ಮೂವರು ಅಧಿಕಾರಿಗಳ ವಿರುದ್ಧ ಹಕ್ಕುಚ್ಯುತಿ ನಿರ್ಣಯ ಅಂಗೀಕಾರ
ಬೆಳ್ತಂಗಡಿ: ತಾಲೂಕು ಪಂಚಾಯಿತಿ ಸದಸ್ಯ ಮಂಜುನಾಥ ಸಾಲಿಯಾನ್ ವಿರುದ್ಧ ಪೊಲೀಸ್ ಠಾಣೆಗೆ ದೂರು ನೀಡುವ ಮೂಲಕ ಅವರ ಹಕ್ಕುಚ್ಯುತಿಗೆ ಕಾರಣರಾದ ಕ್ಷೇತ್ರ ಶಿಕ್ಷಣಾಧಿಕಾರಿ ಸುಮಂಗಲಾ, ತಾಲೂಕು ಸರ್ಕಾರಿ ಸಂಘದ ನೌಕರರ ಸಂಘದ ಅಧ್ಯಕ್ಷ ಜಯಕೀತರ್ ಜೈನ್ ಹಾಗೂ ಎಎಸ್ಐ ಬಾಬುಗೌಡ ವಿರುದ್ಧ ಹಕ್ಕುಚ್ಯುತಿ ನಿರ್ಣಯವನ್ನು ಬೆಳ್ತಂಗಡಿ ತಾಲೂಕು ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಅಂಗೀಕರಿಸಲಾಯಿತು.
ಸಭೆಯು ಬುಧವಾರ ಅಧ್ಯಕ್ಷ ಕೇಶವ ಅವರ ಅಧ್ಯಕ್ಷತೆಯಲ್ಲಿ ತಾಪಂ ಸಭಾಭವನದಲ್ಲಿ ನಡೆಯಿತು.
ಸಭೆಯಲ್ಲಿ ತನ್ನ ಹಕ್ಕುಗಳಿಗೆ ಚ್ಯುತಿ ಉಂಟಾಗಿರುವ ಬಗ್ಗೆ ಮಂಜುನಾಥ ಸಾಲಿಯಾನ್ ವಿಷಯ ಮಂಡಿಸಿದರು. ಕಳೆದ ತಾಪಂ ಸಭೆಯಲ್ಲಿ ನಡೆದ ಘಟನೆಗಳ ಹಿನ್ನೆಲೆಯಲ್ಲಿ ತನ್ನ ವಿರುದ್ಧ ಪ್ರಕರಣ ದಾಖಲಿಸಲಾಗಿರುವ ಬಗ್ಗೆ ಪ್ರಸ್ತಾವಿಸಿದ ಅವರು ಇದಕ್ಕೆ ಕಾರಣರಾದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಮತ್ತು ಅವರ ವಿರುದ್ಧ ಖಂಡನಾ ನಿರ್ಣಯ ಕೈಗೊಳ್ಳಬೇಕೆಂದು ಒತ್ತಾಯಿಸಿದರು. ಅಧಿಕಾರಿಗಳ ವಿರುದ್ಧ ಇಂಥ ನಿರ್ಣಯ ತೆಗೆದುಕೊಳ್ಳಲು ಅವಕಾಶವಿಲ್ಲವೆಂದು ತಾಪಂ ಕಾರ್ಯನಿರ್ವಹಣಾಧಿಕಾರಿ ಮಹಾಂತೇಶ್ ಸಭೆಯ ಗಮನಕ್ಕೆ ತಂದರೂ ಅಧ್ಯಕ್ಷರು ಹಾಗೂ ಸದಸ್ಯರು ಇದನ್ನು ಅಂಗೀಕರಿಸಲೇ ಇಲ್ಲ. ನಾವು ಹೇಳಿದಂತೆ ನೀವು ನಿರ್ಣಯ ಬರೆಯಿರಿ ಎಂದು ಕಾರ್ಯನಿರ್ವಹಣಾಧಿಕಾರಿಗೆ ಸೂಚನೆ ನೀಡಿದರು. ಅದರಂತೆ ನಿರ್ಣಯ ಅಂಗೀಕರಿಸಲಾಯಿತು.
ಸರ್ಕಾರಿ ನೌಕರರ ಸಂಘದ ಸೂಚನೆಯಂತೆ ಅಧಿಕಾರಿಗಳು ಕಳೆದ ಗ್ರಾಮ ಸಭೆಗಳನ್ನು ಮತ್ತು ಕೆಡಿಪಿ ಸಭೆಯನ್ನು ಬಹಿಷ್ಕರಿಸಿದ್ದರು. ಈ ಬಗ್ಗೆ ಅಧಿಕಾರಿಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಸದಸ್ಯರು ಇಂತಹ ಅಧಿಕಾರಿಗಳಿಗೆ ಕೂಡಲೇ ನೋಟಿಸ್ ಜಾರಿ ಮಾಡಿ ಕ್ರಮಕೈಗೊಳ್ಳಬೇಕು ಎಂದು ಸದಸ್ಯರಾದ ಮಮತಾ ಶೆಟ್ಟಿ, ವಿಜಯಕುಮಾರ್ ಒತ್ತಾಯಿಸಿದರು.
ವಿರೋಧದ ನಡುವೆಯೂ ನಿರ್ಣಯ ಅಂಗೀಕಾರ: ಸರ್ಕಾರಿ ಶಾಲೆಗಳಲ್ಲಿ ಶಾಲೆ ಅವಧಿಯಲ್ಲಿ ಗ್ರಾಮಸಭೆ ನಡೆಸಲು ಅನುಮತಿ ನಿರಾಕರಿಸಿರುವ ಬಗ್ಗೆ ಮಮತಾ ಶೆಟ್ಟಿ ಸಭೆಯ ಗಮನ ಸೆಳೆದರು. ಸರ್ಕಾರಿ ಶಾಲೆಗಳಲ್ಲಿ ಗ್ರಾಮ ಸಭೆ ನಡೆಸದೆ ಮತ್ತೆಲ್ಲಿ ನಡೆಸುವುದು ಎಂದು ಹಲವು ಸದಸ್ಯರು ಪ್ರಶ್ನೆಯನ್ನು ಎತ್ತಿದರು. ಅಧಿಕಾರಿಗಳು ಅನುಮತಿ ನೀಡಲು ನಿರಾಕರಿಸಿದರು. ಆದರೆ ಪಂಚಾಯಿತಿ ಸದಸ್ಯರ ಒತ್ತಾಯದ ಮೇರೆಗೆ ಸರ್ಕಾರಿ ಶಾಲೆಗಳಲ್ಲಿ ಪಂಚಾಯಿತಿ ಮತ್ತು ಸರ್ಕಾರಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳನ್ನು ನಡೆಸಲು ಸರ್ಕಾರಿ ಶಾಲೆಗಳಲ್ಲಿ ಅವಕಾಶ ನೀಡಬೇಕೆಂಬ ನಿರ್ಣಯವನ್ನು ಅಧಿಕಾರಿಗಳ ವಿರೋಧದ ನಡುವೆಯೂ ಅಂಗೀಕರಿಸಲಾಯಿತು.
ಪರವಾನಗಿ ಇಲ್ಲದ ಖಾಸಗಿ ಬಸ್ಗಳು ತಾಲೂಕಿನ ವಿವಿಧೆಡೆ ಸಂಚರಿಸುತ್ತಿರುವ ಬಗ್ಗೆ ಸಭೆಯ ಗಮನಕ್ಕೆ ತಂದ ಮಂಜುನಾಥ ಸಾಲಿಯಾನ್ ಇಂಥ ಬಸ್ ವಿರುದ್ಧ ಕ್ರಮಗೊಳ್ಳುವಂತೆ ಆಗ್ರಹಿಸಿದರು. ತಾಲೂಕಿನ ವಿವಿಧೆಡೆ ನಡೆಯುತ್ತಿರುವ ವಿದ್ಯುತ್ ಉಪಕೇಂದ್ರಗಳ ಕಾಮಗಾರಿಗಳನ್ನು ಕೂಡಲೇ ಪೂರ್ಣಗೊಳಿಸುವಂತೆ ಸೂಚಿಸಲಾಯಿತು.
ಶಾಲೆಗಳು ಆರಂಭಗೊಳ್ಳುವ ಮೊದಲೇ ಮಕ್ಕಳಿಗೆ ವಿತರಿಸಲು ಅಗತ್ಯವಿರುವ ಪುಸ್ತಕ ಹಾಗೂ ಸಮವಸ್ತ್ರಗಳು ತಾಲೂಕು ಕೇಂದ್ರಕ್ಕೆ ಬಂದಿದ್ದು. ಇವುಗಳನ್ನು ಶಾಲೆಗಳಿಗೆ ವಿತರಿಸುವ ಕಾರ್ಯ ಮಾಡಲಾಗುತ್ತಿದೆ. ನಾಲ್ಕನೇ ತರಗತಿಯ ಇಂಗ್ಲಿಷ್ ಹಾಗೂ ಗಣಿತ ಪಠ್ಯ ಪುಸ್ತಕಗಳು ಇನ್ನಷ್ಟೇ ಬರಬೇಕಾಗಿದೆ ಎಂದು ಶಿಕ್ಷಣ ಇಲಾಖಾಧಿಕಾರಿಗಳು ಸಭೆಗೆ ತಿಳಿಸಿದರು. ಸಭೆಯಲ್ಲಿ ಉಪಾಧ್ಯಕ್ಷೆ ಗೀತಾ, ಸ್ಥಾಯಿ ಸಮಿತಿ ಅಧ್ಯಕ್ಷ ಜಯಂತ್ ಕೋಟ್ಯಾನ್, ತಾಪಂ ಸದಸ್ಯರು, ಅಧಿಕಾರಿಗಳು ಉಪಸ್ಥಿತರಿದ್ದರು.