ಮೋಗವೀರ ಮುಖಂಡರ ಕೊಲೆ ಆರೋಪಿಗಳ ಸೆರೆಗೆ ಮೊಗವೀರ ಸಭಾ ಆಗ್ರಹ
ಮಂಗಳೂರು: ಉರ್ವ ಮಾರಿಯಮ್ಮ ದೇವಸ್ಥಾನ ಟ್ರಸ್ಟಿ, ಮೊಗವೀರ ಮುಖಂಡ ಗಂಗಾಧರ ಪಾಂಗಳ ಅವರನ್ನು ಅಪಘಾತ ಮೂಲಕ ಕೊಲೆ ನಡೆಸಿದ ಆರೋಪಿಗಳನನ್ನು ಬಂಧಿಸಿ ಸರಿಯಾದ ತನಿಖೆ ಮಾಡುವಲ್ಲಿ ಪೊಲೀಸರು ವಿಳಂಬ ಮಾಡುತ್ತಿದ್ದಾರೆ ಎಂದು ಏಳುಪಟ್ಣ ಮೊಗವೀರ ಸಭಾ ಆರೋಪಿಸಿದೆ.
ಗಂಗಾಧರ ಪಾಂಗಾಳ ಅವರನ್ನು ಕೊಂದ ರೀತಿಯಲ್ಲಿ ಸಮಾಜ ಇನ್ನೊಬ್ಬ ಮುಂದಾಳು ಗಂಗಾಧರ ಎಚ್. ಅವರನ್ನು ಕೊಲ್ಲುವ ಪ್ರಯತ್ನ ಕಳೆದ ವರ್ಷ ಸುರತ್ಕಲ್ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿತ್ತು. ಬೈಕ್ ಚಾಲಕ ಮೃತಪಟ್ಟು ಗಂಗಾಧರ್ ಜೀವನ್ಮರಣ ಹೋರಾಟ ನಡೆಸಿ ಬದುಕಿ ಬಂದಿದ್ದಾರೆ ಎಂದು ಸಭಾ ಅಧ್ಯಕ್ಷ ಯಶವಂತ ಮೆಂಡನ್ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.
ಕಳೆದ ವರ್ಷ ಉರ್ವ ಮಾರಿಯಮ್ಮ ದೇವಸ್ಥಾನ ಆಡಳಿತ ಮಂಡಳಿಗೆ ಮೊಕ್ತೇಸರ ಆಯ್ಕೆ ಕುರಿತು ಅದರ ಮಾತೃಸಂಸ್ಥೆ, ಮಂಗಳೂರು ಏಳುಪಟ್ಣ ಮೊಗವೀರ ಸಂಯುಕ್ತ ಸಭಾದ ಮೀಟಿಂಗ್‌ಗಳಲ್ಲಿ ಸತೀಶ್ ಬೈಕಂಪಾಡಿ ಮತ್ತು ಭಾಸ್ಕರ ಬೈಕಂಪಾಡಿ ವಿರೋಧಿಸಿ ವೈರತ್ವ ಹೊಂದಿದ್ದರು.
ಇದೀಗ ಕೊಲೆ ಪ್ರಕರಣದಲ್ಲಿ ಇಬ್ಬರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಈ ಹಿಂದೆಯೂ ಗಂಗಾಧರ ಎಚ್. ಮೇಲೆ ಅಪಘಾತ ನಡೆಸಿ ಕೊಲೆಗೆ ಯತ್ನಿಸಿದ ಪ್ರಕರಣಕ್ಕೆ ಪೊಲೀಸರು ಸಿ ರಿಪೋರ್ಟ್ ಹಾಕಿ ಪತ್ತೆಯಾಗದ ಪ್ರಕರಣ ಎಂದು ಕೈ ಬಿಟ್ಟಿದ್ದಾರೆ. ಇದೇ ಕಾರಣಕ್ಕೆ ಈ ಬಾರಿಯೂ ಹಂತಕರೂ ಅಪಘಾತ ನಡೆಸಿ ಕೊಲೆ ಮಾಡಲು ಮುಂದಾಗಿದ್ದಾರೆ.
ಎರಡೂ ಪ್ರಕರಣಗಳ ಕುರಿತು ಪೊಲೀಸರು ಸರಿಯಾಗಿತನಿಖೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಕೋಶಾಧಿಕಾರಿ ಗಂಗಾಧರ ಎಚ್., ಮುಕ್ತೇಸರ ಮನೋಹರ ಬೋಳೂರು, ಸೋಮನಾಥ ಪಾಂಗಾಳ ಇದ್ದರು.