ಮಾರುಕಟ್ಟೆಯಲ್ಲಿದೆ.
ಸತ್ಯ ತಿಳಿಯಲು ಮೋದಿ ಪುಸ್ತಕ: ಮೋದಿ ಪುಸ್ತಕದ ಬಗ್ಗೆ ಇಲ್ಲೊದು ಅಚ್ಚರಿಯನ್ನು ನವಕರ್ನಾಟಕ ಪಬ್ಲಿಷರ್ಸ್ನ ಹರೀಶ್ ಕುಮಾರ್ ಹೇಳಿದ್ದಾರೆ. 'ಮೋದಿ ಪುಸ್ತಕವನ್ನು ಒಮ್ಮೆ ಕೊಂಡವರು ಮತ್ತೊಮ್ಮೆ ಖರೀದಿಸುತ್ತಾರೆ. ಎಲ್ಲವೂ ಮೋದಿ ಬಗೆಗಿನ ವಿಚಾರವಾದರೂ ಮತ್ತೆ ಮತ್ತೆ ಪುಸ್ತಕ ಕೊಂಡು ಓದುತ್ತಾರೆ. ಮೋದಿ ಬಗ್ಗೆ ಇಂಗ್ಲಿಷ್ನಲ್ಲಿ ಹೊಸ ಪುಸ್ತಕ ಬಂದರೆ, ಕನ್ನಡದಲ್ಲಿ ಬರುತ್ತಾ ಎಂದು ಪ್ರಶ್ನಿಸುತ್ತಾರೆ. ಅಷ್ಟರ ಮಟ್ಟಿಗೆ ಮೋದಿ ಬಗ್ಗೆ ಕುತೂಹಲ ಚುನಾವಣೆ ಬಳಿಕವೂ ಉಳಿದುಕೊಂಡಿದೆ. ಮೋದಿ ಬಗ್ಗೆ ತಪ್ಪಾಗಿ ತಿಳಿದುಕೊಂಡಿದ್ದವರು ಈಗ ಸತ್ಯ ವಿಚಾರ ತಿಳಿಯಲು ಪುಸ್ತಕ ಖರೀದಿಸುತ್ತಿದ್ದಾರೆ. ಹಾಗಾಗಿ ಮೋದಿ ಪುಸ್ತಕಗಳಿಗೆ ದಿಢೀರ್ ಬೇಡಿಕೆ ಬಂದಿದೆ. ನನ್ನ ಪ್ರಕಾರ ಭಾರತದ ರಾಜಕಾರಣದಲ್ಲಿ ಅಧಿಕಾರಕ್ಕೆ ಏರುವ ಮುನ್ನ ಇಷ್ಟೊಂದು ಪ್ರಮಾಣದಲ್ಲಿ ಪುಸ್ತಕ ವ್ಯಾಪಾರವಾದ್ದು ಇಲ್ಲ' ಎನ್ನುತ್ತಾರೆ.
ಕನ್ನಡಕ್ಕೆ ತರ್ಜುಮೆ ಭರಾಟೆ: 'ಇಂಗ್ಲಿಷ್ನಿಂದ ಕನ್ನಡಕ್ಕೆ ಮೋದಿ ಕೃತಿ ಮಾತ್ರವಲ್ಲ, ಇತರೆ ಸಾಹಿತ್ಯಗಳ ತರ್ಜುಮೆ ಎಗ್ಗಿಲ್ಲದೆ ನಡೆಯುತ್ತಿದೆ. ಶಿವ್ಖೇರಾರ ನೀವು ಗೆಲ್ಲಬಲ್ಲಿರಿ, ರೊಂಡಾ ಬೈರ್ನ್ರ ರಹಸ್ಯ, ವಿಜಯಹಾದಿ ಇತ್ಯಾದಿ ಕೃತಿಗಳು ಕನ್ನಡಕ್ಕೆ ಅನುವಾದಗೊಂಡಿವೆ. ಕನ್ನಡ ಅವತರಣಿಕೆ ಕೃತಿಗಳಿಗೆ ಬೇಡಿಕೆ ಗಮನಾರ್ಹ ಹೆಚ್ಚುತ್ತಿದೆ. ಇಂಗ್ಲಿಷ್ ಕೃತಿಗೆ ಇರುವ ಬೇಡಿಕೆ ಪರಿಗಣಿಸಿ ಅಂಥ ಪುಸ್ತಕವನ್ನು ಕನ್ನಡದಲ್ಲಿ ಹೊರತರುತ್ತೇವೆ' ಎನ್ನುತ್ತಾರೆ ಬೆಂಗಳೂರು ವಸಂತ ಪ್ರಕಾಶನದ ಮುರಳಿ.
-ಆತ್ಮಭೂಷಣ್