ಚೆಂಬು ಪರಿಸರದ ರೈತರಲ್ಲಿ ಭೂಮಿ ಕಳಕೊಳ್ಳುವ ಭೀತಿ
ಸುಳ್ಯ: ಹಲವು ವರ್ಷಗಳಿಂದ ಸುಳ್ಯ-ಮಡಿಕೇರಿ ಗಡಿ ಪ್ರದೇಶವಾದ ಚೆಂಬು, ಪೆರಾಜೆ, ಸಂಪಾಜೆ ಮೊದಲಾದ ಕಡೆಗಳಲ್ಲಿ ಜೀವನ ಸಾಗಿಸುತ್ತಿರುವ ಅನೇಕ ರೈತರಿಗೆ ಅವರ ಜಮೀನು ಅರಣ್ಯ ಇಲಾಖೆಗೆ ಸೇರಿದ್ದರಿಂದ ತೆರವುಗೊಳಿಸುವಂತೆ ಅರಣ್ಯ ಇಲಾಖೆ ನೋಟಿಸ್ ನೀಡಿದ್ದು ಗ್ರಾಮಸ್ಥರಲ್ಲಿ ಭೂಮಿ ಕಳೆದುಕೊಳ್ಳುವ ಆತಂಕ ಉಂಡಾಗಿದೆ.
ಹಿನ್ನಲೆ: 2001-02ರಲ್ಲಿ ಈ ಭಾಗದ ಹಲವು ಕುಟುಂಬಗಳಿಗೆ ಅರಣ್ಯ ಇಲಾಖೆ ನೋಟಿಸು ಜಾರಿ ಮಾಡಿ ತಾವು ವಾಸಿಸುತ್ತಿರುವ ಸ್ಥಳ ಪಟ್ಟಿಘಾಟ್ ಅರಣ್ಯಕ್ಕೆ ಸೇರಿದ್ದಾಗಿರುವುದರಿಂದ ಅದನ್ನು ಇಲಾಖೆಗೆ ಬಿಟ್ಟುಕೊಡುವಂತೆ ಸೂಚಿಸಿತ್ತು. ಆಗ ಯಾರಿಗೆಲ್ಲ ಇಲಾಖೆ ನೋಟಿಸ್ ನೀಡಿತ್ತೊ ಅವರ ಮೇಲೆ ಭೂಮಿ ಅಕ್ರಮ ಪ್ರವೇಶ ಮಾಡಿ ಮರಗಿಡಗಳನ್ನು ಕಡಿದು ಸಾಗುವಳಿ ಮಾಡುತ್ತಿರುವುದಾಗಿ ಕೇಸು ಕೂಡಾ ದಾಖಲಿಸಲಾಗಿತ್ತು.
ಅಂದು ಅರಣ್ಯ ಇಲಾಖೆ ದೂರು ದಾಖಲಿಸಿದ್ದರಿಂದ ಆ ಭಾಗದ ಕೃಷಿಕರಿಗೆ ಯಾವುದೇ ಬ್ಯಾಂಕ್ಗಳು ಸಾಲ ನೀಡುತ್ತಿರಲಿಲ್ಲ. ಬಳಿಕ ಆ ಭಾಗದ ಜನರು ಒಟ್ಟು ಸೇರಿ ಸಮಿತಿ ರಚಿಸಿಕೊಂಡು ಮಡಿಕೇರಿ ಶಾಸಕರ ನೇತೃತ್ವದಲ್ಲಿ ಸರ್ಕಾರಕ್ಕೆ ಮನವಿ ಸಲ್ಲಿಸಿ, ರೈತರ ಪರಿಸ್ಥಿತಿ ಅರ್ಥೈಸುವಲ್ಲಿ ಸಫಲರಾಗಿದ್ದರು. ಬಳಿಕ ಆ ಪ್ರಕರಣ ಅಲ್ಲಿಗೆ ಸ್ಥಗಿತಗೊಂಡಿತ್ತು.
ಇದೀಗ ಮತ್ತೆ ಅದೇ ರೈತರಿಗೆ ನೋಟಿಸ್ ಬಂದಿದ್ದು ರೈತರು ಮತ್ತೆ ಆತಂಕಕ್ಕೀಡಾಗಿದ್ದಾರೆ. ನಡುಬೆಟ್ಟು ಬೆಳ್ಯಪ್ಪ ಎಂಬವರಿಗೆ ಅರಣ್ಯ ಇಲಾಖೆಯಿಂದ ನೋಟಿಸ್ ಜಾರಿಯಾಗಿದ್ದು ಅದರಲ್ಲಿ, ತಾವು ಅರಣ್ಯ ಜಮೀನು ಒತ್ತುವರಿ ಮಾಡಿದ್ದು ಇದನ್ನು ಖಾಲಿ ಮಾಡಬೇಕು. ಖಾಲಿ ಮಾಡುವುದಿಲ್ಲವಾದರೆ 28ರಂದು ಅರಣ್ಯಾಧಿಕಾರಿಗಳ ಮುಂದೆ ಹಾಜರಾಗಿ ತಮ್ಮಲ್ಲಿ ಇರುವ ದಾಖಲೆ ಹಾಜರು ಪಡಿಸಿ, ನೋಟಿಸ್ಗೆ ಉತ್ತರ ನೀಡತಕ್ಕದ್ದು ಎಂದು ತಿಳಿಸಲಾಗಿದೆ.
ಇಂತ ನೋಟಿಸ್ ಇನ್ನೂ ಅನೇಕರಿಗೆ ಬಂದಿದ್ದು ಅವರೆಲ್ಲರೂ ಇಲಾಖೆ ಸೂಚಿಸಿದ ದಿನದಂದು ಅಧಿಕಾರಿಗಳ ಮುಂದೆ ತಮ್ಮ ದಾಖಲೆಗಳನ್ನು ಹಾಜರುಪಡಿಸಬೇಕಾಗಿದೆ.
ಜಂಟಿ ಸರ್ವೇ: ಇಲ್ಲಿ ಕಂದಾಯ ಮತ್ತು ಅರಣ್ಯದವರಿದ್ದು ಜಂಟಿ ಸರ್ವೇ ನಡೆಸಿ ಬಳಿಕ ಅವರು ಮುಂದುವರಿಯಬೇಕು. ಏಕಾಏಕಿ ಈ ರೀತಿ ನೋಟಿಸ್ ನೀಡುವುದು ಸರಿಯಲ್ಲ ಈ ಬಗ್ಗೆ ನಾವು ಮತ್ತೆ ಶಾಸಕರ ಗಮನಕ್ಕೆ ತಂದು ಮುಂದಿನ ಕ್ರಮ ಕೈಗೊಳ್ಳುವುದಾಗಿ ಊರವರು ಹೇಳುತ್ತಾರೆ.