ಅಭಿವೃದ್ಧಿಗಾಗಿ ಮುನೇನಕೊಪ್ಪ ಆಯ್ಕೆ: ಬೊಮ್ಮಾಯಿ ಮನವಿ
ನವಲಗುಂದ: ಮಲಪ್ರಭಾ ಅಚ್ಚುಕಟ್ಟು ಪ್ರದೇಶದ ಕಾಲುವೆಗಳಿಗೆ ದುರಸ್ತಿ, ಎಸ್ಸಿಪಿಟಿಎಸ್ಪಿ ಯೋಜನೆಯಲ್ಲಿ ಎಸ್ಸಿ-ಎಸ್ಟಿ ಕಾಲನಿಗಳ ರಸ್ತೆ ಅಭಿವೃದ್ಧಿ ಹಾಗೂ ಏತ ನೀರಾವರಿ ಯೋಜನೆಗೆ ರು. 50 ಕೋಟಿ ಅನುದಾನ ಮಂಜೂರಿ ಮಾಡಿದ ಕ್ಷೇತ್ರದ ಶಾಸಕ ಶಂಕರ ಪಾಟೀಲ ಮುನೇನಕೊಪ್ಪ ಅವರನ್ನು ಆಯ್ಕೆ ಮಾಡಬೇಕೆಂದು ಜಲಸಂಪನ್ಮೂಲ ಸಚಿವ ಬಸವರಾಜ ಬೊಮ್ಮಾಯಿ ಮತದಾರರಲ್ಲಿ ವಿನಂತಿಸಿದರು. ಸೋಮವಾರ ಮಧ್ಯಾಹ್ನ ಸ್ಳಳೀಯ ವಿಧಾನಸಭಾ ಕ್ಷೇತ್ರದ ಮೊರಬ ಗ್ರಾಮದಲ್ಲಿ ಏರ್ಪಡಿಸಿದ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು. ಹಿಂದಿನ ಯಾವ ಸರ್ಕಾರಗಳೂ ಕೈಗೊಳ್ಳದಂತಹ ರೈತಪರ ಯೋಜನೆಗಳನ್ನು ಬಿಜೆಪಿ ಮಾಡಿದ್ದು, ಈ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ತರುವಲ್ಲಿ ಶಾಸಕ ಮುನೇನಕೊಪ್ಪ ಯಶಸ್ವಿಯಾಗಿದ್ದಾರೆಂದು ಹೇಳಿದರು. ಬಳಿಕ ಅಪಾರ ಸಂಖ್ಯೆಯ ಕಾರ್ಯಕರ್ತರೊಂದಿಗೆ ಮೊರಬ ಗ್ರಾಮದ ಬೀದಿಗಳಲ್ಲಿ ಪಾದಯಾತ್ರೆ ಮೂಲಕ ಮನೆ ಮನೆಗೆ ತೆರಳಿ ಮತ ಯಾಚಿಸಿದರು. ಜಿಪಂ ಉಪಾಧ್ಯಕ್ಷ ಫಕ್ಕೀರಪ್ಪ ಜಕ್ಕಪ್ಪನವರ, ತಾಪಂ ಅಧ್ಯಕ್ಷ ಮಲ್ಲನಗೌಡ ರಾಟಿಮನಿ, ತಾಲೂಕು ಬಿಜೆಪಿ ಅಧ್ಯಕ್ಷ ಶಂಕ್ರಣ್ಣ ಅವರಾಧಿ, ಜಿಪಂ ಸದಸ್ಯರಾದ ಅಡಿವೆಪ್ಪ ಮನಮಿ, ಶಾಂತಾ ನಿಡವಣಿ, ನೀರು ಬಳಕೆದಾರರ ಸಂಘದ ಸದಸ್ಯ ಶಂಕರಗೌಡ ಬಾಳನಗೌಡ್ರ, ಮಹಾದೇವಪ್ಪ ಬಾಳನಗೌಡ್ರ, ತಾಪಂ ಸದಸ್ಯೆ ಶ್ಯಾಮಲಾ ಕೆರಿಮನಿ ಉಪಸ್ಥಿತರಿದ್ದರು.
ಆರತಿ ತಟ್ಟೆಗೆ ಬೀಳುತ್ತಿಲ್ಲ ಹಣ
-ಸತೀಶ ಪಾಗಾದ
ಹುಬ್ಬಳ್ಳಿ: ಏನ್ ಎಲೆಕ್ಷನ್ನೋ ಇದು, ಆರತಿ ತಟ್ಟ್ಯಾಗ ನೂರ್ ರುಪಾಯಿ ಹಾಕಾಕು ಕಾಂಗ್ರೆಸ್ನವರು ಕಮಲದವರು ಹಿಂದ ಮುಂದ್ ನೋಡಾಕ ಹತ್ತ್ಯಾರು. ದುಡ್ಡ ಹಾಕುದಲ್ ಅಂದ್ರ ಅವರ ಮಖಕ್ಕೆ ಆರತಿ ಬೆಳಗಿದ್ರೂ ಅಷ್ಟ, ಬಿಟ್ಟರು ಅಷ್ಟ ನಾ ಏನ್ ಬರೂದಿಲ್ಲವಾ, ಬೇಕಾರ ನೀ ಹೋಗ...
ಹಿಂದೆ ಚುನಾವಣೆಗೆ ನಿಂತವರು ಓಣಿಗಳಿಗೆ ಬಂದರೆ ಇಡೀ ಓಣಿ ಹೆಂಗಳೆಯರು ನಾ ಮುಂದ ನಿ ಮುಂದ ಅಂತ ಚುನಾವಣೆಗೆ ನಿಂತವರಿಗೂ ಮತ್ತು ಲೀಡರ್ರುಗಳಿಗೆ ಆರತಿ ಎತ್ತತಿದ್ದರು. ಈ ಬಾರಿ ಚುನಾವಣೆಯಲ್ಲಿ ಅಂಥ ದೃಶ್ಯ ಕಾಣುವುದೇ ಇಲ್ಲ. ಆರತಿ ಮಾಡಿದ ಮಹಿಳೆಗೆ ಖುಷಿಯಿಂದ ತಟ್ಟೆಗೆ ಹಣ ಹಾಕಿದರೆ ಎಲ್ಲಿ ಚುನಾವಣಾ ವೀಕ್ಷಕರ ಕಣ್ಣಿಗೆ ಬಿದ್ದು ನೀತಿ ಸಂಹಿತೆ ಉಲ್ಲಂಘನೆ ಕೇಸ್ ಬುಕ್ ಮಾಡ್ತಾರೋ ಎಂದು ಹೆದರಿಕೊಂಡಿರುವ ರಾಜಕಾರಣಿಗಳು ಆರತಿ ತಟ್ಟೆಗೆ ನೋಟು ಇಡುತ್ತಿಲ್ಲ.
ಹಿಂದಕ್ಕೆ ಸರಿಯುತ್ತಿದ್ದಾರೆ: ಬಿಗಿ ಚುನಾವಣಾ ನೀತಿ ಸಂಹಿತೆಯಿಂದಾಗಿ ಓಣಿಯ ಮಧ್ಯಮ ಮತ್ತು ಕೆಳ ಮಧ್ಯಮ ವರ್ಗದ ಹೆಂಗಳೆಯರ ಆರತಿ ತಟ್ಟೆಯಲ್ಲಿ ಬೀಳಬೇಕಿರುವ ಹಣ ರಾಜಕಾರಣಿಗಳ ಜೇಬಿನಲ್ಲಿ ಭದ್ರವಾಗಿ ಉಳಿಯುತ್ತಿದ್ದರೆ, ಇತ್ತ ಮಹಿಳೆಯರು ಆರತಿ ಬಿಜಿನೆಸ್ ಡಲ್ ಆಗಿದ್ದಕ್ಕೆ ರಾಜಕಾರಣಿಗಳಿಗೆ ಆರತಿ ಎತ್ತುವ ಪರಿಪಾಠ ಬಿಟ್ಟು ಬಿಟ್ಟಿದ್ದಾರೆ. ಅಲ್ಲಲ್ಲಿ ಕೆಲವು ಮಹಿಳೆಯರು ಆರತಿ ಎತ್ತಿದರೂ ತಟ್ಟೆಗೆ ರಾಜಕಾರಣಿಗಳಿಂದ ಹಣ ಬೀಳುವುದಿಲ್ಲ ಎಂದು ಖಾತರಿಯಾದ ಮೇಲೆ ನಿಧಾನಕ್ಕೆ ಹಿಂದೆ ಸರಿಯುತ್ತಿದ್ದಾರೆ.
ಹುಬ್ಬಳ್ಳಿ-ಧಾರವಾಡ ಅವಳಿ ನಗರದಲ್ಲಂತೂ ಹೆಂಗಳೆಯರ ಆರತಿ ಎತ್ತುವಿಕೆ ಭಾರಿ ಪ್ರಮಾಣದಲ್ಲಿ ಕಡಿಮೆಯಾಗಿದ್ದು, ಕೆಲ ದಿನಗಳ ಹಿಂದೆ ಹು-ಧಾ ಸೆಂಟ್ರಲ್ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪರ ಚುನಾವಣಾ ಪ್ರಚಾರಕ್ಕೆ ಬಂದ ಕೇಂದ್ರ ಸಚಿವ ವೀರಪ್ಪ ಮೊಯ್ಲಿ ಅವರಿಗೆ ಗಿರಣಿ ಚಾಳನ ಹೆಂಗಳೆಯರು ಆರತಿ ಎತ್ತಿದ್ದಾರೆ. ಆದರೆ ನೀತಿ ಸಂಹಿತೆ ಜಾರಿಯಲ್ಲಿರುವ ಕಾರಣ ಹಣದ ಆಮಿಷದಡಿ ಪ್ರಕರಣ ದಾಖಲಾಗಬಹುದು ಎಂಬ ಹೆದರಿಕೆಯಿಂದ ಮೊಯ್ಲಿ, ಇತರ ಕಾಂಗ್ರೆಸ್ ದಿಗ್ಗಜರು ಹಣ ಹಾಕದೇ ಸುಮ್ಮನೆ ಆರತಿ ಎತ್ತಿಸಿಕೊಂಡಿದ್ದಾರೆ. ಕಾರ್ಯಕರ್ತರಿಗೆ ಊಟಕ್ಕೂ ವ್ಯವಸ್ಥೆ ಮಾಡಲಾಗದಂತಹ ಪರಿಸ್ಥಿತಿ ರಾಜಕೀಯ ಪಕ್ಷಗಳಿಗೆ ಒದಗಿದೆ. ಸಿಎಂ ಶೆಟ್ಟರ್ ಸ್ವತಃ ಈ ಮಾತನ್ನು ಹೇಳಿದ್ದು, ಚುನಾವಣಾ ಪ್ರಚಾರ ಸಭೆಯೊಂದರಲ್ಲಿ ನಾನೀಗ ಮುಖ್ಯಮಂತ್ರಿ ಮತ್ತು ಮುಂದಿನ ಸರ್ಕಾರದ ಮುಖ್ಯಮಂತ್ರಿ ಅಭ್ಯರ್ಥಿ ಆಗಿದ್ದು, ಈ ಕಾರಣಕ್ಕಾಗಿ ನಾನು ನನ್ನ ಕ್ಷೇತ್ರದಲ್ಲಿ ಪ್ರಚಾರ ಮಾಡಲಿಕ್ಕಾಗುತ್ತಿಲ್ಲ ಎನ್ನುತ್ತ ಪ್ರಚಾರ ಕಾರ್ಯದಲ್ಲಿ ತೊಡಗಿರುವ ಕಾರ್ಯಕರ್ತರಿಗೆ ಸಭೆಯಲ್ಲಿ ಒಂದು ಅನ್ನ, ಸಾರು ನೀಡಲಿಕ್ಕೆ ನಮ್ಮಿಂದ ಆಗುತ್ತಿಲ್ಲ. ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವ ಕಾರಣ ಊಟ ಕೊಡಲಾರದಂತಹ ಪರಿಸ್ಥಿತಿ ರಾಜಕೀಯ ಪಕ್ಷಗಳಿಗೆ ಬಂದಿದೆ ಎಂದು ಚುನಾವಣಾ ನೀತಿ ಸಂಹಿತೆಯ ಅನುಭವದ ತಮಗೂ ಆಗಿದೆ ಎಂದು ಹೇಳಿದ್ದರು.