ದೇಶದ ಆಂತರಿಕ ವಿಮಾನ ಸಂಚಾರ ಹೆಚ್ಚಿಸಲು ಮಾತುಕತೆ: ರೋಶನ್
ಮಂಗಳೂರು: ಮಂಗಳೂರು ವಿಮಾನ ನಿಲ್ದಾಣದಿಂದ ದೇಶದ ನಾನಾ ಕಡೆ ಆಂತರಿಕ ವಿಮಾನ ಯಾನ ಸಂಚಾರ ಇನ್ನಷ್ಟು ಹೆಚ್ಚಿಸಲು ಖಾಸಗಿ ವಿಮಾನ ಯಾನ ಸಂಸ್ಥೆಗಳ ಜತೆ ಮಾತುಕತೆ ನಡೆಸುವಂತೆ ವಾರ್ತಾ ಮತ್ತು ಮೂಲಸೌಕರ್ಯ, ಹಜ್ ಸಚಿವ ರೋಶನ್ ಬೇಗ್ ಸೂಚಿಸಿದ್ದಾರೆ.
ಮಂಗಳೂರು ವಿಮಾನ ನಿಲ್ದಾಣದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಗಳ ಕುರಿತು ಸೋಮವಾರ ನಿಲ್ದಾಣ ಅಧಿಕಾರಿಗಳಿಂದ ಮಾಹಿತಿ ಪಡೆದು ಏರ್ಪೋರ್ಟ್ ನಿರ್ದೇಶಕರಿಗೆ ಸೂಚನೆ ನೀಡಿದರು. ಮಂಗಳೂರು ಬೆಂಗಳೂರು ಸೇರಿಂದಂತೆ ಕೆಲವು ಮಾರ್ಗದಲ್ಲಿ ಪ್ರಯಾಣಿಕರ ಒತ್ತಡ ಕಂಡು ಬಂದಿರುವ ಹಿನ್ನೆಲೆಯಲ್ಲಿ ಈ ಕುರಿತು ಕ್ರಮ ವಹಿಸುವಂತೆ ಸೂಚಿಸಿದರು.
ನಿಲ್ದಾಣದಿಂದ ಹೊರಬರಲು ಕೆಆರ್ಡಿಸಿಎಲ್ ಮೂಲಕ 11 ಕೋಟಿ ವೆಚ್ಚದಲ್ಲಿ ಹೊಸ ರಸ್ತೆ ನಿರ್ಮಾಣವಾಗುತ್ತಿದೆ. 1.1 ಕಿ.ಮೀ. ಉದ್ದದ ಈ ರಸ್ತೆ ನಿರ್ಮಾಣಕ್ಕೆ ಈಗಾಗಲೇ ಸಂಪೂರ್ಣ ಅನುದಾನ ಬಿಡುಗಡೆ ಮಾಡಲಾಗಿದೆ ಎಂದು ಸಚಿವ ರೋಶನ್ ಬೇಗ್ ತಿಳಿಸಿದರು.
ಈ ಸಂದರ್ಭ ಮಾತನಾಡಿದ ವಿಮಾನ ನಿಲ್ದಾಣ ನಿರ್ದೇಶಕ ರಾಧಾಕೃಷ್ಣನ್ ಈಗಾಗಲೇ 100 ಕೋಟಿ ವೆಚ್ಚದಲ್ಲಿ ನಾನಾ ಅಭಿವೃದ್ಧಿ ಕಾಮಗಾರಿಗಳು ನಿಲ್ದಾಣದಲ್ಲಿ ನಡೆಯುತ್ತಿದೆ. ವಿಮಾನ ಇಂಧನ ಮೇಲೆ ವಿಧಿಸಿರುವ ವ್ಯಾಟ್ ತೆರಿಗೆಯನ್ನು ಕಡಿಮೆ ಗೊಳಿಸಿದರೆ ಇನ್ನಷ್ಟು ವಿಮಾನ ಸಂಸ್ಥೆಗಳನ್ನು ಆಕರ್ಷಿಸಬಹುದು ಎಂದರು. ಉಪವಿಭಾಗಾಧಿಕಾರಿ ಡಾ.ಪ್ರಶಾಂತ್ ಮಾತನಾಡಿ, ವಿಮಾನ ನಿಲ್ದಾಣಕ್ಕೆ ಅಗತ್ಯವಾದ ಭೂಸ್ವಾಧೀನ ಮಾಡಲು ಈಗಾಗಲೇ ಕ್ರಮ ವಹಿಸಲಾಗಿದೆ ಎಂದರು.
ಹಜ್ ಭವನ: ಮುಂಬರುವ ಹಜ್ ಯಾತ್ರೆ ಸಿದ್ಧತೆಗಳ ಕುರಿತು ಮಾಹಿತಿ ಪಡೆದು, ನೆರವು ಕಲ್ಪಿಸುವ ಭರವಸೆ ನೀಡಿದರು. ರಾಜ್ಯ ಹಜ್ ಸಮಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶೇಖ್ ಲತೀಫ್ ಮಾತನಾಡಿ, ಮಂಗಳೂರಿಂದ ಹಜ್ಗೆ ನೇರ ವಿಮಾನ ಯಾನ ಸಂಪರ್ಕ ಕಲ್ಪಿಸಬೇಕೆಂಬ ಇಲ್ಲಿನ ಜನರ ಬೇಡಿಕೆ. ಹಜ್ ಭವನ ನಿರ್ಮಾಣಕ್ಕೆ ಜಾಗ ಗುರುತಿಸಲಾಗಿದೆ. ಈಗಾಗಲೇ ತಡೆಗೋಡಿ ನಿರ್ಮಿಸಲು ಸೂಚಿಸಲಾಗಿದೆ ಎಂದರು.
ನೆರೆಯ ಕಾಸರಗೋಡು ಜಿಲ್ಲೆಯ ಹಜ್ ಯಾತ್ರಿಕರು ಮಂಗಳೂರು ವಿಮಾನ ನಿಲ್ದಾಣ ಮೂಲಕವೇ ಸಂಚರಿಸುವಂತಾಗಲು ಈಗಾಗಲೇ ಜಿಲ್ಲಾಧಿಕಾರಿ ಕೇರಳ ಸರ್ಕಾರದೊಂದಿಗೆ ಪತ್ರ ವ್ಯವಹಾರ ನಡೆಸಿದ್ದಾರೆ ಎಂದರು.
ಸಭೆಯಲ್ಲಿ ಜಿಲ್ಲಾ ಅಲ್ಪಸಂಖ್ಯಾತ ಕಲ್ಯಾಣ ಅಧಿಕಾರಿ ಸಾಬಿರ್ ಅಹಮ್ಮದ್ ಮತ್ತಿತರರು ಇದ್ದರು.