ವಿಟ್ಲ ಅತ್ಯಾಚಾರ ಆರೋಪಿಗಳಿಗೆ ಕಸ್ಟಡಿ ಕೋರಿಕೆ: ಎಸ್ಪಿ ಶರಣಪ್ಪ
ಮಂಗಳೂರು: ವಿಟ್ಲ ಬಳಿ ಬಾಲಕಿಗೆ ಅತ್ಯಾಚಾರ ನಡೆಸಿ ತಲೆಮರೆಸಿ ಆರೋಪಿಗಳಿಬ್ಬರನ್ನು ಬಂಧಿಸಲಾಗಿದ್ದು, ಅವರನ್ನು ಹೆಚ್ಚಿನ ವಿಚಾರಣೆಗೆ ಪೊಲೀಸ್ ಕಸ್ಟಡಿ ಕೋರಲಾಗುವುದು ಎಂದು ಜಿಲ್ಲಾ ಎಸ್ಪಿ ಡಾ.ಶರಣಪ್ಪ ಹೇಳಿದ್ದಾರೆ.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಂಧಿತ ಆರೋಪಿ ಬಶೀರ್ ಬೊಬ್ಬೆಕೇರಿ ನಿವಾಸಿಯಾಗಿದ್ದು, ಟ್ರಕ್ ಚಾಲಕನಾಗಿದ್ದಾನೆ. ರಾದುಕಟ್ಟೆ ಬಶೀರ್ ಯಾನೆ ಕಡಂಬು ಬಶೀರ್ ಯಾನೆ ಅಬ್ದುಲ್ ಬಶೀರ್ ವಿರುದ್ಧ ಪುತ್ತೂರು ಗ್ರಾಮಾಂತರ, ಸುಳ್ಯ, ಉಳ್ಳಾಲ, ಕಡಬ, ಉಪ್ಪಳ ಠಾಣೆ ಸರಹದ್ದಿನಲ್ಲಿ ಸಿಲಿಂಡರ್ ಕಳವು, ಮೋಟಾರ್ ಬೈಕ್ ಕಳವು ಪ್ರಕರಣದ ಆರೋಪವಿದೆ. ರಾಜ್ಯದ ವಿವಿಧ ಕಡೆಗಳಲ್ಲಿ ತಲೆಮರೆಸಿದ್ದ ಆರೋಪಿಗಳು ಪೊಲೀಸರು ಬೆನ್ನಟ್ಟುವುದನ್ನು ತಿಳಿದು ಗುಜರಾತ್‌ಗೆ ಪಲಾಯನ ಮಾಡಿದ್ದರು.
ಅಲ್ಲಿನ ಓಖಾ ಮೆರಿನ್ ಪೊಲೀಸರಿಂದ ಇವರು ಬಂಧಿತರಾಗಿದ್ದರು. ಬಂಧಿತರನ್ನು ಬುಧವಾರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು. ಇನ್ನೋರ್ವ ಆರೋಪಿ ಜಬ್ಬಾರ್ ಎಂಬಾತ ತಲೆ ಮರೆಸಿದ್ದಾನೆ ಎಂದು ತಿಳಿಸಿದರು. ಆರೋಪಿಯನ್ನು ಪತ್ತೆ ಮಾಡಿದ ಪೊಲೀಸರಿಗೆ ಪ್ರಶಂಸಾ ಪತ್ರ ನೀಡಲಾಗುವುದು ಎಂದರು.
ಬಂಟ್ವಾಳ ಡಿವೈಎಸ್ಪಿ ಮಂಜಯ್ಯ ಉಸ್ತುವಾರಿಯಲ್ಲಿ ಎಸ್‌ಐ ರಾಘವೇಂದ್ರ, ಡಿಸಿಐಬಿ ತಂಡದ ಸಂಜೀವ, ತಾರನಾಥ, ಉದಯ ರೈ, ಬೆಳ್ತಂಗಡಿ ಠಾಣೆಯ ಪ್ರವೀಣ, ಸುಂದರರಾಜ್, ಚಾಮಯ್ಯ, ಜನಾರ್ದನ ಕಾರ್ಯಾಚರಣೆಯಲ್ಲಿದ್ದರು.
ಸುದ್ದಿಗೋಷ್ಠಿಯಲ್ಲಿ ಹೆಚ್ಚುವರಿ ಎಸ್ಪಿ ಶಿವ ಕುಮಾರ್ ಇದ್ದರು.