ಅಭಯ ಮಹಾಗಣಪತಿ ಪ್ರತಿಷ್ಠಾ ವಾರ್ಷಿಕೋತ್ಸವ ಇಂದು
ಸುಬ್ರಹ್ಮಣ್ಯ: ಶ್ರೀ ಸಂಪುಟ ನರಸಿಂಹಸ್ವಾಮಿ ಮಠದ ಆಡಳಿತಕ್ಕೊಳಪಟ್ಟ ಶ್ರೀ ಅಭಯ ಮಹಾಗಣಪತಿ ದೇವಸ್ಥಾನದಲ್ಲಿ 10ನೇ ವರ್ಷದ ಪ್ರತಿಷ್ಠಾ ವಾರ್ಷಿಕೋತ್ಸವ ಶನಿವಾರ ಶ್ರೀ ವಿದ್ಯಾಪ್ರಸನ್ನ ತೀರ್ಥ ಶ್ರೀಪಾದರ ಮಾರ್ಗದರ್ಶನದಲ್ಲಿ ವಿವಿಧ ವೈದಿಕ ಧಾರ್ಮಿಕ ಕಾರ್ಯಗಳೊಂದಿಗೆ ನಡೆಯಲಿದೆ.
ನಾಡಿನ ಅತೀ ವಿಶಿಷ್ಟ ಏಕಶಿಲಾ ಮಹಾಗಣಪನಿಗೆ ಈ ನಿಮಿತ್ತ ವಿಶೇಷ ಅಲಂಕಾರ ಮತ್ತು ಪೂಜೆ ಪುನಸ್ಕಾರಗಳು, ಗಣಹೋಮ, ಅಭಿಷೇಕ, ಪಂಚಾಮೃತ ಮಹಾಭಿಷೇಕ ಮತ್ತು ಮಹಾಪೂಜೆ ನೆರವೇರಲಿದೆ.
2004ರ ಮೇ 31ರಂದು ಬೆಂಗಳೂರಿನ ಇಸ್ಕಾನ್ ಮಾದರಿಯ ವಾಸ್ತುಶೈಲಿಯಲ್ಲಿ ನಿರ್ಮಿತವಾದ ಗುಡಿಯಲ್ಲಿ ಏಷ್ಯಾದಲ್ಲೇ ಅಪೂರ್ವ 18 ಅಡಿ ಎತ್ತರದ ಏಕಶಿಲಾಗಣಪ ವಿಗ್ರಹವನ್ನು ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಶ್ರೀಗಳ ಹಿರಿತನದಲ್ಲಿ ಪ್ರತಿಷ್ಠಾಪಿಸಲಾಗಿತ್ತು.
ಮುಂದಿನ ದಿನಗಳಲ್ಲಿ ಶ್ರೀಕ್ಷೇತ್ರ ಸುಬ್ರಹ್ಮಣ್ಯಕ್ಕೆ ಬರುವ ಸಾವಿರಾರು ಭಕ್ತರ ಭಕ್ತಿ, ಶ್ರದ್ಧೆಯ ತಾಣವಾಗಿ ಗುರುತಿಸಿಕೊಂಡ ಅಭಯ ಮಹಾಗಣಪತಿ ಸನ್ನಿಧಾನ ಇಂದುಋ ನಾಡಿನಾದ್ಯಂತ ಪ್ರಸಿದ್ಧ ದೇಗುಲವಾಗಿ ಗುರುತಿಸಿಕೊಂಡಿದೆ. ಮೇ 31ರಂದು ದೇಗುಲದ ದಾನಿ ಬೆಂಗಳೂರಿನ ಕೃಷ್ಣಮೂರ್ತಿ ಅವರ ಉಪಸ್ಥಿತಿಯಲ್ಲಿ ಮಹಾಗಣಪತಿಗೆ ಮಹಾಭಿಷೇಕ, ವಿಶೇಷ ಹೂವಿನ ಅಲಂಕಾರ, ಗಣಪತಿ ಹವನ, ಮಹಾಪೂಜೆ, ರಂಗಪೂಜೆ ಮೊದಲಾದ ಕಾರ್ಯಕ್ರಮಗಳು ನಡೆಯಲಿವೆ.
2004ರ ಮೇ 31ರಂದು ಶ್ರೀ ದೇವರ ಪ್ರತಿಷ್ಠಾಕಾರ್ಯ ಮತ್ತು ಬ್ರಹ್ಮಕಲಶೋತ್ಸವ ನೆರವೇರಿತ್ತು.