ಬಲ್ನಾಡು ಹಲ್ಲೆ ಪ್ರಕರಣ: ಪ್ರಮುಖ ಆರೋಪಿ ಸುಲೈಮಾನ್ ಬಂಧನ
ಪುತ್ತೂರು: ಪೂರ್ವ ದ್ವೇಷದ ಹಿನ್ನಲೆಯಲ್ಲಿ ಪುತ್ತೂರು ತಾಲೂಕಿನ ಬಲ್ನಾಡು ಗ್ರಾಮದ ವಿನಾಯಕನಗರ ನಿವಾಸಿ ಗೋಪಾಲ ಸುವರ್ಣ (44) ಮತ್ತು ಮನೆ ಮಂದಿಯ ಮೇಲೆ ಹಲ್ಲೆ ನಡೆಸಿದ ತಂಡದ ಪ್ರಮುಖ ಆರೋಪಿ ಸುಲೈ ಯಾನೆ ಸುಲೈಮಾನ್ ಎಂಬಾತನನ್ನು ಪುತ್ತೂರು ಗ್ರಾಮಾಂತರ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಇದರೊಂದಿಗೆ ಬಂಧಿತ ಹಲ್ಲೆ ಆರೋಪಿಗಳ ಸಂಖ್ಯೆ 4ಕ್ಕೆ ಏರಿದೆ.
14ರಂದು ರಾತ್ರಿ ಮಾತನಾಡಲೆಂದು ಮನೆಯಿಂದ ಹೊರಗೆ ಕರೆದು ಗೋಪಾಲ ಸುವರ್ಣ ಮೇಲೆ ಸುಮಾರು 20 ಮಂದಿಯ ತಂಡ ಹಲ್ಲೆ ನಡೆಸಿತ್ತು. ಅದನ್ನು ತಡೆಯಲು ಬಂದ ಗೋಪಾಲ ಸುವರ್ಣರ ಪತ್ನಿ ಯಶೋಧಾ ಹಾಗೂ ಅವರ ಪುತ್ರ ಮನೀಶ್ ಎಂಬವರ ಮೇಲೆಯೂ ಹಲ್ಲೆ ನಡೆಸಲಾಗಿತ್ತು. ಹಲ್ಲೆ ಬಳಿಕ ಕೇರಳದ ಕಾಸರಗೋಡಿನಲ್ಲಿ ತಲೆ ಮರೆಸಿಕೊಂಡಿದ್ದ ಎನ್ನಲಾಗಿದ್ದ ಪ್ರಮುಖ ಆರೋಪಿ ಸುಲೈಮಾನ್ನನ್ನು ಗಡಿ ಪ್ರದೇಶ ಪಾಣಾಜೆ ಬಳಿಯಲ್ಲಿನ ರೆಂಜ ಎಂಬಲ್ಲಿ ಬಂಧಿಸಲಾಗಿದೆ. ಬಂಧಿತ ಆರೋಪಿಗೆ ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿದೆ.
ಹಲ್ಲೆ ವಿವರ: ರಾತ್ರಿ ಮನೆಯಲ್ಲಿದ್ದ ವೇಳೆ ನೆರೆಮನೆಯ ರಿಕ್ಷಾ ಚಾಲಕ ಸುಲೈ ಯಾನೆ ಸುಲೈಮಾನ್ ಹೊರಗೆ ಕರೆದರು. ಅವರ ಜೊತೆಗಿದ್ದ ಸುಮಾರು 20 ಮಂದಿಯಷ್ಟಿದ್ದ ತಂಡವು ಬೀದಿದೀಪ ನಂದಿಸಿ ಬ್ಯಾಟ್, ವಿಕೆಟ್ ಹಾಗೂ ದೊಣ್ಣೆಗಳಿಂದ ಹಲ್ಲೆ ನಡೆಸಿದ್ದಾರೆ. ಮನೆಯಿಂದ ಹೊರಗೆ ಬಂದ ಪತ್ನಿ ಯಶೋಧಾ ಮತ್ತು ಪುತ್ರನ ಮೇಲೆಯೂ ಆರೋಪಿ ತಂಡ ಹಲ್ಲೆ ನಡೆಸಿದೆ ಎಂದು ಹಲ್ಲೆಗೊಳಗಾಗಿದ್ದ ಗೋಪಾಲ ಸುವರ್ಣ ಸಂಪ್ಯ ಪೊಲೀಸರಿಗೆ ದೂರು ನೀಡಿದ್ದರು.
ಪೊಲೀಸರು ಆರೋಪಿಗಳ ತಂಡದವರೆನ್ನಲಾದ ಬಲ್ನಾಡು ನಿವಾಸಿ ಅಬ್ದುಲ್ ಹಮೀದ್, ಬಪ್ಪಳಿಗೆ ನಿವಾಸಿಗಳಾದ ಇಬ್ರಾಹಿಂ ಬಾತಿಷಾ ಮತ್ತು ನವಾಜ್ ಶರೀಫ್ ಎಂಬವರನ್ನು ಕಳೆದ ಗುರುವಾರ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ನ್ಯಾಯಾಲಯ ಆ ಮೂವರು ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಿತ್ತು.
ಹಲ್ಲೆಗೆ ಖಂಡನೆ: ಹಲ್ಲೆ ಪ್ರಕರಣವನ್ನು ಪುತ್ತೂರಿನ ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಬಿಲ್ಲವ ಸಂಘ, ಮಹಿಳಾ ವೇದಿಕೆ, ಯುವ ವಾಹಿನಿ ಮತ್ತು ವಿದ್ಯಾರ್ಥಿ ಸಂಘ ಖಂಡಿಸಿದೆ. ಎಲ್ಲಾ ಆರೋಪಿಗಳನ್ನು ತಕ್ಷಣವೇ ಪತ್ತೆ ಹಚ್ಚಿ ಬಂಧಿಸಬೇಕು ಎಂದು ಸಂಘದ ಅಧ್ಯಕ್ಷ ಜಯಂತ ನಡುಬೈಲು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದ್ದಾರೆ.
ಮುಂದಿನ ದಿನಗಳಲ್ಲಿ ಬಿಲ್ಲವ ಸಮಾಜದ ಮಹಿಳೆಯರ ಮತ್ತು ಮಕ್ಕಳ ಮೇಲೆ ಇಂತಹ ದೌರ್ಜನ್ಯ ನಡೆದಲ್ಲಿ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.
ಸಂಘದ ಖಜಾಂಚಿ ಚಂದ್ರನಾಥ ಶಾಂತಿವನ, ಯುವವಾಹಿನಿ ಅಧ್ಯಕ್ಷ ಜಯಂತ ಬಾಯಾರು. ಕಾರ್ಯದರ್ಶಿ ಶಶಿಧರ ಕಿನ್ನಿಮಜಲು, ಮಹಿಳಾ ವೇದಿಕೆ ಅಧ್ಯಕ್ಷೆ ವಿಶಾಲಾಕ್ಷಿ ಬನ್ನೂರು ಮತ್ತು ವಿದ್ಯಾರ್ಥಿ ಸಂಘದ ಅಧ್ಯಕ್ಷ ಅವಿನಾಶ್ ಇದ್ದರು.