ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಬಿ.ಸಿ. ರೋಡ್‌ನಲ್ಲಿ ಟ್ರಾಫಿಕ್ ಜಾಮ್: ಸಾರ್ವಜನಿಕರ ಪರದಾಟ

Rashmi Kasaragodu
Updated On : 31 May 2014, 1:13 am


ಬಂಟ್ವಾಳ: ರಾಷ್ಟ್ರೀಯ ಹೆದ್ದಾರಿ 75ರ ಬಿ.ಸಿ. ರೋಡ್‌ನಲ್ಲಿ ಶುಕ್ರವಾರ ಟ್ರಾಫಿಕ್ ಜಾಮ್‌ನಿಂದಾಗಿ ಸಾರ್ವಜನಿಕರು ಪರದಾಡುವಂತಾಯಿತು. ಬೆಳಗ್ಗಿನಿಂದಲೇ ಆರಂಭವಾದ ಟ್ರಾಫಿಕ್ ಜಾಮ್ ಸಂಜೆಯವರೆಗೂ ಮುಂದುವರಿದಿತ್ತು.
ಮದುವೆ ಸಮಾರಂಭಗಳೂ ಕೂಡ ಹೆಚ್ಚಾದ್ದರಿಂದ ವಾಹನ ದಟ್ಟಣೆಯೂ ಮಿತಿಮೀರಿತ್ತು. ಟ್ರಾಫಿಕ್ ಜಾಮ್‌ನಿಂದಾಗಿ ಬಿ.ಸಿ. ರೋಡಿನ ಮೇಲ್ಸೇತುವೆಯ ಮೂಲಕ ವಾಹನದ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತಾದರೂ ಟ್ರಾಫಿಕ್ ಜಾಮ್‌ನ ಗೋಳು ಮಾತ್ರ ತಪ್ಪಲಿಲ್ಲ. ಪೊಲೀಸರು ಹಾಗೂ ಹೋಮ್ ಗಾರ್ಡ್ ಸಿಬ್ಬಂದಿ ಟ್ರಾಫಿಕ್ ಜಾಮ್ ನಿವಾರಿಸಲು ಹರಸಾಹಸ ಪಡಬೇಕಾಯಿತು.
ಘೋತಾ ಹೊಡೆಯಿತೇ ಸೂತ್ರ: ಮೇಲ್ಸೇತುವೆಯ ಒಂದು ಭಾಗದಲ್ಲಿ ಡಿವೈಡರನ್ನು ತೆರವುಗೊಳಿಸಿ ದ್ವಿಮುಖ ಸಂಚಾರಕ್ಕೆ ಅನುವು ಮಾಡಿಕೊಡಲು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾವರು ರೂಪಿಸಿದ್ದ ಜಂಟಿ ಸೂತ್ರ ಘೋತಾ ಹೊಡೆಯುವ ಲಕ್ಷಣಗಳು ಕಂಡುಬಂದಿದೆ. ಡಿವೈಡರ್ ತೆರವುಗೊಳಿಸಿ ದ್ವಿಮುಖ ಸಂಚಾರಕ್ಕೆ ಅವಕಾಶ ಕೊಟ್ಟಿದ್ದರಿಂದ ಶುಕ್ರವಾರ ಮೇಲ್ಸೇತುವೆಯಲ್ಲೂ, ಕೆಳಗಿನ ಮುಖ್ಯ ರಸ್ತೆಯಲ್ಲೂ ಟ್ರಾಪಿಕ್ ಜಾಮ್ ಉಂಟಾಗಿದ್ದು, ಸಂಜೆಯವರೆಗೂ ಬಿ.ಸಿ. ರೋಡ್‌ನಲ್ಲಿ ಕಿಲೋ ಮೀಟರ್ ಗಟ್ಟಲೆ ವಾಹನಗಳ ಸರತಿ ಸಾಲು ಕಾಣುತಿತ್ತು.
ಸರ್ವಿಸ್ ರಸ್ತೆಯಲ್ಲಿ ಆಗಮಿಸುವ ಗ್ರಾಮೀಣ ಪ್ರದೇಶದ ಖಾಸಗಿ ಬಸ್‌ಗಳು ಬಸ್ ತಂಗುದಾಣಕ್ಕೆ ಪ್ರವೇಶಿಸುವ ವೇಳೆ ಹೆದ್ದಾರಿಯಲ್ಲಿ ಆಗಮಿಸುವ ವಾಹನಗಳಿಗೆ ತಡೆ ಉಂಟಾಗುತ್ತಿದೆ. ಜೊತೆಗೆ ಮಂಗಳೂರಿನಿಂದ ಪುತ್ತೂರು , ಧರ್ಮಸ್ಥಳ ಸಹಿತ ವಿವಿಧ ಊರುಗಳಿಗೆ ಸಂಚರಿಸುವ ಖಾಸಗಿ, ಸರ್ಕಾರಿ ಬಸ್‌ಗಳು ರಸ್ತೆಯಲ್ಲೇ ಪ್ರಯಾಣಿಕರನ್ನು ಹತ್ತಿಸುವುದು, ಇಳಿಸುವುದರಿಂದ ಟ್ರಾಫಿಕ್ ಜಾಮ್ ಹೆಚ್ಚಾಗಲು ಕಾರಣವಾಗುತ್ತಿದೆ.
ಇದೀಗ ಮೇಲ್ಸೇತುವೆಯಲ್ಲಿ ದ್ವಿಮುಖ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದ್ದು ಒಂದೆಡೆ ವಾಹನಗಳು ಎಡಕ್ಕೆ ತಿರುವು ಪಡೆದುಕೊಳ್ಳುವ ವೇಳೆ ಮತ್ತಷ್ಟು ಟ್ರಾಫಿಕ್ ಜಾಮ್ ಉಂಟಾಗುತ್ತಿದೆ. ಸದ್ಯಕ್ಕೆ ಬಿ.ಸಿ. ರೋಡ್‌ನ ಟ್ರಾಫಿಕ್ ಸಮಸ್ಯೆ ಗೋಳಿಗೆ ಯಾರಿಂದಲೂ ಪರಿಹಾರ ಸಿಗದಂತಹ ಪರಿಸ್ಥಿತಿ ಉಂಟಾಗಿದೆ.
ಬಿ.ಸಿ. ರೋಡ್‌ನಲ್ಲಿ ಅವೈಜ್ಞಾನಿಕವಾಗಿ ನಿರ್ಮಿಸಲಾದ ಮೇಲ್ಸೇತುವೆಯಿಂದಾಗಿ ಕೆಲವರಿಗೆ ಅನುಕೂಲವಾದರೆ, ಇನ್ನು ಕೆಲವರಿಗೆ ಅನಾನುಕೂಲವೂ ಆಗಿದೆ. ಜನ ಸಾಮಾನ್ಯರು ಮಾತ್ರ ದಿನನಿತ್ಯ ಟ್ರಾಫಿಕ್ ಜಾಮ್‌ನಲ್ಲಿ ಸಿಲುಕಿ ಒದ್ದಾಡುವಂತಾಗಿದೆ. ಜಿಲ್ಲಾಧಿಕಾರಿ ಹಾಗೂ ಎಸ್ಪಿಯವರು ಟ್ರಾಫಿಕ್ ಜಾಮ್ ಸಮಸ್ಯೆಯ ಬಗ್ಗೆ ಮರುಪರಿಶೀಲನೆ ಮಾಡುವುದು ಒಳಿತು ಎನ್ನುವ ಅಭಿಪ್ರಾಯ ಸಾರ್ವಜನಿಕ ವಲಯದಿಂದ ಕೇಳೀಬಂದಿದೆ.
ಪೊಲೀಸರೆಲ್ಲಾ ರಸ್ತೆಯಲ್ಲಿ: ಡಿವೈಎಸ್ಪಿ ರಶ್ಮಿ ಪರೆಡಿ, ಸಿ.ಐ ಬೆಳಿಯಪ್ಪ, ಎಸ್.ಐ ನಂದಕುಮಾರ್ ಸಹಿತ 15 ಮಂದಿ ಪೊಲೀಸ್ ಸಿಬ್ಬಂದಿ ಜೊತೆಗೆ ಹೋಮ್‌ಗಾರ್ಡ್ ಸಿಬ್ಬಂದಿಯೂ ಟ್ರಾಫಿಕ್ ಕ್ಲಿಯರ್‌ಗೆ ಸಹಕಾರ ನೀಡಿದರು. ಇವರೆಲ್ಲರೂ ಬಿಸಿಲಿನ ಧಗೆಗೆ ಒದ್ದೆಯಾಗಿದ್ದರು. ಪ್ರತೀ ಸೋಮವಾರ ನಡೆಯುತ್ತಿದ್ದ ಟ್ರಾಫಿಕ್ ಜಾಮ್ ಶುಕ್ರವಾರ ಉಂಟಾಗಿದೆ. ಬಂಟ್ವಾಳದಲ್ಲೊಂದು ಟ್ರಾಫಿಕ್ ಪೊಲೀಸ್ ಠಾಣೆಯ ಅವಶ್ಯಕತೆ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement