ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಮೂರು ಅಂಗಡಿ ಭಸ್ಮ

Vishwanath S
Updated On : 28 May 2014, 12:00 pm

ಸುಬ್ರಹ್ಮಣ್ಯ: ಗುತ್ತಿಗಾರು ಪೇಟೆಯಲ್ಲಿರುವ ಬೇಕರಿಯೊಂದಕ್ಕೆ ಸೋಮವಾರ ತಡರಾತ್ರಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ನಿಂದಾಗಿ ಬೆಂಕಿ ತಗುಲಿದ್ದು, ಹಲವು ಅಂಗಡಿಗಳು ಅಗ್ನಿಗಾಹುತಿಯಾಗಿವೆ. ಸುಮಾರು ರು. 40 ಲಕ್ಷ ನಷ್ಟ ಅಂದಾಜಿಸಲಾಗಿದೆ.  ಮನೋಹರ ನಾಳ ಮತ್ತು ನವೀನ್ ಮಾಲೀಕತ್ವದ ರಾಘವೇಂದ್ರ ಬೇಕರಿಯಲ್ಲಿ ಈ ಅವಘಡ ಸಂಭವಿಸಿದೆ. ಬೆಂಕಿ ವ್ಯಾಪಿಸಿ ವಾಣಿಜ್ಯ ಸಂಕೀರ್ಣದ ಇತರ ಅಂಗಡಿ ಮಳಿಗೆಗಳು ಅಗ್ನಿಗಾಹುತಿಯಾದವು.  ಮಂಗಳವಾರ ಮುಂಜಾನೆ 2 ಗಂಟೆಗೆ ನಂದಿನಿ ಹಾಲಿನ ವಾಹನ ಬಂದಿದ್ದು, ಹಾಲಿನ ಹಣ ನೀಡಿದ ಬಳಿಕ ಬೇಕರಿ ಮಾಲೀಕರು ಮನೆಗೆ ತೆರಳಿದ್ದರು. ಬೆಳಗ್ಗೆ 5 ಗಂಟೆಗೆ ಕೆಲಸದಾಳು ಅಂಗಡಿ ತೆರೆಯಲೆಂದು ಬಂದಾಗ ಬೆಂಕಿ ತಗುಲಿದ್ದು ಬೆಳಕಿಗೆ ಬಂತು. ಬೇಕರಿ ಸುಟ್ಟುಕರಕಲಾಗಿ ರು. 20 ಲಕ್ಷ ಅಂದಾಜು ನಷ್ಟ, ಶಿವರಾಮ ದೇವರ ಪ್ರಕೃತಿ ಸ್ಟುಡಿಯೊಗೆ ರು. 4 ಲಕ್ಷ, ಫೂಟ್ವೇರ್ ಅಂಗಡಿಗೆ ರು. 2 ಲಕ್ಷ ಹಾಗೂ ವಾಣಿಜ್ಯ ಸಂಕೀರ್ಣ ಕಟ್ಟಡಕ್ಕೆ ಸೇರಿದಂತೆ ಒಟ್ಟು ರು. 40 ಲಕ್ಷ ನಷ್ಟ ಸಂಭವಿಸಿದೆ ಎಂದು ಸುಬ್ರಹ್ಮಣ್ಯ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.
ಮತಾಂತರ ಶಂಕೆ: ಪೊಲೀಸ್ ದಾಳಿ
ಬಂಟ್ವಾಳ: ಮತಾಂತರದ ಶಂಕೆಯ ಹಿನ್ನೆಲೆಯಲ್ಲಿ ಬಂಟ್ವಾಳ ಗ್ರಾಮಾಂತರ ಪೊಲೀಸರು ಸರಪಾಡಿ ಗ್ರಾ.ಪಂ. ವ್ಯಾಪ್ತಿಯ ಪೆರ್ಲ ಬಿಯಪಾದೆ ಬಡಲಾಂ ಎಂಬಲ್ಲಿನ ಮನೆಯೊಂದರ ಮೇಲೆ ದಾಳಿ ನಡೆಸಿದ ಘಟನೆ ಸೋಮವಾರ ಸಂಭವಿಸಿದೆ.
ಇಲ್ಲಿನ ವ್ಯಕ್ತಿಯೋರ್ವರು ಈ ಹಿಂದೆ ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡಿದ್ದು, ಬಳಿಕ ಅವರ ಮನೆಯಲ್ಲಿ ಪ್ರತೀವಾರ ಪ್ರಾರ್ಥನೆ ನಡೆಸುವ ಮೂಲಕ ಕ್ರೈಸ್ತ ಧರ್ಮ ಪ್ರಚಾರ ಮತ್ತು ಮತಾಂತರದ ಹುನ್ನಾರ ಇರುವುದಾಗಿ ಸ್ಥಳೀಯರು ದೂರು ನೀಡಿದ ಹಿನ್ನೆಲೆಯಲ್ಲಿ ದಾಳಿ ನಡೆಸಿ ವಿಚಾರಣೆ ನಡೆಸಿದ್ದು, ಅಲ್ಲಿ ಅಂತಹ ಯಾವುದೇ ಚಟುವಟಿಕೆಗಳು ವಿಚಾರಣೆಯ ವೇಳೆ ಕಂಡು ಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಸೂಕ್ತ ಕ್ರಮಕ್ಕೆ ವಿಹಿಂಪ ಆಗ್ರಹ: ಪೆರ್ಲಬಿಯಪಾದೆಯಲ್ಲಿ ಕ್ರೈಸ್ತ ಧರ್ಮಕ್ಕೆ ಮತಾತಂತರದ ಹುನ್ನಾರ ನಡೆಯುತ್ತಿದ್ದು, ಇದನ್ನು ವಿಶ್ವ ಹಿಂದು ಪರಿಷತ್ ತಾಲೂಕು ಸಮಿತಿ ಖಂಡಿಸಿದೆ. ಈ ಚಟುವಟಿಕೆಗಳನ್ನು ನಿಲ್ಲಿಸಲು ಪೊಲೀಸರು ತಕ್ಷಣ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ವಿಶ್ವ ಹಿಂದು ಪರಿಷತ್ನ ಬಂಟ್ವಾಳ ಪ್ರಖಂಡದ ಅಧ್ಯಕ್ಷ  ಅಶೋಕ ಶೆಟ್ಟಿ ಸರಪಾಡಿ ಆಗ್ರಹಿಸಿದ್ದಾರೆ.
ದೇವಸ್ಥಾನದಿಂದ ನಗ, ನಗದು ಕಳವು
ಉಪ್ಪಿನಂಗಡಿ: ಇಲ್ಲಿಗೆ ಸಮೀಪದ ಬೆಳ್ತಂಗಡಿ ತಾಲೂಕು ಉರುವಾಲು ಗ್ರಾಮದ ಹಲೇಜಿ ಶ್ರೀ ಮಹಾಲಿಂಗೇಶ್ವರ ದೇವಾಲಯಕ್ಕೆ ಕಳ್ಳರು ನುಗ್ಗಿ ಬೆಳ್ಳಿಯ ಆಭರಣ ಹಾಗೂ ಕಾಣಿಕೆ ಹಣವನ್ನು ಕದ್ದೊಯ್ದ ಘಟನೆ ನಡೆದಿದೆ. ದೇವಾಲಯದ ಗರ್ಭಗುಡಿಯ ಬಾಗಿಲಿನ ಹರದಂಡೆಯನ್ನು ಕಬ್ಬಿಣ ಸಲಾಕೆಯಿಂದ ತುಂಡರಿಸಿ ಒಳನುಗ್ಗಿದ ಕಳ್ಳರು ಗರ್ಭಗುಡಿಯ ಶಿವಲಿಂಗಕ್ಕೆ ಅಳವಡಿಸಲಾದ ಬೆಳ್ಳಿಯ ದೃಷ್ಟಿ ಮತ್ತು ಸುಮಾರು ಆರು ಸಾವಿರದಷ್ಟು ಕಾಣಿಕೆ ಹಣ ಕದ್ದೊಯ್ದಿದ್ದಾರೆ. ಕಳವುಗೀಡಾದ ಸೊತ್ತುಗಳ ಒಟ್ಟು ಮೌಲ್ಯ ರು. 12 ಸಾವಿರ ಎಂದು ದೇವಾಲಯದ ಕಾರ್ಯದರ್ಶಿ ಪಿ. ವಿಜಯ ಕುಮಾರ್ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.    
ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆ
ಕುಂದಾಪುರ: ಇಲ್ಲಿನ ಕರ್ಕುಂಜೆ ಗ್ರಾಮದ ಗುಡ್ಡೆಹೊಸಮನೆ ಎಂಬಲ್ಲಿ ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಮೃತರು ಬಾಬು (40), ಅವರು ಮೂಲತಃ ಕೇರಳದವರಾಗಿದ್ದು, ಪ್ರಸ್ತುತ ಮುದ್ದೂರು ಗ್ರಾಮದಲ್ಲಿ ವಾಸಿಸುತ್ತಿದ್ದರು. ಇಲ್ಲಿನ ಗುಡ್ಡೆಹೊಸಮನೆ ನಿವಾಸಿ ನಾರಾಯಣ ಶೆಟ್ಟಿ ಎಂಬವರು ಮಂಗಳವಾರ ಮಧ್ಯಾಹ್ನ 2 ಗಂಟೆಗೆ ಗೇರುಬೀಜ ಕೊಯ್ಯಲೆಂದು ಮನೆ ಎದುರಿನ ಹಾಡಿಗೆ ಹೋಗಿದ್ದು, ಅಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದು ಪತ್ತೆಯಾಯಿತು. ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೊಟೇಲ್ನಲ್ಲಿ ಬ್ಯಾಗ್ ಕಳವು: ದೂರು
ಉಡುಪಿ: ಇಲ್ಲಿನ ಹೊಟೇಲ್ವೊಂದರಲ್ಲಿ ಊಟ ಮಾಡುತ್ತಿದ್ದ ವ್ಯಕ್ತಿಯ ಬ್ಯಾಗನ್ನು ಕಳವು ಮಾಡಿ ಘಟನೆ ಸೋಮವಾರ ನಡೆದಿದೆ. ಮಲ್ಪೆಯ ಬಾಪುತೋಟದ ರವೀಂದ್ರ ಸುವರ್ಣ ಎಂಬವರು ಪತ್ನಿಯೊಂದಿಗೆ ನಗರದ ಹೊಟೇಲ್ವೊಂದರಲ್ಲಿ ಊಟ ಮಾಡಲು ಕುಳಿತಿದ್ದು, ಸ್ವಲ್ಪ ಹೊತ್ತಿನಲ್ಲಿ ನೋಡಿದಾಗ ಪಕ್ಕದಲ್ಲಿಟ್ಟಿದ್ದ ಹ್ಯಾಂಡ್ ಬ್ಯಾಗನ್ನು ಕಳವು ಮಾಡಿರುವುದು ಬೆಳಕಿಗೆ ಬಂದಿದೆ. ಕಳವಾದ ಬ್ಯಾಗಿನಲ್ಲಿ ರು. 20,000 ನಗದು, ಎಟಿಎಂ ಕಾರ್ಡ್ ಮತ್ತು ಮಕ್ಕಳ ಬಟ್ಟೆಗಳು ಇದ್ದವು ಎಂದು ಅವರು ನೀಡಿದ ದೂರಿನಂತೆನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಲಕ್ಷಾಂತರ ಮೌಲ್ಯದ ಚಿನ್ನಾಭರಣ ಕಳವು
ಉಡುಪಿ: ಇಲ್ಲಿನ ಕಾಡಬೆಟ್ಟು ವಾರ್ಡ್ನ ಮನೆಯೊಂದರಿಂದ ಲಕ್ಷಾಂತರ ರು. ಮೌಲ್ಯದ ಚಿನ್ನಾಭರಣ ಕಳ್ಳತನ ಮಾಡಲಾಗಿದೆ. ಇಲ್ಲಿನ ಕಾನ್ವೆಂಟ್ ರೋಡ್ ನಿವಾಸಿ ಸುರೇಂದ್ರ ನಾಯಕ್ ಎಂಬವರು ಮೇ 24ರಂದು ಮನೆಗೆ ಬೀಗ ಹಾಕಿ ಕಾಂಙಂಗಾಡಿಗೆ ಹೋಗಿದ್ದು, ಸೋಮವಾರ ಸಂಜೆ 5.30ಕ್ಕೆ ವಾಪಸ್ ಬಂದು ನೋಡಿದಾಗ ಕಳ್ಳತನ ಬೆಳಕಿಗೆ ಬಂದಿದೆ. ಮನೆಯ ಶಟರ್ ಬೀಗ ಮುರಿದು, ಒಳಗಿನ ಮರದ ಬಾಗಿಲನ್ನು ಒಡೆದು, ಮನೆಯ 5 ಕೋಣೆಗಳಲ್ಲಿದ್ದ ವಸ್ತುಗಳನ್ನು ಚೆಲ್ಲಾಪಿಲ್ಲಿ ಮಾಡಿ, ಕಪಾಟಿನಲ್ಲಿದ್ದ 1 ವಾಚ್ ಹಾಗೂ 8 ಗ್ರಾಂ ತೂಕದ 1 ಚಿನ್ನದ ಸರ, 6 ಗ್ರಾಂ ತೂಕದ ವೆಂಕಟರಮಣ ದೇವರ ವಜ್ರಗಳಿರುವ ಪೆಂಡೆಂಟ್, 1 ಪವನ್ ತೂಕದ 1 ಜೊತೆ ವಜ್ರದ ಕಿವಿಯೋಲೆ ಕಳವು ಮಾಡಿದ್ದಾರೆ. ಇನ್ನೂ ಹೆಚ್ಚಿನ ಚಿನ್ನಾಭರಣಗಳನ್ನು ಇಟ್ಟಿದ್ದ ಲಾಕರನ್ನು ಮುರಿಯಲು ಪ್ರಯತ್ನಿಸಿ ವಿಫಲರಾಗಿದ್ದಾರೆ. ಕಳವಾದ ಸೊತ್ತುಗಳ ಮೌಲ್ಯ ರು. 4 ಲಕ್ಷ ಎಂದು ಸುರೇಂದ್ರ ನಾಯಕ್ ನೀಡಿದ ದೂರಿನಂತೆ ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಯುವತಿಗೆ ವಂಚನೆ: ಆರೋಪಿ ಸೆರೆ
ಉಪ್ಪಿನಂಗಡಿ: ಕೊಂಬಾರು ಗ್ರಾಮದ ಕಾಯರ್ತಡ್ಕ ನಿವಾಸಿ ಯುವತಿಯನ್ನು ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಪರ್ಕ ಬೆಳೆಸಿ ಬಳಿಕ ಮದುವೆಯಾಗಲು ನಿರಾಕರಿಸಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಕಡಬ ಪೊಲೀಸರು ಬಂಧಿಸಿದ್ದಾರೆ. ನರಿಮೊಗರು ಗ್ರಾಮದ ಸರ್ವೇ ಮನೆ ನಿವಾಸಿ, ಪುತ್ತೂರಿನಲ್ಲಿ ಮೆಕ್ಯಾನಿಕ್ ಕೆಲಸ ಮಾಡುತ್ತಿದ್ದ ಶಶಿ ಯಾನೆ ಪರಮೇಶ್ವರ (31) ಬಂಧಿತ ಆರೋಪಿ. ಯುವತಿಯು ಪುತ್ತೂರಿನ ಪರ್ಲಡ್ಕದ ಖಾಸಗಿ ಕ್ಲಿನಿಕ್ನಲ್ಲಿ ಉದ್ಯೋಗಿಯಾಗಿದ್ದು, ಶಶಿ ಹಾಗೂ ಆಕೆಯ ನಡುವೆ ಕಳೆದ ಕೆಲವು ವರ್ಷಗಳ ಪ್ರೇಮವಿತ್ತು. 2010ರಲ್ಲಿ ಯುವತಿಯೊಂದಿಗೆ ದೈಹಿಕ ಸಂಪರ್ಕ ಬೆಳೆಸಿದ ಶಶಿ ಆಕೆ ಗರ್ಭಿಣಿಯಾದಾಗ ಮುಂದೆ ಮದುವೆಯಾಗುವುದಾಗಿ ನಂಬಿಸಿ ಗರ್ಭಪಾತ ಮಾಡಿಸಿದ್ದ ಎಂದು ಪೋಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಲಾಗಿದೆ. ಯುವತಿಯನ್ನು ವಂಚಿಸಿ ತಲೆಮರೆಸಿಕೊಳ್ಳಲು ಶಶಿಗೆ ಪ್ರೇರಣೆ ನೀಡಿದ್ದ ಆರೋಪದಲ್ಲಿ ಆತನ ಚಿಕ್ಕಪ್ಪ ವಿಶ್ವ ಹಾಗೂ ಸಹೋದರ ಮಹೇಶನ ವಿರುದ್ಧವೂ ಪ್ರಕರಣ ದಾಖಲಾಗಿದೆ.
ಅಪಘಾತ: ಬೈಕ್ ಸವಾರನಿಗೆ ಗಾಯ
ಉಪ್ಪಿನಂಗಡಿ: ನೆಲ್ಯಾಡಿಯ ಪೆರಿಯಶಾಂತಿ ಎಂಬಲ್ಲಿ ಬೈಕೊಂದಕ್ಕೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಮೋನಪ್ಪ ಪೂಜಾರಿ (48) ಎಂಬವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಇಚ್ಲಂಪಾಡಿಯ ಬರಮೇಲು ನಿವಾಸಿಯಾಗಿರುವ ಇವರು ಮನೆಯತ್ತ ಬೈಕ್ನಲ್ಲಿ ಸಂಚರಿಸುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ. ಘಟನೆಯಿಂದ ತನ್ನೆರಡೂ ಕಾಲುಗಳಿಗೆ ಗಂಭೀರವಾದ ಗಾಯ ಪಡೆದಿರುವ ಇವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಪುತ್ತೂರು ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಿನಿ ಲಾರಿ-ಬೈಕ್ ಡಿಕ್ಕಿ: ಸವಾರ ಸಾವು
ಮೂಲ್ಕಿ: ಮೂಲ್ಕಿ ಪೊಲೀಸ್ ಠಾಣೆ ಬಪ್ಪನಾಡು ದೇವಳ ಎದುರು ಸೋಮವಾರ ಮಧ್ಯರಾತ್ರಿ ಸಂಭವಿಸಿದ ಅಪಘಾತದಲ್ಲಿ ಯುವಕ ಸ್ಥಳದಲ್ಲೇ ಮೃತಪಟ್ಟ ಘಟನೆ ಸಂಭವಿಸಿದೆ. ಮಂಗಳೂರಿನ ಡಿವೈಎಸ್ಪಿ, ಬೆರಳಚ್ಚು ತಜ್ಞ ಹರಿಶ್ಚಂದ್ರ ಹೆಜಮಾಡಿ ಅವರ ಪುತ್ರ ರೋಶನ್ ಹೆಜಮಾಡಿ (25) ಮೃತ ಯುವಕ.
  ಸೋಮವಾರ ಮಧ್ಯರಾತ್ರಿ ಮಂಗಳೂರಿನಿಂದ ಹೆಜಮಾಡಿ ಕಡೆಗೆ ಹೋಗುತ್ತಿದ್ದ ಬುಲೆಟ್ ಬೈಕ್ಗೆ ಬಿಜಾಪುರದಿಂದ ಮಂಗಳೂರು ಕಡೆಗೆ ಬರುತ್ತಿದ್ದ ಮಿನಿ ಲಾರಿ ಅತಿ ವೇಗ ಹಾಗೂ ಅಜಾಗರೂಕತೆಯ ಚಾಲನೆಯಿಂದ ತೀರ ಬಲಬದಿಗೆ ಬಂದು ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ರೋಶನ್ ಸ್ಥಳದಲ್ಲೇ ಮೃತಪಟ್ಟರು. ರೋಶನ್ ಸ್ನೇಹಿತ ಶ್ರವಣ್ ತೀವ್ರ ಗಾಯಗೊಂಡು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದು ಮೂಲ್ಕಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ರೋಶನ್ ಮೂಲ್ಕಿಯ ಶ್ರೀ ನಾರಾಯಣ ಗುರು ಶಾಲೆ, ವಿಜಯ ಕಾಲೇಜಿನಲ್ಲಿ ಶಿಕ್ಷಣ ಪಡೆದು ನಿಟ್ಟೆಯಲ್ಲಿ ಎಂಜಿನಿಯರಿಂಗ್ ಪದವಿ ಮುಗಿಸಿ ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದು ರಜೆಯಲ್ಲಿ ಊರಿಗೆ ಬಂದಿದ್ದರು. ಗೆಳೆಯನೊಂದಿಗೆ ಮಂಗಳೂರಿಗೆ ಹೋಗಿ ರಾತ್ರಿ ಮನೆಗೆ ಹಿಂದಿರುಗುವಾಗ ಘಟನೆ ನಡೆದಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement